ಹೊಸದಿಲ್ಲಿ: ಹಿಂದುತ್ವ ಸಿದ್ಧಾಂತವಾದಿ ವಿ ಡಿ ಸಾವರ್ಕರ್ ಅವರ “ಅಖಂಡ ಭಾರತ” ಕನಸನ್ನು ನನಸಾಗಿಸಲು ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಸವಾಲೆಸೆದಿದ್ದಾರೆ.
ಕೋಮುಗಲಭೆ ಕಂಡ ಔರಂಗಾಬಾದ್‌ನ ಛತ್ರಪತಿ ಸಂಭಾಜಿ ನಗರದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಯ ಮೊದಲ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, ಬಿಜೆಪಿ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಗುರಿಯಾಗಿಸಿ ಮಾತನಾಡಿದರು. ಪವಿತ್ರ ಕೇಸರಿ (ಧ್ವಜ) ಅವರ ಕೈಯಲ್ಲಿ ಚೆನ್ನಾಗಿ ಕಾಣುದಿಲ್ಲ ಎಂದು ಟೀಕಿಸಿದರು.
“ಸಾವರ್ಕರ್ ಅವರು ಕಠಿಣ ಜೈಲುವಾಸ ಮತ್ತು ಕಷ್ಟಗಳನ್ನು ಅನುಭವಿಸಿದ್ದು ದೇಶದ ಸ್ವಾತಂತ್ರ್ಯಕ್ಕಾಗಿಯೇ ಹೊರತು ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ಅಲ್ಲ. ನೀವು ಸಾವರ್ಕರ್ ಅವರ ‘ಅಖಂಡ ಭಾರತ’ ಕನಸನ್ನು ನನಸಾಗಿಸುವಿರಾ?” ಎಂದು ಠಾಕ್ರೆ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಇನ್ಸ್ಟಾಗ್ರಾಮ್‌ಗೆ ಕಾಲಿಟ್ಟ ವಿಜಯ್: ಕೆಲವೇ ಗಂಟೆಗಳಲ್ಲಿ 4 ಮಿಲಿಯನ್ ಗೂ ಅಧಿಕ ಫಾಲೋವರ್ಸ್
“ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯು ಸಾವರ್ಕರ್ ಮತ್ತು ಸರ್ದಾರ್ ಪಟೇಲ್ ಅವರ ಆದರ್ಶಗಳನ್ನು ಅನುಸರಿಸಬೇಕು. ಕೆಲವು ಸಮಯದ ಹಿಂದೆ, ಅಮಿತ್ ಶಾ ಅವರು ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಅವರಿಗೆ ಅವರ ಸ್ಥಾನವನ್ನು ತೋರಿಸಿ ಎಂದು ಹೇಳಿದ್ದರು. ಇದು ನನ್ನ ಸ್ಥಳ. ಆದರೆ ನೀವು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ನಲ್ಲಿರುವ ಸ್ಥಳವನ್ನು ನಮಗೆ ಯಾವಾಗ ತೋರಿಸುತ್ತೀರಿ” ಎಂದು ಹೇಳಿದರು.
ಬಿಜೆಪಿಯನ್ನು ಅವರು ‘ಭ್ರಷ್ಟ ಪಕ್ಷ’ ಎಂದು ಜರಿದರು.
“ಭಾರತೀಯ ಜನತಾ ಪಕ್ಷ ಎಂದು ಕರೆದರೆ ಅದು ಜನರಿಗೆ ಮಾಡುವ ಅವಮಾನ. ಅವರು ವಿರೋಧ ಪಕ್ಷದ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪದ ಮೇಲೆ ದಾಳಿ ಮಾಡುತ್ತಾರೆ, ಬಳಿಕ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸುತ್ತಾರೆ. ಹಾಗಾಗಿ ಭ್ರಷ್ಟ ನಾಯಕರೆಲ್ಲ ಈಗ ಬಿಜೆಪಿಯಲ್ಲಿದ್ದಾರೆ,’’ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಠಾಕ್ರೆ ಟೀಕೆ ಮಾಡಿದರು.