Advertisement

ನಿಗಮ ಘೋಷಣೆ ಸಾಲದು, ಅನುದಾನ ಒದಗಿಸಿ: ಸತ್ಯಜಿತ್‌

11:55 PM Feb 21, 2023 | Team Udayavani |

ಮಂಗಳೂರು: ಚುನಾವಣೆ ನೀತಿ ಸಂಹಿತೆ ಘೋಷಣೆಯಾಗುವ ಮೊದಲು ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ರಾಜ್ಯ ಸರಕಾರ ಕನಿಷ್ಠ 500 ಕೋ.ರೂ. ಅನುದಾನ ಒದಗಿಸಿ, ಪ್ರಾಥಮಿಕ ಕೆಲಸಗಳಿಗೆ ಚಾಲನೆ ನೀಡಬೇಕು. ಇಲ್ಲದಿದ್ದರೆ ಮುಂದಿನ ಸರಕಾರ ಅಸ್ತಿತ್ವಕ್ಕೆ ಬರುವ ವರೆಗೆ ನಿಗಮದಿಂದ ಯಾವುದೇ ಪ್ರಯೋಜನವಾಗದು ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ಸತ್ಯಜಿತ್‌ ಸುರತ್ಕಲ್‌ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

Advertisement

ನಿಗಮ ಘೋಷಣೆಯ ಮೂಲಕ ಒಂದು ಹಂತದ ಜಯ ಸಿಕ್ಕಿದೆ. ಇದು ಬಿಲ್ಲವ ಸಮುದಾಯದ ಸಂಘಟಿತ ಹೋರಾಟಕ್ಕೆ ಸಂದ ಗೆಲವು. ಆದರೆ ಅನುದಾನ ಘೋಷಣೆಯಾಗಿ ನಿಗಮದ ಕಾರ್ಯಾಚರಣೆ ಆರಂಭವಾಗುವವರೆಗೆ ಹೋರಾಟದಿಂದ ವಿರಮಿಸುವುದಿಲ್ಲ. ಸರಕಾರಕ್ಕೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ ಬಜೆಟ್‌ ನಲ್ಲೇ ನಿಗಮ ಘೋಷಣೆ ಮಾಡಬೇಕಿತ್ತು ಎಂದರು.

ಸಂಭ್ರಮಿಸುವ ದಿನ ಬಂದಿಲ್ಲ
ನಿಗಮ ಘೋಷಣೆಯಾದ ಕಾರಣ ಬಿಲ್ಲವರು ಇನ್ನು ದೇವರಾಜ ಅರಸು ನಿಗಮದಿಂದ ಯಾವುದೇ ಸಹಕಾರ ಪಡೆಯುವಂತಿಲ್ಲ. ಬಜೆಟ್‌ ಎಪ್ರಿಲ್‌ನಿಂದ ಜಾರಿಗೆ ಬರಲಿದ್ದು, ಮಾರ್ಚ್‌ ಅಂತ್ಯಕ್ಕೆ ನೀತಿ ಸಂಹಿತೆ ಜಾರಿ ಸಾಧ್ಯತೆಯಿರುವುದರಿಂದ, ಇನ್ನೇನಿದ್ದರೂ ಬಹುತೇಕ ಹೊಸ ಸರಕಾರ ಬಂದ ಬಳಿಕವೇ ನಿಗಮ ಅನುಷ್ಠಾನಕ್ಕೆ ಬರಲಿದೆ. ಆದುದರಿಂದ ಸಮಾಜ ಈಗಲೇ ಸಂಭ್ರಮಿಸುವ ಅಗತ್ಯವಿಲ್ಲ ಎಂದರು.

ಶ್ರೀ ಗುರು ಬೆಳದಿಂಗಳು ಫೌಂಡೇಶನ್‌ ಅಧ್ಯಕ್ಷ ಪದ್ಮರಾಜ್‌ ಆರ್‌. ಮಾತನಾಡಿ, ನಿಗಮ ಘೋಷಣೆ ಮಾಡಿದರೂ ಈಗಿನ ಸರಕಾರದಿಂದ ಅದಕ್ಕೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ನಿಗಮದ ನೋಂದಣಿ, ಬೈಲಾ ರಚನೆ, ಪ್ರತ್ಯೇಕ ಖಾತೆ ಮೊದಲಾದವುಗಳು ಕಾನೂನು ಪ್ರಕಾರ ನಡೆಯಬೇಕಿದ್ದು, ಅದಕ್ಕೆ ಕನಿಷ್ಠ 3 ತಿಂಗಳು ಬೇಕಾಗುತ್ತದೆ. ಆದ್ದರಿಂದ ಈಗ ವಿಜಯೋತ್ಸವ ಆಚರಿಸುವ ಸ್ಥಿತಿಯಲ್ಲಿ ನಾವು ಇಲ್ಲ. ಬಿಲ್ಲವರು ಸಂಘಟಿತರಾದ ಪರಿಣಾಮ ನಿಗಮ ರಚನೆಯಾಗಿದ್ದು, ಇದು ಇತರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿಯೂ ಮುಂದೆ ರಚನೆಯಾಗುವ ಸರಕಾರಕ್ಕೂ ಎಚ್ಚರಿಕೆ ಗಂಟೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next