Advertisement

ಕುಮಟಳ್ಳಿಗೆ ಸವದಿ ಮುಖವಾಡ

10:59 AM Dec 13, 2019 | Lakshmi GovindaRaj |

ಒಲ್ಲದ ಮನಸ್ಸಿನಿಂದ ಮೊದಲ ಬಾರಿಗೆ ಉಪ ಚುನಾವಣೆ ಎದುರಿಸುತ್ತಿರುವ ಗಡಿ ಭಾಗದ ಅಥಣಿಯಲ್ಲಿ, ನೆರೆ ಸಂತ್ರಸ್ತರ ಶಾಪದ ಬಿಸಿಯ ಮಧ್ಯೆ ಮೂರು ಪಕ್ಷಗಳ ಪ್ರಮುಖ ನಾಯಕರ ಆರೋಪ-ಪ್ರತ್ಯಾರೋಪ ಪರಾಕಾಷ್ಠೆ ಮುಟ್ಟಿದೆ. ಆ ಮೂಲಕ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ತೀವ್ರ ಸ್ವರೂಪ ಪಡೆದಿದೆ. ಕಣದಲ್ಲಿ ಕಾಂಗ್ರೆಸ್‌ನ ಗಜಾನನ ಮಂಗಸೂಳಿ ಹಾಗೂ ಬಿಜೆಪಿಯಿಂದ ಮಹೇಶ ಕುಮಟಳ್ಳಿ ಸೇರಿದಂತೆ ಎಂಟು ಜನ ಅಭ್ಯರ್ಥಿಗಳಿದ್ದರೂ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ನೇರ ಪೈಪೋಟಿ ಇದೆ. ಆರೋಪದಲ್ಲಿ ಜೆಡಿಎಸ್‌ನಿಂದ ಗುರಪ್ಪ ದಾಸ್ಯಾಳ ನಾಮಪತ್ರ ಸಲ್ಲಿಸಿದ್ದು, ಭಾರೀ ಚರ್ಚೆಗೆ ಕಾರಣವಾಗಿತ್ತು.

Advertisement

ಆದರೆ ಬದಲಾದ ರಾಜಕೀಯ ಕಾರಣದಿಂದ ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸಿದ್ದ ಗುರಪ್ಪ ದಾಸ್ಯಾಳ ಕೊನೆ ಕ್ಷಣದಲ್ಲಿ ಚುನಾವಣೆಯಿಂದ ಹಿಂದೆ ಸರಿದರು. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಭೀಕರ ಪ್ರವಾಹ ಎದುರಿಸಿದ ಕೃಷ್ಣಾ ನದಿ ತೀರದ ಗ್ರಾಮಗಳ ಜನರಿಗೆ ಇನ್ನೂ ಸರಿಯಾದ ನೆಲೆ ದೊರಕಿಲ್ಲ. ಈ ಕಾರಣದಿಂದಾಗಿ ಈಗ ಅವರಿಗೆ ಚುನಾವಣೆ ಬೇಕಿರಲಿಲ್ಲ. ಮಳೆ, ನೆರೆಯಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದಕ್ಕೆ ಶಾಶ್ವತ ಸೂರು ಹಾಗೂ ಪರಿಹಾರ ಬಯಸುತ್ತಿದ್ದಾರೆ. ಆದರೆ, ಇದಾವುದರ ಬಗ್ಗೆ ರಾಜಕೀಯ ಪಕ್ಷಗಳ ನಾಯಕರಿಗೆ ಕಾಳಜಿ ಇಲ್ಲ. ಅವರ ಚಿಂತೆ ಇರುವುದು ಅಧಿಕಾರದ ಬಗ್ಗೆ ಮಾತ್ರ ಎಂಬ ಅಸಮಾಧಾನ ಕ್ಷೇತ್ರದ ಜನರಲ್ಲಿದೆ.

ಡಿಸಿಎಂಗೆ ಅಗ್ನಿಪರೀಕ್ಷೆ: ಅಧಿಕಾರ ಹಾಗೂ ಮುಂದಿನ ಅವಕಾಶಗಳಿಂದ ಸುರಕ್ಷಿತವಾಗಿರಲು ಮಹೇಶ ಕುಮಟಳ್ಳಿ ಅವರನ್ನು ಗೆಲ್ಲಿಸಿಕೊಂಡು ಬರಲೇಬೇಕಾದ ಅನಿವಾರ್ಯತೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಎದುರಾಗಿದೆ. ಕಳೆದ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಅವರು ತಮ್ಮ ಆಪ್ತ ಮಹೇಶ ಕುಮಟಳ್ಳಿಯನ್ನು ಬಿಜೆಪಿ ಅಭ್ಯರ್ಥಿ ಲಕ್ಷ್ಮಣ ಸವದಿ ವಿರುದ್ದ ಗೆಲ್ಲಿಸಿದ್ದರು. ಚುನಾವಣೆಯಲ್ಲಿ ಸೋತರೂ ಯಡಿಯೂರಪ್ಪ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ತಮ್ಮ ಪ್ರಭಾವ ತೋರಿಸಿರುವ ಸವದಿ, ಈಗ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಅವರನ್ನು ಗೆಲ್ಲಿಸುವ ಹೊಣೆ ಹೊತ್ತುಕೊಂಡಿದ್ದಾರೆ. ಈ ಕಾರಣಕ್ಕಾಗಿ ಹಗಲಿಡೀ ಕ್ಷೇತ್ರದ ಎಲ್ಲೆಡೆ ಬಿರುಸಿನ ಪ್ರಚಾರ ನಡೆಸುವ ಮೂಲಕ ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ.

ಕ್ಷೇತ್ರದಲ್ಲಿ ಸಾಕಷ್ಟು ಚಿರಪರಿಚಿತರಾಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಎಲ್ಲ ಜನ ಕೈ ಮುಗಿಯುತ್ತಾರೆ. “ಆಯಿತು ನಿಮಗೇ ಮತ ಹಾಕುತ್ತೇವೆ ಹೋಗಿ’ ಎಂದು ಹೇಳಿ ಕಳಿಸುತ್ತಾರೆ. ಇದನ್ನು ನೋಡಿದರೆ ಚುನಾವಣೆಗೆ ನಿಂತವರು ಮಹೇಶ ಕುಮಟಳ್ಳಿಯೇ ಅಥವಾ ಲಕ್ಷ್ಮಣ ಸವದಿಯೇ ಎಂಬ ಅನುಮಾನ ಮೂಡುತ್ತದೆ. ಮೊದಲು ನೀರು ಬಿಡಿಸಲಿಲ್ಲ. ನಂತರ ನೀರು ಬಂದಾಗ ನಮ್ಮ ನೆರವಿಗೆ ಬಾರದ ನಾಯಕರು ಈಗ ಮನೆ, ಮನೆಗೆ ಕೈಮುಗಿದು ಬರುತ್ತಿದ್ದಾರೆ ಎಂಬ ಆಕ್ರೋಶ ಹಾಗೂ ಅಸಮಾಧಾನ ಕ್ಷೇತ್ರದ ಜನರಲ್ಲಿದೆ. ಈ ಸಿಟ್ಟು ಇದೇ ರೀತಿ ಗಂಭೀರವಾಗಿ ಮುಂದುವರಿದರೆ ಬಿಜೆಪಿ ಅಭ್ಯರ್ಥಿಗೆ ದುಬಾರಿಯಾಗುವ ಆತಂಕ ಇದ್ದೇ ಇದೆ.

ಜಾತಿ ಲೆಕ್ಕಾಚಾರ ಹೇಗಿದೆ?: ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಅವರನ್ನು ಸಚಿವರನ್ನಾಗಿ ಮಾಡಲಾಗುವುದು. ಲಕ್ಷ್ಮಣ ಸವದಿ ಅವರು ಮೂರು ವರ್ಷ ಉಪ ಮುಖ್ಯಮಂತ್ರಿಯಾಗಿಯೇ ಮುಂದುವರಿಯುತ್ತಾರೆ ಎಂದು ಸಿಎಂ ಯಡಿಯೂರಪ್ಪ ಬಹಿರಂಗ ಸಭೆಯಲ್ಲಿ ಹೇಳಿರುವುದು ಬಿಜೆಪಿ ಮಟ್ಟಿಗೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ ಲಿಂಗಾಯತ ಸಮಾಜವನ್ನು ಗುರಿಯಾಗಿಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಈ ಮಾತು ಹೇಳಿದ್ದಾರೆ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ.

Advertisement

ಕ್ಷೇತ್ರದ ಇತಿಹಾಸ: ಕಬ್ಬಿಗೆ ಪ್ರಧಾನವಾದ ಅಥಣಿ ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ನಂತರ, ಈಗ ಬಿಜೆಪಿ ಕೋಟೆಯಾಗಿ ಪರಿವರ್ತನೆಯಾಗಿದೆ. 1957ರಿಂದ ಇದುವರೆಗೆ ಒಮ್ಮೆಯೂ ಇಲ್ಲಿ ಉಪಚುನಾವಣೆ ನಡೆದಿಲ್ಲ. 1957ರಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಶಾಸಕರಾಗಿದ್ದ ಡಿ.ಬಿ.ಪವಾರ 1962ರಿಂದ 1983ರವರೆಗೆ ಐದು ಬಾರಿ ಕಾಂಗ್ರೆಸ್‌ ಶಾಸಕರಾಗಿದ್ದರು. 1985ರಲ್ಲಿ ಕಾಂಗ್ರೆಸ್‌ ಆಳ್ವಿಕೆಗೆ ಕೊನೆ ಬಿತ್ತು. ಆಗ ಜನತಾ ಪಕ್ಷದಿಂದ ಲೀಲಾದೇವಿ ಪ್ರಸಾದ ಮೊದಲ ಬಾರಿಗೆ ಶಾಸಕರಾದರು.

1989ರ ಚುನಾವಣೆಯಲ್ಲಿ ಐ.ಎಂ.ಶೆಡಶ್ಯಾಳ ಮೂಲಕ ಕಾಂಗ್ರೆಸ್‌ ಮತ್ತೆ ಈ ಕ್ಷೇತ್ರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡರೂ, 1994ರ ಚುನಾವಣೆಯಲ್ಲಿ ಜನತಾ ದಳದಿಂದ ಸ್ಪರ್ಧೆ ಮಾಡಿದ್ದ ಲೀಲಾದೇವಿ ಪ್ರಸಾದ ಮತ್ತೆ ಶಾಸಕರಾದರು. 2004ರಲ್ಲಿ ಲಕ್ಷ್ಮಣ ಸವದಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ಬಿಜೆಪಿ ಇಲ್ಲಿ ತನ್ನ ಖಾತೆ ತೆರೆಯಿತು. ಮುಂದೆ ಎರಡು ಚುನಾವಣೆಗಳಲ್ಲಿ ಸಹ ಇದು ಬಿಜೆಪಿ ತೆಕ್ಕೆಗೆ ಬಂದಿತು. 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಮಹೇಶ ಕುಮಟಳ್ಳಿ ಮೊದಲ ಬಾರಿ ಶಾಸಕರಾದರು.

ಪ್ರಮುಖ ವಿಷಯ: ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿಗೆ ನೆರೆ ಸಂತ್ರಸ್ತರ ಆಕ್ರೋಶ ಹಾಗೂ ಪಕ್ಷಾಂತರ ವಿಷಯ ಬಹಳವಾಗಿ ಕಾಡುತ್ತಿದೆ. ಕೆಲವು ಕಡೆ ಪ್ರಚಾರದ ಸಮಯದಲ್ಲಿ ಕುಮಟಳ್ಳಿ ಅವರಿಗೆ ನೆರೆ ಸಂತ್ರಸ್ತರ ಆಕ್ರೋಶ ಎದುರಾಗಿದೆ. ಇದು ಬಿಜೆಪಿಗೆ ಸ್ವಲ್ಪ ಆತಂಕ ಉಂಟು ಮಾಡುವ ಸಂಗತಿ. ನೆರೆ ಸಂತ್ರಸ್ತರ ಸಮಸ್ಯೆ ಗಳೇ ಹೆಚ್ಚಾಗಿರುವಾಗ ರಾಜ್ಯ ಹಾಗೂ ರಾಷ್ಟ್ರೀಯ ಸಮಸ್ಯೆಗಳು ಚರ್ಚೆಗೆ ಬರುತ್ತಲೇ ಇಲ್ಲ. ಇನ್ನೊಂದೆಡೆ, ಕಾಂಗ್ರೆಸ್‌ ಅಭ್ಯರ್ಥಿ ಗಜಾನನ ಮಂಗಸೂಳಿ ಕ್ಷೇತ್ರದಲ್ಲಿ ಅಂತಹ ಪ್ರಭಾವಿ ವ್ಯಕ್ತಿ ಏನಲ್ಲ. ಜನರ ಜೊತೆ ನಿಕಟ ಸಂಪರ್ಕ ಹೊಂದಿಲ್ಲ ಎಂಬ ಅಭಿ ಪ್ರಾಯ ಕ್ಷೇತ್ರದಲ್ಲಿದೆ. ಇದೇ ಕಾರಣದಿಂದ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರು ಪ್ರಚಾರದಿಂದ ದೂರ ಉಳಿದಿದ್ದಾರೆ. ಮೇಲಾಗಿ ಅಸಮಾಧಾನಗೊಂಡಿದ್ದ ಟಿಕೆಟ್‌ ಆಕಾಂಕ್ಷಿ ಗಳು ಈ ನೋವಿನಿಂದ ಹೊರ ಬಂದಿಲ್ಲ.

ಜಾತಿವಾರು ಮತದಾರರು
ಲಿಂಗಾಯತ: 72,000
ಮುಸ್ಲಿಮರು: 30,000
ದಲಿತರು: 35,000
ಕುರುಬರು; 30,000
ಬ್ರಾಹ್ಮಣರು: 18,000

ಒಟ್ಟು ಮತದಾರರು: 2,17,974
ಪುರುಷರು: 1,12,176
ಮಹಿಳೆಯರು: 1,05,796
ಇತರರು: 02
ಹೊಸ ಮತದಾರರು: 8.696

* ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next