ಬೆಂಗಳೂರು: ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂದು ವಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಉಡುಪಿಯಲ್ಲಿ ನಡೆದ ರೌಡಿಗಳ ಗ್ಯಾಂಗ್ ವಾರ್, ಚನ್ನಗಿರಿಯಲ್ಲಿ ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿಯನ್ನು ಆಧಾರವಾಗಿಟ್ಟುಕೊಂಡು ಬಿಜೆಪಿ ನಾಯಕರು ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ.
ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ರಾಜ್ಯಪಾಲರು ತತ್‌ಕ್ಷಣ ವರದಿ ಪಡೆದು ಕ್ರಮ ಕೈಗೊಳ್ಳಲಿ.ಡಿ.ಜೆ. ಹಳ್ಳಿ, ಉಡುಪಿಯಲ್ಲಿ ಸಮಾಜ ವಿರೋಧಿ ಶಕ್ತಿಗಳು ಗಲಭೆ ನಡೆಸಿದ್ದವು. ಈಗ ದಾವಣಗೆರೆ ಚನ್ನಗಿರಿಯಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಚನ್ನಗಿರಿ ಘಟನೆ ನೋಡಿದರೆ ರಾಜ್ಯದಲ್ಲಿ ಸರಕಾರ ಇದೆಯೋ ಇಲ್ಲವೋ ಎಂದು ಯೋಚಿಸುವಂತಾಗಿದೆ. ಲಾಲು ಪ್ರಸಾದ್ ನೇತೃತ್ವದ ಸರಕಾರ ಇದ್ದಾಗ ಬಿಹಾರದಲ್ಲಿದ್ದ ಪರಿಸ್ಥಿತಿಯನ್ನು ನೆನಪಿಗೆ ತರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಸರಕಾರ ಅಲ್ಪಸಂಖ್ಯಾಕರ ತುಷ್ಟೀಕರಣ ನಡೆಸಿದ್ದರ ಫಲ ಇದು. ಗೃಹ ಸಚಿವರು ಏನು ಮಾಡುತ್ತಿದ್ದಾರೆ, ಸರಕಾರ ಯಾವಾಗ ಎಚ್ಚತ್ತುಕೊಳ್ಳಲಿದೆ ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಪೊಲೀಸ್ ಠಾಣೆಗಳನ್ನು ರಾಜಕೀಯ ದ್ವೇಷ ತೀರಿಸಿಕೊಳ್ಳುವ ಅಸ್ತ್ರವಾಗಿ ಬಳಸಿಕೊಳ್ಳುವುದಕ್ಕೆ ಕಾಂಗ್ರೆಸ್ ಸರಕಾರ ಮುಂದಾಗಿದ್ದರ ಪರಿಣಾಮವಾಗಿ ಇಂದು ಕ್ರಿಮಿನಲ್‌ಗಳು ವಿಜೃಂಭಿಸುವಂತಾಗಿದೆ. ಇದು ಗೃಹ ಇಲಾಖೆ ಹಾಗೂ ಗೃಹ ಸಚಿವರ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ದೂರಿದ್ದಾರೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಪಾಪದ ಕೊಡ ತುಂಬಿದೆ. ಅಧಿಕಾರ ದುರ್ಬಳಕೆ ಮಾಡಿದ ಕಾಂಗ್ರೆಸ್ ಸರಕಾರವನ್ನು ವಜಾ ಮಾಡಿ ಎಂದು ಮಾಜಿ ಡಿಸಿಎಂ ಡಾ| ಅಶ್ವತ್ಥನಾರಾಯಣ ಒತ್ತಾಯಿಸಿದ್ದಾರೆ.
ಉಡುಪಿ-ಮಣಿಪಾಲದಲ್ಲಿ ರಾಜಾರೋಷವಾಗಿ ರೌಡಿಗಳು ಗ್ಯಾಂಗ್ ವಾರ್ ನಡೆಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಕಾರುಗಳನ್ನು ಬಳಸಿ ಕಾದಾಡಿದ್ದಾರೆ. ಕ್ರಿಮಿನಲ್‌ಗಳಿಗೆ ಆಳುವ ಸರಕಾರದ ಕಾನೂನಿನ ಭಯ ಇಲ್ಲವಾಗಿದೆ. ಇದು ಗೃಹ ಇಲಾಖೆ ಹಾಗೂ ಗೃಹ ಸಚಿವರ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ.
– ವಿ. ಸುನಿಲ್ ಕುಮಾರ್,
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಜನ ಅಧಿಕಾರ ಕೊಟ್ಟರೂ ಆಡಳಿತ ನಡೆಸುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ಸರಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಆಗ್ರಹಿಸುತ್ತೇವೆ. ಇವರ ಪಾಪದ ಕೊಡ ತುಂಬಿದೆ.
– ಡಾ| ಅಶ್ವತ್ಥನಾರಾಯಣ, ಮಾಜಿ ಡಿಸಿಎಂ
ಡಿ.ಜೆ. ಹಳ್ಳಿ, ಉಡುಪಿ ಘಟನೆ ಬಳಿಕ ಚೆನ್ನಗಿರಿಯಲ್ಲಿ ಪೊಲೀಸ್ ಠಾಣೆಗಳಿಗೆ ನುಗ್ಗಿ ಧ್ವಂಸಗೊಳಿಸುವ ಮಟ್ಟಿಗೆ ಮೂಲಭೂತವಾದಿ ಶಕ್ತಿಗಳು ಸಂಘಟಿತವಾಗಿವೆ ಎಂದರೆ ನಾವು ಎಲ್ಲಿದ್ದೇವೆ? ಲಾಲು ನೇತೃತ್ವದ ಬಿಹಾರವನ್ನು ನೆನಪಿಸುವಂತೆ ಮಾಡಿದೆ. ರಾಜ್ಯಪಾಲರು ಮಧ್ಯಪ್ರವೇಶಿಸಿ ವರದಿ ಪಡೆಯಲಿ.
– ಬಿ.ವೈ. ವಿಜಯೇಂದ್ರ,
ಬಿಜೆಪಿ ರಾಜ್ಯಾಧ್ಯಕ್ಷ