ಚೆನ್ನೈ:ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕರಾಗಿ ಇ.ಪಳನಿಸ್ವಾಮಿ ಆಯ್ಕೆಯಾಗಿದ್ದು, ರಾಜ್ಯಪಾಲ ವಿದ್ಯಾಸಾಗರ ರಾವ್ ಭೇಟಿಗೆ ತೆರಳಿದ್ದಾರೆ. ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಬೆಂಬಲಿಗರು ರಾಜ್ಯಪಾಲರ ಭೇಟಿಗೆ ಅವಕಾಶ ಕೊಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಶಶಿಕಲಾ ನಟರಾಜನ್ ಕೋವತ್ತೂರಿನ ಗೋಲ್ಡನ್ ಬೇ ರೆಸಾರ್ಟ್ ನಲ್ಲೇ ವಾಸ್ತವ್ಯ ಹೂಡಿದ್ದಾರೆ. ಮುನ್ನೆಚ್ಚರಿಕೆ ಅಂಗವಾಗಿ 10 ಕಿಲೋ ಮೀಟರ್ ವ್ಯಾಪ್ತಿವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಪೊಲೀಸ್ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿದೆ.
ಸುಪ್ರೀಂಕೋರ್ಟ್ ತೀರ್ಪಿನ ಪ್ರತಿ ಕೈಸೇರಿದ ಬಳಿಕ ಶಶಿಕಲಾ ನಟರಾಜನ್ ಬೆಂಗಳೂರಿನ ವಿಶೇಷ ಕೋರ್ಟ್ ನ್ಯಾಯಾಧೀಶರ ಮುಂದೆ ಶರಣಾಗತಿಯಾಗುವ ಸಾಧ್ಯತೆ ಇದೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ.
ಏತನ್ಮಧ್ಯೆ ಗೋಲ್ಡನ್ ಬೇ ರೆಸಾರ್ಟ್ ನಲ್ಲಿರುವ ಎಐಎಡಿಎಂಕೆ ಶಾಸಕರನ್ನು ಭೇಟಿಯಾಗಲು ಪನ್ನೀರ್ ಸೆಲ್ವಂ ತೆರಳಿದ್ದಾಗ, ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ಅಧಿಕಾರಿಗಳು ಭೇಟಿಗೆ ಅವಕಾಶ ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಸೆಲ್ವಂ ಚೆನ್ನೈಗೆ ವಾಪಸ್ ಆಗಿದ್ದಾರೆ.
12 ಶಾಸಕರ ಜೊತೆ ಪಳನಿಸ್ವಾಮಿ ಗವರ್ನರ್ ಭೇಟಿ:
12 ಶಾಸಕರ ನಿಯೋಗದ ಜೊತೆ ಆಗಮಿಸುವಂತೆ ರಾಜ್ಯಪಾಲರು ಸೂಚಿಸಿದ್ದ ಹಿನ್ನೆಲೆಯಲ್ಲಿ ಇ.ಪಳನಿಸ್ವಾಮಿ ಶಾಸಕರ ನಿಯೋಗದ ಜೊತೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ.
ಕೇವಲ 10 ನಿಮಿಷಗಳ ಕಾಲ ರಾಜ್ಯಪಾಲರ ಜೊತೆ ಮಾತುಕತೆ ನಡೆಸಿರುವ ಪಳನಿಸ್ವಾಮಿ ರಾಜಭವನದಿಂದ ನಿರ್ಗಮಿಸಿದ್ದಾರೆ. ತನಗೆ ಬಹುಮತ ಇದ್ದು,ಸರ್ಕಾರ ರಚನೆಗೆ ಅವಕಾಶ ಕೊಡಬೇಕೆಂದು ಕೋರಿ 124 ಶಾಸಕರ ಬೆಂಬಲ ಇದೆ ಎಂಬ ಶಾಸಕರ ಸಹಿಯುಳ್ಳ ಪತ್ರವನ್ನು ರಾಜ್ಯಪಾಲರಿಗೆ ನೀಡಿರುವುದಾಗಿ ವರದಿ ತಿಳಿಸಿದೆ.