ನವಲಗುಂದ: ಪಟ್ಟಣದಲ್ಲಿ ನಾಳೆಯಿಂದ ಕಾಮಲಿಂಗ ದರುಶನ ನೀಡಲಿದ್ದು, ರಾಜ್ಯದ ವಿವಿಧ ಕಡೆಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ತಮ್ಮ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಹರಕೆ ಹೊರುತ್ತಾರೆ. ಹರಕೆ ತೀರಿಸುತ್ತಾರೆ.
ಸವಣೂರ ನವಾಬರ ಆಡಳಿತಾವಧಿಯಲ್ಲಿ ಸಿದ್ಧಿಪುರುಷನೊಬ್ಬ ತಪಸ್ಸಿನಲ್ಲಿ ನಿರತನಾಗಿದ್ದ. ಹೋಳಿ ಹುಣ್ಣಿಮೆಯಲ್ಲಿ ಕಾಮಣ್ಣನನ್ನು ಪ್ರತಿಷ್ಠಾಪಿಸಿ ಬಣ್ಣದಾಟ ಆಡುವ ವಿಷಯದಿಂದ ಪ್ರೇರಿತನಾದ ಈ ಸಿದ್ಧಿ ಪುರುಷ ತನ್ನ ತಪಸ್ಸಿನ ಬಲದಿಂದ ತಾನು ಒಂದು ಕಾಮಣ್ಣನ ಮೂರ್ತಿ ಸಿದ್ಧಗೊಳಿಸಬೇಕೆಂಬ ಅಪೇಕ್ಷೆಪಟ್ಟ. 99 ಬಗೆಯ ಗಿಡಮೂಲಿಕೆಗಳನ್ನು ಆಯ್ದುಕೊಂಡು ಬಂದು ಕಾಮಣ್ಣನ ಸುಂದರ ಮೂರ್ತಿ ತಯಾರಿಸಿದ. ಇನ್ನೆರಡು ಗಿಡಮೊಲಿಕೆಗಳು ದೊರೆತಿದ್ದರೆ ಈ ಕಾಮಣ್ಣನ ಮೂರ್ತಿ ಜೀವಕಳೆ ಬರುತ್ತಿತ್ತು ಎಂದೇ ಹೇಳಲಾಗುತ್ತಿದೆ.
ಸವಣೂರಿನಲ್ಲಿ ಸಿದ್ಧವಾದ ಸಿದ್ಧಿಪುರುಷನ ಈ ಅಮೂಲ್ಯ ಮೂರ್ತಿಯನ್ನು ಶತಮಾನಗಳ ಹಿಂದೆಯೇ ಯಾರು ನವಲಗುಂದಕ್ಕೆ ಕರೆ ತಂದು ಯಾರೋ ರಾಮಲಿಂಗ ಓಣಿಯಬಸವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದರಂತೆ. ಇಲ್ಲಿ ಯಾರು ತಂದರೆಂಬುದಕ್ಕೆ ದಾಖಲೆ ಇಲ್ಲ. ಅಂದಿನಿಂದ ಇಂದಿನವರೆಗೂ ಏಕಾದಶಿಯಂದು ರಾತ್ರಿ ಶ್ರೀ ರಾಮಲಿಂಗ ಕಾಮಣ್ಣ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.
ಬೇಡಿದ್ದನ್ನು ಕೊಡುವ ‘ಕಾಮ’ಧೇನು ಎಂಬ ಖ್ಯಾತಿಯಿಂದ 5 ದಿನ ಪಟ್ಟಣದಲ್ಲಿ ದೊಡ್ಡ ಜಾತ್ರೆ ಸಂಭ್ರಮ ಇರುತ್ತದೆ. ರಾಜ್ಯ, ಹೊರ ರಾಜ್ಯದಿಂದ ಲಕ್ಷಾಂತರ ಭಕ್ತರು ಆಗಮಿಸಿ ಕಾಮಣ್ಣನ ದರುಶನ ಪಡೆದು ತಮ್ಮ ಬಯಕೆ ನಿವೇದಿಸಿಕೊಳ್ಳುತ್ತಾರೆ. ಹರಕೆ ಹೊತ್ತು ಒಂದೇ ವರ್ಷದಲ್ಲಿ ಇಷ್ಟಾರ್ಥ ಈಡೇರಿಸಿಕೊಂಡು ಸಾವಿರಾರು ಭಕ್ತರು ಭಕ್ತಿಭಾವದಿಂದ ಆರಾಧಿಸುವ ವೈಶಿಷ್ಟ್ಯ ಕಂಡು ಬರುತ್ತದೆ. ಜನರು ಹರಕೆ ಸಲ್ಲಿಸುವ ವಿಧಾನ ಬೇರೆ-ಬೇರೆಯಾಗಿವೆ. ಸಂತಾನ ಹೀನರಿಗೆ ಬೆಳ್ಳಿಯ ತೊಟ್ಟಿಲು, ವಿವಾಹಕ್ಕಾಗಿ ಬೆಳ್ಳಿಯ ಬಾಸಿಂಗ, ಆರೋಗ್ಯಕ್ಕಾಗಿ ಬೆಳ್ಳಿಯ ಕುದುರೆ, ಮನೆ ಕಟ್ಟಲು ಬೆಳ್ಳಿಯ ಛತ್ರಿ, ವಿದ್ಯಾಭ್ಯಾಸಕ್ಕಾಗಿ ಬೆಳ್ಳಿಯ ಹಸ್ತ ಹೀಗೆ ವಿವಿಧ ಬಗೆಯ ಹರಕೆ ಸಲ್ಲಿಸಬೇಕೆಂಬ ನಿಯಮ ಇಲ್ಲಿದೆ. ಈ ಹರಕೆ ವಸ್ತುಗಳನ್ನು ಚಾರಿಟೇಬ್ ಸಂಸ್ಥೆಯವರೇ ನಿಗ ದಿತ ಶುಲ್ಕ ಪಡೆದು ಪೂರೈಸುತ್ತಾರೆ. ಹರಕೆ ವಸ್ತುಗಳನ್ನು ಮನೆಯಲ್ಲಿಟ್ಟು ವರ್ಷವಿಡಿ ಪೂಜಿಸಬೇಕು. ಇಷ್ಟಾರ್ಥ ಈಡೇರಿದ ನಂತರ ಕಾಮದೇವನ ದರ್ಶನ ಪಡೆದು ಪೂಜಿಸಿದ ವಸ್ತುವಿನ ಜೊತೆಗೆ ಇನ್ನೊಂದನ್ನು ಪಡೆದು ಕಾಮಣ್ಣನಿಗೆ ಸಮರ್ಪಿಸುವ ಸಂಪ್ರದಾಯ ಇದೆ.
ಪ್ರತಿವರ್ಷ ಪಟ್ಟಣದ ಹೋಳಿ ಹಬ್ಬ ಐದು ದಿನ ಬೃಹತ್ ಜಾತ್ರೆಯಂತೆ ನಡೆಯುತ್ತದೆ. ಈ ಐದು ದಿನದಲ್ಲಿ ವೇಳೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಸುಮಾರು ಎರಡು ಕಿಮೀನಷ್ಟು ಉದ್ದದ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಾರೆ.
ಭಕ್ತರಿಗೆ ಅಗತ್ಯ ವ್ಯವಸ್ಥೆ
ಈ ದಿಸೆಯಲ್ಲಿ ಶ್ರೀರಾಮಲಿಂಗ ಚಾರಿಟೇಬಲ್ ಟ್ರಸ್ಟ್ ಸಂಸ್ಥೆ, ಪುರಸಭೆ ಕಾರ್ಯಾಲಯ, ಪಟ್ಟಣದ ಜನತೆ ಕಾಮನ ದರ್ಶನಕ್ಕೆ ಬರುವ ಭಕ್ತರಿಗೆ ತಂಪು ಪಾನೀಯ, ಕುಡಿಯುವ ನೀರು, ಸುಗಮ ಸಂಚಾರಕ್ಕೆ ಒನ್‌ವೇ, ಕಿಮೀನಷ್ಟು ಪೆಂಡಾಲ್ ವ್ಯವಸ್ಥೆ ಹಾಗೂ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳ ಸೌಲಭ್ಯ ದೊರೆಯಲಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಭಕ್ತರು ಆಗಮಿಸಲಿದ್ದು ಯಾವುದೇ ತೊಂದರೆಯಾಗದಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಲಿಂಗರಾಜ ಸಿದ್ದರಾಮಶೆಟ್ಟರ ಹೇಳುತ್ತಾರೆ.
ಇಸ್ಮಾಯಿಲ್ ನದಾಫ