Advertisement
ಇಚ್ಛಾಶಕ್ತಿ, ಪರಿಶ್ರಮ ಇದ್ದುಬಿಟ್ಟರೆ ಅದೆಂಥದ್ದೇ ಬೆಟ್ಟದಂಥ ಸವಾಲುಗಳು ಎದುರಾದರೂ ಸಾಧನೆ ಕಷ್ಟವಾಗುವುದಿಲ್ಲ. ಅದಕ್ಕೆ ಉತ್ತಮ ಉದಾಹರಣೆ ಅಂದಿನ ಕುರಿಗಾಹಿ, ಇಂದು ಸೆಲೆಬ್ರಿಟಿಯಾಗಿರುವ ಹನುಮಂತಪ್ಪ ಲಮಾಣಿ. ಹಾವೇರಿ ಜಿಲ್ಲೆ, ಸವಣೂರು ತಾಲೂಕಿನ ಚಿಲ್ಲೂರು- ಬಡ್ನಿ ತಾಂಡಾದಲ್ಲಿ ಕುರಿ ಮೇಯಿಸಿಕೊಂಡಿದ್ದಾತ ಇಂದು ಕರ್ನಾಟಕದ ಮನೆಮಾತಾಗಿರುವುದು ಕಡಿಮೆ ಸಾಧನೆಯೇನಲ್ಲ.
ಹನುಮಂತಪ್ಪ, ಕುರಿ ಕಾಯುವಾಗ ಮನಸಿಗೆ ತೋಚಿದ ಜನಪದ ಗೀತೆಗಳನ್ನು ಗುನುಗುಡುತ್ತಿದ್ದ. ಆತನ ಪಾಲಿಗೆ ಅದೇ ಸಂಗೀತಾಭ್ಯಾಸ. ಹನುಮಂತಪ್ಪ ಕಲಿತಿದ್ದು ಕೇವಲ ಏಳನೇ ತರಗತಿ ತನಕ ಮಾತ್ರ. ಮುಂದಕ್ಕೆ ಓದಲು ಮನೆಯ ಪರಿಸ್ಥಿತಿ ಅಡ್ಡಿಯಾದ ಕಾರಣ ಅಪ್ಪನಿಗೆ ಕುಟುಂಬ ನಿರ್ವಹಣೆಗೆ ಸಹಾಯ ಮಾಡುವ ಸಲುವಾಗಿ ಸ್ಲೇಟು ಬಳಪ ಪುಸ್ತಕ ಬಿಟ್ಟು ಕಾರಿ ಕಾಯಲು ಹೊರಟುಬಿಟ್ಟ. ಬೆಳಗ್ಗಿನಿಂದ ಕುರಿ ಮೇಯಿಸಿ, ಸಂಜೆ ಓರಗೆಯ ಗೆಳೆಯರೊಂದಿಗೆ ಊರ ಹನುಮಂತ ದೇವರ ಗುಡಿಯಲ್ಲಿ ಭಜನೆಯಲ್ಲಿ ತೊಡಗಿಕೊಳ್ಳುತ್ತಿದ್ದ. ಗೆಳೆಯರ ಪ್ರೋತ್ಸಾಹ
ಸಂಗೀತದ ಕುರಿತಾದ ತುಡಿತವೇನೋ ಮುಂಚಿನಿಂದಲೇ ಇತ್ತು. ಆದರೆ, ತಾಂಡಾದಲ್ಲಿ ಕಳೆದು ಹೋಗುತ್ತಿದ್ದ ಪ್ರತಿಭೆ ಝೀ ಕನ್ನಡ ವಾಹಿನಿಯ ಸಾರೆಗಮಪ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದಕ್ಕೆ ಗೆಳೆಯರ ಪ್ರೋತ್ಸಾಹವೂ ಕಾರಣ. ಸ್ನೇಹಿತರಾದ ನಾಗರಾಜ, ವಾಸುದೇವ, ಗಂಗಾಧರ, ಉಮೇಶ, ಮಹಾಲಿಂಗ, ಫಕ್ಕೀರೇಶ ಹೀಗೆ ಹನುಮಂತನ ಗೆಳೆಯರ ಪಟ್ಟಿ ಪುರಾಣದ ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ. ಚಿಕ್ಕ ಮನೆಯಲ್ಲಿ ತಂದೆ, ತಾಯಿ, ಅಣ್ಣ, ಅಕ್ಕ ತಂಗಿಯರ ಜೊತೆ ಕಷ್ಟದ ಜೀವನ ನಡೆಸುತ್ತಿರುವ ಹನುಮಂತಪ್ಪ ಮೊಬೈಲ್‌ನಲ್ಲಿ ಪ್ರಖ್ಯಾತ ಗಾಯಕರ ಹಾಡುಗಳನ್ನು ಪ್ಲೇ ಮಾಡಿ ಅವರಂತೆಯೇ ತಾನೂ ಹಾಡಲು ಪ್ರಯತ್ನಿಸುತ್ತಿದ್ದ.
Related Articles
ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ನಗರಕ್ಕೆ ಹೊಂದಿಕೊಳ್ಳುವುದು ಒಂದು ರೀತಿಯ ಕಷ್ಟವಾಗಿದ್ದರೆ ಅದಕ್ಕಿಂತ ಹೆಚ್ಚಾಗಿ ಕುರಿಗಳನ್ನು ಬಿಟ್ಟಿರಬೇಕಾಗಿ ಬಂದಿದ್ದು ಆತನಿಗೆ ತುಂಬಾ ಕಷ್ಟವೆನಿಸಿತ್ತು. ಬೆಂಗಳೂರಿನ ಜೀವನ ಹೇಗನ್ನಿಸಿತು ಎಂದು ಕೇಳಿದರೆ “ಅಲ್ಲಿದ್ದಾಗ ಅಲ್ಲಿನ ಜೀವನ ಚೆಂದ, ಇಲ್ಲಿದ್ದಾಗ ಇಲ್ಲಿಯ ಜೀವನ ಇಷ್ಟ’ ಎಂದು ವೇದಾಂತಿಯಂತೆ ಉತ್ತರಿಸುತ್ತಾನೆ.
Advertisement
ಸೆಲೆಬ್ರಿಟಿಯಾದಾಗಿನಿಂದ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಬ್ಯುಸಿಯಾಗಿರುವ ಹನುಮಂತ ಇಂದಿಗೂ ಊರಲ್ಲಿದ್ದರೆ ಕುರಿ ಮೇಯಿಸುವುದನ್ನು ತಪ್ಪಿಸುವುದಿಲ್ಲ. ಶನಿವಾರಕ್ಕೊಮ್ಮೆ ಹನುಮಂತ ದೇವರ ದೇವಸ್ಥಾನದಲ್ಲಿ ಭಜನೆ, ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಲು ಮರೆಯುವುದಿಲ್ಲ.
ಹನುಮಂತನ ಗುಡಿಯಲ್ಲಿ ಭಜನೆ ಮಾಡುತ್ತಿದ್ದೆ. ಶ್ರುತಿ ತಪ್ಪದಂತೆ ಹಾಡುವುದು ಅಭ್ಯಾಸವಾಗಿದ್ದು ಅಲ್ಲೇ. ಇವತ್ತು ಜನ ನನ್ನನ್ನು ಗಾಯಕನಾಗಿ ಗುರುತಿಸುತ್ತಿದ್ದಾರೆ ಎಂದರೆ ಅದಕ್ಕೆ ನಮ್ಮೂರ ಗುಡಿಯ ಮಾರುತಿಯೇ ಕಾರಣ.ಹನುಮಂತಪ್ಪ ರಾಜಶೇಖರ ಗುರುಸ್ವಾಮಿಮಠ