Advertisement

ವೃಂದಾವನದಲ್ಲಿ ಸಾರಂಗ ರಾಗ

05:43 PM Feb 15, 2020 | mahesh |

ವೃಂದಾವನ ಸಾರಂಗ ರಾಗದ ಹಾಡಿನ ಸಾಲುಗಳನ್ನು ರಾಧಾ-ಕೃಷ್ಣರ ವೃಂದಾವನಲ್ಲಿಯೇ ಹಾಡುವ ಅವಕಾಶ ಸಿಕ್ಕಿದರೆ ಅದಕ್ಕಿಂತ ಮಿಗಿಲಾದ ಭಾಗ್ಯ ಉಂಟೆ !

Advertisement

ಮೊನ್ನೆ ವಸಂತ ಪಂಚಮಿಗೆ ಉತ್ತರಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿ¨ªೆವು. ಹತ್ತು ವರುಷಗಳ ನಂತರದ ವೃಂದಾವನವು ಬಹಳಷ್ಟು ಬದಲಾಗಿತ್ತು. ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಿದ ಊರಿನ ಸುತ್ತು (ಪರಿಕ್ರಮ) ಭವ್ಯವಾಗಿ ಬದಲಾಗಿತ್ತು. ಶತಮಾನಗಳ ಹಿಂದೆ ಈ ಪರಿಕ್ರಮದ ದಂಡೆಯನ್ನು ಯಮುನೆ ತನ್ನ ಶುಭ್ರವಾದ ಮಾಯಾ ಅಲೆಗಳಿಂದ ಮುಟ್ಟಿ ಹೋಗುತ್ತಿದ್ದಳಂತೆ. ಇಂದು ಇಲ್ಲಿ ಜನಸಾಗರ, ಮನುಷ್ಯನ ವಾಸಸ್ಥಾನದ ಕೊಳಕು. ಇಂದು ಇವೆಲ್ಲವನ್ನು ಶುಭ್ರಗೊಳಿಸಿ ಹೊಸ ದಂಡೆಗಳು (ಘಾಟಗಳು) ನಿರ್ಮಾಣವಾಗಿವೆ. ಆ ಮೋಹಕ ಕೃಷ್ಣ ಮುರಾರಿಯ ಅನೇಕ ಸಾಹಸೀ ಕ್ರೀಡೆಗಳ ಚಿತ್ರಣಗಳು ಅಲ್ಲಿನ ಗೋಡೆಗಳಲ್ಲಿ ಮೂಡಿಬಂದಿವೆ.

ವೃಂದಾನವನದ ಅತೀ ಪುರಾತನ ಎತ್ತರದ ಮದನಮೋಹನ ಮಂದಿರಕ್ಕೆ ಭೇಟಿ ನೀಡಿ, ಸಾಲು ಮೆಟ್ಟಿಲುಗಳನ್ನು ಇಳಿದು ಪರಿಕ್ರಮದಲ್ಲಿ ನಡೆಯತೊಡಗಿದೆವು. ನಾನು ಮತ್ತು ನನ್ನ ಪತ್ನಿ ರಾಧಾ-ಕೃಷ್ಣರ ರೀತಿಯಲ್ಲಿ ವಿಹರಿಸುತ್ತ ಮುಂದೆ ಹೋದೆವು. ಹೊಸತಾಗಿ ರೂಪುಗೊಂಡ ಕಾವಿ ರಂಗಿನ ಹಳೆಮಾದರಿಯ ಹೊಸ ಕಲಾಕೃತಿಯ ಕಟ್ಟಡಗಳ ಮಧ್ಯೆ ಒಂದು 120 ವರುಷಗಳ ಹಿಂದಿನ ಕಟ್ಟಡ. ಅದರಲ್ಲಿ ಒಂದು ಕಿರಿಯ ಮತ್ತು ಹಿರಿಯ ಪ್ರಾಥಮಿಕ ಖಾಸಗಿ ಶಾಲೆ. ಆರು ಶಿಕ್ಷಕರು ನಡೆಸುತ್ತಿರುವ ಆ ಶಾಲೆಯಲ್ಲಿ 130 ವಿದ್ಯಾರ್ಥಿಗಳು ಕಲಿಯುತಿದ್ದರು. “ದಾನಿಗಳು ನಡೆಸುವ ಈ ಶಾಲೆಯನ್ನು, ಶ್ರೀಕೃಷ್ಣನು ಬಾಲ್ಯದಲ್ಲಿ ಸಾಂದೀಪನಿ ಗುರುಗಳಲ್ಲಿ ವಿದ್ಯಾರ್ಜನೆ ಮಾಡುವ ರೀತಿಯಲ್ಲಿ ಎಲ್ಲರಿಗೂ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ಇದನ್ನು ಯಾವುದೇ ಸರಕಾರಿ ಅನುದಾನವಿಲ್ಲದ ನಡೆಸುತ್ತಿದ್ದೇವೆ’ ಎಂದು ಅಲ್ಲಿಯ ಹಿರಿಯ ಶಿಕ್ಷಕರಾದ ಘನಶ್ಯಾಮ ಮಿಶ್ರಾ ಹೇಳಿದರು. ನನಗಂತೂ ಯಾವಾಗಲೂ ದುಡ್ಡಿಗಾಗಿ ಪೀಡಿಸುವ ಜನರು ತುಂಬಿದ ಆ ಸುಂದರ ಬಂಕೆ ಬಿಹಾರಿ ಮಂದಿರದ ಹತ್ತಿರ ಇಂತಹ ಒಂದು ಶಿಕ್ಷಣ ಸಂಸ್ಥೆ ನೋಡಿ ಹೃದಯ ತುಂಬಿಬಂತು.

ನಡೆಯುತ್ತ ಮುಂದೆ ಬಂದಾಗ ಎರಡು ಕೋಣೆಗಳಷ್ಟಿದ್ದ ಒಂದು ಆಶ್ರಮದಂತಹ ಮನೆ. ಅದರ ಹೊರಗಡೆ 20-25 ಜನರು ಕೂರಬಹುದಾದ ಪಡಸಾಲೆ. ಗಾಯಕ ರಾಜನ್‌ ಮಿಶ್ರಾ ಓರ್ವ ಎಳೆಯ ಪ್ರಾಯದ ಗಾಯಕನೊಡನೆ ಹಾರ್ಮೋನಿಯಂ ಬಾರಿಸುತ್ತ ಬಿಹಾಗ್‌ ರಾಗದ ಸಾಲುಗಳನ್ನು ಹಾಡುತಿದ್ದ. ನಾವೀರ್ವರೂ ಅವರೊಡನೆ ಕುಳಿತು ಆಲಿಸಿದೆವು. ಬಹಳ ಮಧುರ ಕಂಠ. ಮಧ್ಯಾಹ್ನದ ಹೊತ್ತು. ಅಂದೇ ಸ್ವಾಮಿಹರಿದಾಸರ ಸಮಾಧಿಗೆ ಹೋಗಿ ನಮನ ಮಾಡಿಬಂದ ನನಗೆ ಅಂತರಾಳದಿಂದ ಬಹಳಷ್ಟು ಸಂಗೀತದ ಅಲೆಗಳು ಹೊರಬಂದವು.

“ನಾ ಹಾಡಲೇ?’ ಕೇಳಿಯೇ ಬಿಟ್ಟೆ. ಹತ್ತಿರವೇ ಕುಳಿತಿದ್ದ ಉದ್ದದ ನಾಮದ ಗಡ್ಡದಾರಿ ತನ್ನ ಗುರುವಿನತ್ತ ನೋಡಿದ. ಆ ಗುರುಗಳು ನನ್ನತ್ತ ನೋಡಿ “ಗಾವೊ’ ಎಂದರು.

Advertisement

ಬನ ಬನ ದೂಂಡನ ಜಾಹುಂ, ಕಿತನೆ ಚುಪಗಯೊ ಕೃಷ್ಣ ಮುರಾರಿ ಎಂಬ ವೃಂದಾವನ ಸಾರಂಗ ರಾಗದ ಹಾಡಿನ ಸಾಲುಗಳನ್ನು ವಿಲಂಬಿತ, ಧ್ರುತ್‌ ಹಾಗೂ ತಾನಗಳೊಂದಿಗೆ ಹಾಡಿದೆ. ಆ ಗುರು-ಶಿಷ್ಯರು ಕಣ್ಣುಮುಚ್ಚಿ ತದೇಕಚಿತ್ತದಿಂದ ನನ್ನ ಹಾಡನ್ನು ಕೇಳಿದರು, ತಲೆದೂಗಿದರು. ಮಂದಹಾಸವೊಂದು ಅವರ ಮುಖದಲ್ಲಿ ತೇಲಿಬಂತು. ವೃಂದಾವನದ ಈ ಸಾರಂಗ ರಾಗ ನಿನಗೆ ಹೇಗೆ ಬಂತು? ಎಂಬ ಭಾವ ಅವರ ಮುಖದಲ್ಲಿ ಕಂಡೆ. ನಾನೇ ಅವರಿಗೆ ಹೇಳಿದೆ. “ನಾನು ದಕ್ಷಿಣದ ಮಂಗಳೂರಿನವನು. ನನ್ನ ಗುರು ಆರ್ಕುಳ ಶ್ರೀನಿವಾಸ ಶೆಣೈಯವರು ಕಲಿತದ್ದು ಮುಂಬೈಯ ಪಂಡಿತ ಲಕ್ಷ್ಮಣ ಪ್ರಸಾದ ಜೈಪುರವಾಲೆಯವರಲ್ಲಿ, ಅವರ ಗುರುಗಳು 19ನೆಯ ಶತಮಾನದ ಅಂತ್ಯದಲ್ಲಿ ದೆಹಲಿಯಲ್ಲಿ ವಾಸವಾಗಿದ್ದ ಗೋಸಾಯಿ ಮಹಾರಾಜರು. ಅವರು ಹಿಂದುಸ್ಥಾನಿ ಸಂಗೀತದ ಮಹಾನ್‌ ಕೃತಿಕಾರರಾದ ಕುಂವರ್‌ ಶ್ಯಾಮಜೀ ಮಹಾರಾಜರ ಶಿಷ್ಯರು ಮತ್ತು ಕುಂವರ್‌ ಶ್ಯಾಮಜಿಯವರು ವೃಂದಾವನದ ಮಹಾನ್‌ ಸಂಗೀತ ಗುರುಗಳಾಗಿದ್ದ ಸ್ವಾಮಿ ಹರಿದಾಸರ ಪರಂಪರೆಯವರು’.

ಆಗಲೇ ಅಲ್ಲಿ ಸುಮಾರು 25 ಶ್ರೋತೃಗಳು ಜಮಾಯಿಸಿದ್ದರು. ಆ ಗುರು-ಶಿಷ್ಯರಿಗೂ ಇತರರಿಗೂ ನನ್ನ ಮಾತುಗಳನ್ನು ಕೇಳಿ ಪರಮಾಶ್ಚರ್ಯ. ಎಲ್ಲಿಯ ಕರಾವಳಿ ! ಎಲ್ಲಿಯ ವೃಂದಾವನ !

“ನಮ್ಮೂರಿನ ಕನ್ನಡದಲ್ಲಿ ಒಂದು ಹಾಡು ಹಾಡಲೇ?’ ನಾನು ಕೇಳಿದೆ. ದುರ್ಗಾ ರಾಗದಲ್ಲಿ ವೃಂದಾವನದ ಹಾಡು- ಆಡ ಪೋಗೋಣ ಬಾರೊ ರಂಗ, ಕೂಡಿ ಯಮುನೆ ತೀರದಲ್ಲಿ ಹಾಡು ಮುಗಿಯುವಾಗ ಅವರಿಗೆಲ್ಲರಿಗೂ ಇನ್ನೂ ಆಚ್ಚರಿ. ದಾಸ ಪರಂಪರೆಯ ಸಾವಿರಾರು ಹಾಡುಗಳ ಬಗ್ಗೆ ಅವರಿಗೆ ಹೇಳಿದೆ.

“ಇದೇ ಭಾರತದ ವೈಶಿಷ್ಟ್ಯ. ವೃಂದಾವನದ ಮನಮೋಹಕ ಕಿಶೋರ ಕೃಷ್ಣ ಮುಂದೆ ದ್ವಾರಕೆಯಲ್ಲಿ. ದ್ವಾರಕೆಯಿಂದ 3-4 ಸಾವಿರ ವರುಷಗಳ ನಂತರ ನಮ್ಮ ಕರಾವಳಿಯ ಉಡುಪಿಯಲ್ಲಿ, ಗುರುವಾಯೂರಿನಲ್ಲಿ. ಇದೇ ನಮ್ಮ ಮುರಿಯದ ವಜ್ರದಂತೆ ಶಕ್ತಿಯುತ ಹಾಗೂ ಹೊಳೆಯುವ ಸಾಂಸ್ಕೃತಿಕ ಶೃಂಖಲೆ’ ಎಂದು ನಮ್ರವಾಗಿ ಅವರಿಗೆ ಹೇಳಿದೆ. ಅಲ್ಲಿ ನೆರೆದ ಎಲ್ಲರೂ ಎರಡೂ ಕೈಗಳನ್ನೆತ್ತಿ ರಾಧೆ-ರಾಧೆ ಎಂದು ಆ ಪರಮಪುರುಷನನ್ನು ಸ್ಮರಿಸಿದರು. ವೃಂದಾವನದ ಭೇಟಿಯ ಈ ಅವಿಸ್ಮರಣೀಯ ಘಟನೆಯ ಮೆಲುಕು ಹಾಕುತ್ತ ನಾವು ಮುಂದೆ ಸಾಗಿದೆವು.

Advertisement

Udayavani is now on Telegram. Click here to join our channel and stay updated with the latest news.

Next