ಇಸ್ಲಾಮಾಬಾದ್ : ಆರ್ಥಿಕ ದೀವಾಳಿ ಅಂಚು ತಲುಪಿರುವ ಪಾಕಿಸ್ಥಾನಕ್ಕೆ ಸೌದಿ ಅರೇಬಿಯ ಜೀವದಾನದ ಆರ್ಥಿಕ ನೆರವು ನೀಡಲು ಮುಂದಾಗಿದೆ. ಪಾಕಿಸ್ಥಾನದ ಈ ಕಷ್ಟಕಾಲದಲ್ಲಿ ಅದಕ್ಕೆ ಆರು ಶತಕೋಟಿ ಡಾಲರ್ ಸಾಲದ ಪ್ಯಾಕೇಜ್ ನೀಡಲು ಸೌದಿ ಅರೇಬೀಯ ಒಪ್ಪಿದೆ.
ಅತ್ಯಂತ ತುರ್ತಿನ ರೂಪದಲ್ಲಿ ಈ ಸಾಲ ನೆರವು ಪ್ಯಾಕೇಜನ್ನು ಪಾಕಿಸ್ಥಾನಕ್ಕೆ ನೀಡಿರುವ ಸೌದಿ ಅರೇಬಿಯ, ಮುಂದೂಡಲ್ಪಟ್ಟ ಪಾವತಿ ಸೌಕರ್ಯ ಒದಗಿಸಿದೆ. ಕೈಯಲ್ಲಿ ನಗದು ಇಲ್ಲದೇ ಒದ್ದಾಡುತ್ತಿದ್ದ ನೂತನ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ಥಾನಕ್ಕೆ ಈ ನೆರವು ಜೀವದಾನದ ರೂಪದಲ್ಲಿ ದೊರಕಿದಂತಾಗಿದೆ. ಇದರಿಂದಾಗಿ ಪಾಕಿಸ್ಥಾನಕ್ಕೆ ಐಎಂಎಫ್ ನಿಂದ ಹೊಸ ಸಾಲ ಪಡೆಯುವ ತಾಕತ್ತು ಬಂದಂತಾಗಿದೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಇಂದು ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಫಲವಾಗಿ ಪಾಕಿಸ್ಥಾನಕ್ಕೆ ಒಂದು ವರ್ಷದ ಬೆಂಬಲದ ರೂಪದಲ್ಲಿ 3 ಶತಕೋಟಿ ಡಾಲರ್‌ಗಳ ವಿದೇಶೀ ಕರೆನ್ಸಿಯನ್ನು ನೀಡಲಾಗುವುದು; ಇನ್ನೂ 3 ಶತಕೋಟಿ ಡಾಲರ್ ಗಳನ್ನು ತೈಲ ಅಮದಿಗಾಗಿ ಮುಂದೂಡಲ್ಪಟ್ಟ ಪಾವತಿ ನೆಲೆಯಲ್ಲಿ ಸಾಲ ರೂಪದಲ್ಲಿ ನೀಡಲಾಗುವುದು ಎಂದು ವರದಿಗಳು ತಿಳಿಸಿವೆ.
ಪಾಕ್ ಹಣಕಾಸು ಸಚಿವ ಅಸದ್ ಉಮರ್ ಅವರು ಈಚೆಗೆ “ಪಾಕಿಸ್ಥಾನಕ್ಕೆ ತುರ್ತಾಗಿ 12 ಶತಕೋಟಿ ಡಾಲರ್ ಬೇಕಿದೆ. ಅದು ದೊರೆತಲ್ಲಿ ಸದ್ಯದ ವಿತ್ತೀಯ ಕೊರತೆಯನ್ನು ಮತ್ತು ತಳಮಟ್ಟಕ್ಕೆ ಕುಸಿದಿರುವ ವಿದೇಶಿ ಕರೆನ್ಸಿ ಮೀಸಲನ್ನು ನಿಭಾಯಿಸಬಹುದಾಗಿದೆ’ ಎಂದು ಹೇಳಿದ್ದರು.
ಸೌದಿ ಅರೇಬಿಯ ತತ್‌ಕ್ಷಣಕ್ಕೆ ಈಗ 3 ಶತಕೋಟಿ ಡಾಲರ್ ಮೊತ್ತವನ್ನು ಪಾಕಿಸ್ಥಾನದ ಸ್ಟೇಟ್ ಬ್ಯಾಂಕ್ ನಲ್ಲಿ ನಗದು ಠೇವಣಿ ಇರಿಸಲಿದೆ. ಮಾತ್ರವಲ್ಲದೆ ತೈಲ ಆಮದಿಗೆಂದು ಇನ್ನೂ 3 ಶತಕೋಟಿ ಡಾಲರ್‌ಗಳನ್ನು ಮುಂಡೂಲ್ಪಟ್ಟ ಪಾವತಿ ನೆಲೆಯಲ್ಲಿ ನೀಡಲಿದೆ ಎಂದು ಪಾಕಿಸ್ಥಾನದ ವಿದೇಶ ಕಾರ್ಯಾಲಯ ಹೇಳಿದೆ.