ಗಾಲೆ: ಮಧ್ಯ ಕ್ರಮಾಂಕದ ಎಡಗೈ ಬ್ಯಾಟ್ಸ್ ಮನ್ ಸೌದ್ ಶಕೀಲ್ ಬಾರಿಸಿದ ಅಮೋಘ ದ್ವಿಶತಕ ಸಾಹಸದಿಂದ ಗಾಲೆ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ಥಾನ 149 ರನ್ನುಗಳ ಇನ್ನಿಂಗ್ಸ್ ಲೀಡ್ ಸಾಧಿಸಿದೆ.
ಶ್ರೀಲಂಕಾದ 312 ರನ್ನುಗಳ ಮೊದಲ ಇನ್ನಿಂಗ್ಸ್ ಮೊತ್ತಕ್ಕೆ ಜವಾಬು ನೀಡಿದ ಪಾಕಿಸ್ಥಾನ 461ರ ತನಕ ಇನ್ನಿಂಗ್ಸ್ ಬೆಳೆಸಿತು. ಲಂಕಾ ದ್ವಿತೀಯ ಸರದಿಯಲ್ಲಿ ವಿಕೆಟ್ ನಷ್ಟವಿಲ್ಲದೆ 14 ರನ್ ಮಾಡಿ 3ನೇ ದಿನದಾಟ ಮುಗಿಸಿದೆ. ಪಂದ್ಯವನ್ನು ಉಳಿಸಿಕೊಳ್ಳುವ ತೀವ್ರ ಒತ್ತಡ ಆತಿಥೇಯರ ಮೇಲಿದೆ.
ಪಾಕಿಸ್ಥಾನ 5ಕ್ಕೆ 221 ರನ್ ಮಾಡಿದಲ್ಲಿಂದ ದಿನದಾಟ ಮುಂದುವರಿಸಿತ್ತು. ಈ 5 ವಿಕೆಟ್ 101 ರನ್ನಿಗೆ ಉರುಳಿತ್ತು. ಸೌದ್ ಶಕೀಲ್ 69 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಮಂಗಳವಾರ ಆಘಾ ಸಲ್ಮಾನ್ ನೆರವಿನಿಂದ ಪಾಕ್ ಮೊತ್ತವನ್ನು ಏರಿಸುತ್ತ ಹೋದರು. ಜತೆಗೆ ತಮ್ಮ 2ನೇ ಶತಕ ಹಾಗೂ ಚೊಚ್ಚಲ ಡಬಲ್ ಸೆಂಚುರಿಯನ್ನು ಪೂರೈಸಿದರು. ಒಟ್ಟು 361 ಎಸೆತ ಎದುರಿಸಿ ನಿಂತ ಶಕೀಲ್ 19 ಬೌಂಡರಿ ನೆರವಿನಿಂದ ಅಜೇಯ 208 ರನ್ ಬಾರಿಸಿದರು. ಆಘಾ ಸಲ್ಮಾನ್ ಕೊಡುಗೆ 83 ರನ್. ಶಕೀಲ್-ಸಲ್ಮಾನ್ ಜೋಡಿಯಿಂದ 6ನೇ ವಿಕೆಟಿಗೆ 177 ರನ್ ಒಟ್ಟುಗೂಡಿತು.
ಕೊನೆಯ ನಾಲ್ವರು ಆಟಗಾರರ ನೆರವಿನಿಂದ 183 ರನ್ ಒಟ್ಟುಗೂಡಿಸಿದ್ದು ಸೌದ್ ಶಕೀಲ್ ಅವರ ಬ್ಯಾಟಿಂಗ್ ತಾಕತ್ತಿಗೆ ಸಾಕ್ಷಿ. ಇವರಲ್ಲಿ ನಾಲ್ವರ ಒಟ್ಟು ಗಳಿಕೆ ಬರೀ 50 ರನ್. ಉಳಿದ ರನ್ ಎಲ್ಲ ಶಕೀಲ್ ಬ್ಯಾಟಿನಿಂದಲೇ ಹರಿದು ಬಂತು. ಶ್ರೀಲಂಕಾದ ಸ್ಪಿನ್ನರ್ ರಮೇಶ್ ಮೆಂಡಿಸ್ 5 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-312 ಮತ್ತು ವಿಕೆಟ್ ನಷ್ಟವಿÉದೆ 14. ಪಾಕಿಸ್ಥಾನ-461 (ಶಕೀಲ್ 208, ಸಲ್ಮಾನ್ 83, ಮಸೂದ್ 39, ನೌಮಾನ್ ಅಲಿ 25, ರಮೇಶ್ ಮೆಂಡಿಸ್ 136ಕ್ಕೆ 5, ಪ್ರಭಾತ್ ಜಯಸೂರ್ಯ 145ಕ್ಕೆ 3).