ಹೊಸದಿಲ್ಲಿ : ಸೌದಿ ಅರೇಬಿಯ ಹೊಸ ಕುಟುಂಬ ತೆರಿಗೆಯನ್ನು ಜಾರಿಗೆ ತಂದಿದ್ದು ಇದರಿಂದಾಗಿ ಸೌದಿಯಲ್ಲಿ ಕುಟುಂಬ ಸಹಿತವಾಗಿ ನೆಲೆಸಿರುವ ಭಾರತೀಯರಿಗೆ ಭಾರೀ ಆರ್ಥಿಕ ಹೊರೆ ಎದುರಾಗಿದೆ.
ಇದೇ ಜುಲೈ 1ರಿಂದ ಸೌದಿ ಸರಕಾರ ಮಾಸಿಕ “ಡಿಪೆಂಡೆಂಟ್ ಫೀ’ (ಅವಲಂಬಿತರ ಮೇಲಿನ ತೆರಿಗೆ) ಕ್ರಮವನ್ನು ಜಾರಿಗೆ ತರಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದರ ಪ್ರಕಾರ ಕುಟುಂಬವೊಂದರ ಪ್ರತೀಯೋರ್ವ ಅವಲಂಬಿತರಿಗೆ ಸೌದಿ ಸರಕಾರ ತಿಂಗಳಿಗೆ ನೂರು ರಿಯಾಲ್‌ಗಳನ್ನು (ಅಂದಾಜು 1,723.42 ರೂ.) ತೆರಿಗೆ ಹೇರಲಿದೆ. ಇದು 2020ನೇ ಇಸವಿಯ ತನಕವೂ ಜಾರಿಯಲ್ಲಿ ಇರಲಿದೆ.
ಸೌದಿ ಅರೇಬಿಯ ತಿಂಗಳಿಗೆ 5,000 ರಿಯಾಲ್ (ಅಂದಾಜು 86,000 ರೂ.) ಸಂಬಳ ಇರುವವರಿಗೆ ಕುಟುಂಬ ವೀಸಾ ನೀಡುತ್ತದೆ. ಆ ಪ್ರಕಾರ ಸೌದಿಯಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿರುವ ಭಾರತೀಯ ಕುಟುಂಬವೊಂದರ ಮುಖ್ಯಸ್ಥನು ತಿಂಗಳಿಗೆ 300 ರಿಯಾಲ್ (ಸುಮಾರು 5,100 ರೂ.) ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಈ ತೆರಿಗೆಯ 2020ರೊಳಗೆ ಪ್ರತಿಯೋರ್ವ ವ್ಯಕ್ತಿಗೆ ತಿಂಗಳಿಗೆ 100 ರಿಯಾಲ್ ವರೆಗೂ ಏರುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಇನ್ನೊಂದು ದೊಡ್ಡ ಸಮಸ್ಯೆ ಎಂದರೆ ಈ ತೆರಿಗೆಯನ್ನು ಮುಂಗಡವಾಗಿಯೇ ಪಾವತಿಸಬೇಕಾಗುತ್ತದೆ.
ಸೌದಿ ಅರೇಬಿಯದಲ್ಲಿ 400ಕ್ಕೂ ಹೆಚ್ಚು ಭಾರತೀಯ ಕಂಪೆನಿಗಳಿದ್ದು ಅವುಗಳಲ್ಲಿ ಸುಮಾರು 41 ಲಕ್ಷ ಭಾರತಿಯರು ದುಡಿಯುತ್ತಿದ್ದಾರೆ.