Advertisement

Maharashtra Govt. Formation: ಹೊಸ ಸಿಎಂಗೆ ಸಂಪೂರ್ಣ ಸಹಕಾರ ನೀಡುವೆ: ಏಕನಾಥ ಶಿಂಧೆ

03:13 AM Dec 02, 2024 | Team Udayavani |

ಮುಂಬಯಿ: “ರಾಜ್ಯದ ನೂತನ ಸಿಎಂ ಯಾರೆಂದು ನಿರ್ಧರಿಸುವುದು ಬಿಜೆಪಿ. ಅವರು ಯಾರನ್ನೇ ಸಿಎಂ ಮಾಡಿದರೂ ನನ್ನ ಸಂಪೂರ್ಣ ಬೆಂಬಲವಿರುತ್ತದೆ’.
ಹೀಗೆಂದು ಹೇಳಿದ್ದು ಮಹಾರಾಷ್ಟ್ರದ ಉಸ್ತುವಾರಿ ಸಿಎಂ ಏಕನಾಥ ಶಿಂಧೆ.

Advertisement

ಸಿಎಂ ಚರ್ಚೆ ಎದ್ದ ಬೆನ್ನಲ್ಲೇ ಹುಟ್ಟೂರಿಗೆ ತೆರಳಿದ್ದ ಶಿಂಧೆ, ರವಿವಾರ ಮೌನ ಮುರಿದು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಮಹಾಯುತಿ ಮೈತ್ರಿಕೂಟದಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಸಿಎಂ ಆಯ್ಕೆಯನ್ನು ಪ್ರಧಾನಿ ಮೋದಿ ಮತ್ತು ಸಚಿವ ಅಮಿತ್‌ ಶಾ ಅವರು ಮಾಡುತ್ತಾರೆ. ಸರಕಾರ ರಚನೆ ಕುರಿತು ಮಾತುಕತೆ ನಡೆಯುತ್ತಿದೆ. ಮೈತ್ರಿಕೂಟದ ಮೂರೂ ಪಕ್ಷಗಳ ಸಮ್ಮತಿಯೊಂದಿಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.

ಫ‌ಡ್ನವೀಸ್‌ ಹೆಸರು ಅಂತಿಮ?:
ಇದೇ ವೇಳೆ, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫ‌ಡ್ನವೀಸ್‌ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಸೋಮವಾರ ಅಥವಾ ಮಂಗಳವಾರ ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕಾಂಗ ನಾಯಕನನ್ನಾಗಿ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ರವಿವಾರ ತಿಳಿಸಿದ್ದಾರೆ. ಮಹಾಯುತಿ ಸರಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಡಿ.5ರ ಸಂಜೆ ಮುಂಬಯಿಯ ಆಜಾದ್‌ ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೂ ಭಾಗಿಯಾಗಲಿದ್ದಾರೆ ಎಂದೂ ಹೇಳಿದ್ದಾರೆ.

ಏಕನಾಥ ಶಿಂಧೆ ಪುತ್ರನಿಗೆ ಡಿಸಿಎಂ ಸ್ಥಾನ?
ಉಸ್ತುವಾರಿ ಸಿಎಂ ಏಕನಾಥ ಶಿಂಧೆ ಪುತ್ರ ಶ್ರೀಕಾಂತ್‌ ಶಿಂಧೆ ಅವರಿಗೆ ಮಹಾರಾಷ್ಟ್ರ ಡಿಸಿಎಂ ಹುದ್ದೆ ಸಿಗಲಿದೆಯೇ? ಈ ಪ್ರಶ್ನೆಗೆ ರವಿವಾರ ಏಕನಾಥ ಶಿಂಧೆ ಉತ್ತರಿಸಿದ್ದು, “ಈ ಕುರಿತು ಚರ್ಚೆಗಳು ನಡೆಯುತ್ತಿವೆ. ಆದರೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ’ ಎಂದಿದ್ದಾರೆ. ಶಿಂಧೆ ಅವರು ಸರಕಾರದಲ್ಲಿ ಪ್ರಮುಖ ಖಾತೆಗಳ ಜತೆಗೆ ತಮ್ಮ ಪುತ್ರನಿಗೆ ಡಿಸಿಎಂ ಹುದ್ದೆ ನೀಡುವಂತೆ ಪಟ್ಟು ಹಿಡಿದಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ ಬೆನ್ನಲ್ಲೇ ಈ ಸ್ಪಷ್ಟನೆ ಹೊರಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next