Advertisement

Satish Jarakiholi: “ಪರಿಷತ್‌ ಟಿಕೆಟ್‌: ಪ್ರಾಂತ, ಜಾತಿವಾರು ಪ್ರಾತಿನಿಧ್ಯ ನೀಡಿ”

09:47 PM May 25, 2024 | Team Udayavani |

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್‌ನ 11 ಸ್ಥಾನಗಳಿಗೆ ಜೂ.13 ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

Advertisement

ಎರಡು ದಿನಗಳ ಹಿಂದೆಯಷ್ಟೇ ಸಂಸದ ಡಿ.ಕೆ.ಸುರೇಶ್‌ ನಿವಾಸದಲ್ಲಿ ಸಚಿವರಿಗೆ ರಾತ್ರಿ ಭೋಜನದ ವ್ಯವಸ್ಥೆ ಮಾಡಿ, ಲೋಕಸಭೆ ಚುನಾವಣೆಯ “ಕ್ಷೇತ್ರ ಭವಿಷ್ಯ’ದ ವಿಚಾರ ಚರ್ಚಿಸಲಾಗಿತ್ತು.

ಇದೀಗ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಿವಾಸದಲ್ಲಿ ಶನಿವಾರ ಸೇರಿದ್ದ ಕೆಲ ಸಚಿವರು ಮತ್ತು ಶಾಸಕರು ವಿಧಾನಪರಿಷತ್‌ ಚುನಾವಣೆ ಸಂಬಂಧ ಚರ್ಚೆ ನಡೆಸಿದ್ದಾರೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಬ್ರೇಕ್‌ಫಾಸ್ಟ್‌ ಎಲ್ಲ ಏನಿಲ್ಲ. ಹಾಗೆ ಬಂದೆವು. ವಿಧಾನಪರಿಷತ್‌ ಚುನಾವಣೆ ವಿಚಾರವಾಗಿ ಮಾತುಕತೆ ನಡೆಸಿದ್ದೇವೆ ಎಂದು ಹೇಳಿದರು.

ಪ್ರಾಂತವಾರು, ಜಾತಿವಾರು ಪ್ರಾತಿನಿಧ್ಯ ಕೇಳಿದ್ದೇವೆ: ಪಕ್ಷಕ್ಕಾಗಿ ಕೆಲಸ ಮಾಡಿದ ಬಹಳಷ್ಟು ಜನರಿದ್ದಾರೆ. ಅವರಿಗೆಲ್ಲಾ ಅವಕಾಶ ಸಿಗಬೇಕು.  ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮೈಸೂರು, ಮಂಗಳೂರು ಹೀಗೆ ಪ್ರಾಂತವಾರು ಅವಕಾಶ ಕೊಡಬೇಕು. ವಿಧಾನಪರಿಷತ್‌ ಸದಸ್ಯತ್ವ  ಕೇವಲ ಬೆಂಗಳೂರಿಗೆ ಸೀಮಿತ ಆಗಬಾರದು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೆಲ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ನಮಗೆ ಯಾರು ಹೆಚ್ಚು ಮತ ಹಾಕುತ್ತಾರೋ ಅಂತಹ ಸಮುದಾಯವನ್ನು ಗುರುತಿಸಿ ಕೊಡಬೇಕು. ಅದನ್ನು ಸಿಎಂ, ಡಿಸಿಎಂ-ಅಧ್ಯಕ್ಷರು, ಹೈಕಮಾಂಡ್‌ ನಾಯಕರಿಗೂ ಹೇಳಿದ್ದೇವೆ. ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಯತೀಂದ್ರಗೆ ಸಿಕ್ಕೇ ಸಿಗುತ್ತದೆ:

Advertisement

ಸರ್ಕಾರ ರಚನೆ ಸಂದರ್ಭದಲ್ಲಿ ಯತೀಂದ್ರ ಬಗ್ಗೆ ಮಾತುಕತೆ ಆಗಿತ್ತು. ಅವರಿಗೆ ಸಿಕ್ಕೇ ಸಿಗುತ್ತದೆ. ಅದರಲ್ಲೇನೂ ಪ್ರಶ್ನೆಯೇ ಇಲ್ಲ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಕೆಲವರಿಗೆ ಮತ್ತೂಮ್ಮೆ ಅವಕಾಶ ಕೊಡಬೇಕಾಗಬಹುದು. ಅದು ಅನಿವಾರ್ಯ ಕೂಡ. ಆದರೂ ಹೊಸಬರಿಗೆ ಕೊಡಬೇಕು. ಪಕ್ಷ ಕಟ್ಟಬೇಕು. ಸಮುದಾಯಗಳು ಪ್ರಮುಖ ಪಾತ್ರ ವಹಿಸಿರುತ್ತವೆ. ಅವುಗಳಿಗೆ ಅವಕಾಶ ಸಿಗಬೇಕಲ್ಲವೇ? ಲೋಕಸಭೆ ಚುನಾವಣೆ ಸಂದರ್ಭದಲ್ಲೂ ಅವಕಾಶ ಸಿಕ್ಕಿಲ್ಲ. ಅಲ್ಪಸಂಖ್ಯಾತರಿಗೆ ಕಡ್ಡಾಯವಾಗಿ ಕೊಡಬೇಕು. ಅದನ್ನು ಬೆಂಗಳೂರು ಬಿಟ್ಟು ಹೊರಗಿನವರಿಗೆ ಕೊಡಬೇಕು ಎಂದಿದ್ದೇವೆ. ಲಂಬಾಣಿ ಸಮುದಾಯಯಲ್ಲಿ ಪ್ರಬಲವಾಗಿ ನಾಲ್ಕೈದು ಆಕಾಂಕ್ಷಿಗಳಿದ್ದಾರೆ. ಅವರಲ್ಲೂ ಒಬ್ಬರಿಗೆ ಕೊಡಬೇಕು ಎಂದು ಕೇಳಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next