Advertisement

ಅಹ್ಮದಾಬಾದ್‌ : ಎಂಟು ವರ್ಷಗಳ ಬಳಿಕ ಟೆಸ್ಟ್‌ ನಂಟು

12:03 AM Feb 23, 2021 | Team Udayavani |

ಅಹ್ಮದಾಬಾದ್‌: ವಿಶ್ವದ ದೈತ್ಯ ಕ್ರಿಕೆಟ್‌ ಕ್ರೀಡಾಂಗಣವಾಗಿ ರೂಪುಗೊಂಡಿರುವ ಅಹ್ಮದಾಬಾದ್‌ನ “ಸರ್ದಾರ್‌ ಪಟೇಲ್‌ ಸ್ಟೇಡಿಯಂ’ 8 ವರ್ಷಗಳ ಬಳಿಕ ಟೆಸ್ಟ್‌ ಆತಿಥ್ಯಕ್ಕೆ ಅಣಿಯಾಗಿದೆ. ಬುಧವಾರದಿಂದ ಭಾರತ-ಇಂಗ್ಲೆಂಡ್‌ ಸರಣಿಯ 3ನೇ ಟೆಸ್ಟ್‌ ಪಂದ್ಯವಿಲ್ಲಿ ಅಹರ್ನಿಶಿಯಾಗಿ ನಡೆಯಲಿದ್ದು, ಇದು ಇಡೀ ವಿಶ್ವದ ಗಮನ ಸೆಳೆದಿದೆ.

Advertisement

ಇಲ್ಲಿ 2012ರ ನವೆಂಬರ್‌ನಲ್ಲಿ ಕೊನೆಯ ಸಲ ಟೆಸ್ಟ್‌ ಪಂದ್ಯವನ್ನು ಆಯೋಜಿಸಲಾಗಿತ್ತು. ಅಂದಿನ ಪಂದ್ಯ ಭಾರತ-ಇಂಗ್ಲೆಂಡ್‌ ನಡುವೆಯೇ ನಡೆದಿತ್ತೆಂಬುದು ವಿಶೇಷ. ಇದನ್ನು ಧೋನಿ ಪಡೆ 9 ವಿಕೆಟ್‌ಗಳಿಂದ ಗೆದ್ದಿತ್ತು. ಪೂಜಾರ ದ್ವಿಶತಕ (206), ಸೆಹವಾಗ್‌ (117) ಮತ್ತು ಕುಕ್‌ ಅವರ ಶತಕ (176), ಪ್ರಗ್ಯಾನ್‌ ಓಜಾ ಅವರ 9 ವಿಕೆಟ್‌ ಸಾಧನೆ (5 ಪ್ಲಸ್‌ 4), ಸ್ವಾನ್‌ ಅವರ 5 ವಿಕೆಟ್‌ ಬೇಟೆ ಈ ಪಂದ್ಯದ ಹೈಲೈಟ್‌ ಎನಿಸಿತ್ತು. ಭಾರತ-ಇಂಗ್ಲೆಂಡ್‌ ನಡುವೆ ಇಲ್ಲಿ ಮತ್ತೂಂದು ಟೆಸ್ಟ್‌ ನಡೆದದ್ದು 2001ರಂದು. ಇದು ಡ್ರಾ ಆಗಿತ್ತು.

11 ಪಿಚ್‌ಗಳ ಅಂಗಳ!
ನವೀಕೃತ ಸ್ಟೇಡಿಯಂನಲ್ಲಿ ಅತ್ಯಧಿಕ 11 ಪಿಚ್‌ಗಳನ್ನು ನಿರ್ಮಿಸಿರುವುದೊಂದು ವಿಶೇಷ. ಆದರೆ ಪ್ರಧಾನ ಪಿಚ್‌ ಹೇಗೆ ವರ್ತಿಸೀತು ಎಂಬುದು ನಿಗೂಢವಾಗಿಯೇ ಇದೆ.

ಭಾರತದ ಅತ್ಯಂತ ವೇಗದ ಟ್ರ್ಯಾಕ್‌ಗಳಲ್ಲಿ ಅಹ್ಮದಾಬಾದ್‌ಗೆ ಅಗ್ರಸ್ಥಾನ. ಸಾಮಾನ್ಯವಾಗಿ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ವೇಗಿಗಳೇ ಮೇಲುಗೈ ಸಾಧಿಸುವುದು ವಾಡಿಕೆ. ಫಿಟ್‌ನೆಸ್‌ನಲ್ಲಿ ತೇರ್ಗ ಡೆಯಾದ ಉಮೇಶ್‌ ಯಾದವ್‌ ಮತ್ತು ಬುಮ್ರಾ ಅವರನ್ನು ಸೇರಿಸಿಕೊಂಡು ಭಾರತವಿಲ್ಲಿ ತ್ರಿವಳಿ ವೇಗಿಗಳನ್ನು ದಾಳಿಗಿಳಿಸುವ ಸಂಭವವಿದೆ. ಕುಲದೀಪ್‌ ಹೊರಗುಳಿಯಬಹುದು.

ಉಮೇಶ್‌ ಫಿಟ್‌ನೆಸ್‌ ಪಾಸ್‌
ವೇಗಿ ಉಮೇಶ್‌ ಯಾದವ್‌ ಫಿಟ್‌ನೆಸ್‌ ಟೆಸ್ಟ್‌ ನಲ್ಲಿ ತೇರ್ಗಡೆಯಾಗಿ ಭಾರತ ತಂಡಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ಶಾರ್ದೂಲ್‌ ಠಾಕೂರ್‌ ಅವರನ್ನು ಟೀಮ್‌ ಇಂಡಿಯಾದಿಂದ ಬಿಡುಗಡೆಗೊಳಿಸಲಾಯಿತು.

Advertisement

“ಮೆಲ್ಬರ್ನ್ ಟೆಸ್ಟ್‌ ವೇಳೆ ಗಾಯಾಳಾಗಿದ್ದ ಉಮೇಶ್‌ ಯಾದವ್‌ ರವಿವಾರ ಫಿಟ್‌ನೆಸ್‌ ಪರೀಕ್ಷೆಗೆ ಒಳಗಾಗಿದ್ದರು. ಇದರ ಫ‌ಲಿತಾಂಶ ಬಂದಿದ್ದು, ಅವರು ತೇರ್ಗಡೆಯಾಗಿದ್ದಾರೆ. ಕೊನೆಯ ಎರಡು ಟೆಸ್ಟ್‌ಗಳಿಗಾಗಿ ಯಾದವ್‌ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ’ ಎಂದು ಬಿಸಿಸಿಐ ತಿಳಿಸಿದೆ. ಶಾದೂìಲ್‌ ಅವರಿನ್ನು ಮುಂಬಯಿ ಪರ ವಿಜಯ್‌ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಆಡಲಿದ್ದಾರೆ.

ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿ
ಅಹ್ಮದಾಬಾದ್‌ನ ಸರ್ದಾರ್‌ ಪಟೇಲ್‌ ಸ್ಟೇಡಿಯಂ ಟೆಸ್ಟ್‌ ಕ್ರಿಕೆಟಿನ ಅನೇಕ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಸುನೀಲ್‌ ಗಾವಸ್ಕರ್‌ ಟೆಸ್ಟ್‌ ಇತಿಹಾಸದಲ್ಲಿ 10 ಸಾವಿರ ರನ್‌ ಗಳಿಸಿದ ವಿಶ್ವದ ಮೊದಲ ಸಾಧಕನಾಗಿ ಮೂಡಿಬಂದದ್ದು ಇದೇ ಅಂಗಳದಲ್ಲಿ. ಅದು 1986-87ರ ಪಾಕಿಸ್ಥಾನ ಎದುರಿನ ಪಂದ್ಯವಾಗಿತ್ತು.

ರಿಚರ್ಡ್‌ ಹ್ಯಾಡ್ಲಿ ಅವರ ಸರ್ವಾಧಿಕ 431 ವಿಕೆಟ್‌ಗಳ ವಿಶ್ವದಾಖಲೆಯನ್ನು ಕಪಿಲ್‌ದೇವ್‌ ತಮ್ಮದಾಗಿಸಿಕೊಂಡದ್ದು ಈ ಅಂಗಳದಲ್ಲಿ ಎಂಬುದನ್ನು ಮರೆಯುವಂತಿಲ್ಲ. 1994ರ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಕಪಿಲ್‌ ನೂತನ ಎತ್ತರ ತಲುಪಿದ್ದರು. ಇದಕ್ಕೂ ಮುನ್ನ 1983ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಕಪಿಲ್‌ ಇದೇ ಅಂಗಳದಲ್ಲಿ ಜೀವನಶ್ರೇಷ್ಠ ಬೌಲಿಂಗ್‌ ಸಾಧನೆಗೈದಿದ್ದರು (83ಕ್ಕೆ 9 ವಿಕೆಟ್‌).

ಸಚಿನ್‌ ತೆಂಡುಲ್ಕರ್‌ ಅವರ ಮೊದಲ ದ್ವಿಶತಕ ಇಲ್ಲಿಯೇ ದಾಖಲಾಗಿತ್ತು (1999ರ ನ್ಯೂಜಿಲ್ಯಾಂಡ್‌ ಎದುರಿನ ಪಂದ್ಯ). ಏಕದಿನ ಇತಿಹಾಸದಲ್ಲಿ ತೆಂಡುಲ್ಕರ್‌ 18 ಸಾವಿರ ರನ್‌ ಪೂರ್ತಿಗೊಳಿಸಿದ್ಧೂ ಅಹ್ಮದಾಬಾದ್‌ನಲ್ಲೇ (ಆಸ್ಟ್ರೇಲಿಯ ಎದುರಿನ 2011ರ ವಿಶ್ವಕಪ್‌ ಪಂದ್ಯ).

Advertisement

Udayavani is now on Telegram. Click here to join our channel and stay updated with the latest news.

Next