Advertisement

ಶರಣರ ಕ್ಷೇತ್ರ ಅಧ್ಯಯನ-ಸಂಶೋಧನೆ

11:46 AM Jan 26, 2022 | Team Udayavani |

ಆಳಂದ: ಕಳೆದ 20 ವರ್ಷದಿಂದಲೂ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಲಭ್ಯವಿರುವ ಶರಣರ ಕ್ಷೇತ್ರಗಳನ್ನು ಸತತ ಅಧ್ಯಯನ ಆರಂಭಿಸಿರುವ ಬೆಂಗಳೂರಿನ ಸಂಶೋಧಕ ಅಶೋಕ ದೊಮ್ಮಲೂರ ಮಂಗಳವಾರ ತಾಲೂಕಿನ ಶರಣರ ಕ್ಷೇತ್ರಗಳ ಕುರಿತು ಸಮಗ್ರ ಅಧ್ಯಯನ ನಡೆಸಿದರು.

Advertisement

12ನೇ ಶತಮಾನದ ಬಸವಾದಿ ಶರಣರ ಮಾಹಿತಿ, ವಚನ ಸಾಹಿತ್ಯ, ಕಾರ್ಯಕ್ಷೇತ್ರ ಕುರಿತು ಡಿಜಿಟಲೀಕರಣ ಕಾರ್ಯ ಕೈಗೆತ್ತಿಕೊಂಡಿರುವ ದೊಮ್ಮಲೂರ ಈಗಾಗಲೇ ರಾಜ್ಯದಾದ್ಯಂತ ಏಳು ಲಕ್ಷ ಹಸ್ತಪ್ರತಿ ಪತ್ತೆ ಮಾಡಿದ್ದಾರೆ. ಅಲ್ಲದೇ, ಇನ್ನು ಬೆಳಕಿಗೆ ಬಾರದ ಅಳಿದುಳಿದ ಶರಣರ ಕ್ಷೇತ್ರಗಳ ಅಧ್ಯಯನ, ಸಂಶೋಧನೆ ಮುಂದುವರಿಸಲು ತಾಲೂಕಿಗೆ ಭೇಟಿ ನೀಡಿದ್ದರು.

ಮಂಗಳವಾರ ಬೆಂಗಳೂರಿನಿಂದ ಆಗಮಿಸಿದ್ದ ಸಂಶೋಧಕ ಅಶೋಕ ದೊಮ್ಮಲೂರ, ತಾಲೂಕಿನ ಮುನ್ನಹಳ್ಳಿ ಗ್ರಾಮದಲ್ಲಿನ ಶರಣ ಗಜೇಶ ಮಸಣ್ಣಯ್ಯ ದಂಪತಿಗಳ ಕ್ಷೇತ್ರ ಗೋಳಾ (ಬಿ) ಗ್ರಾಮದಲ್ಲಿ ಲಕ್ಕಮ್ಮನ ದೇವಸ್ಥಾನ, ಆಳಂದದಲ್ಲಿ ಶರಣ ಏಕಾಂತರಾಮಯ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿನ ಗದ್ದುಗೆ, ದೇವಾಲಯ ಪರಿಸರ, ದಾಖಲೆಗಳ ಕುರಿತು ಸ್ಥಳೀಯರಿಂದ ಮಾಹಿತಿ ಕಲೆಹಾಕಿದರು.

ಬಳಿಕ ಸುಂಟನೂರ ಹತ್ತಿರದ ಬಸವಂತವಾಡಿ ಗ್ರಾಮದಲ್ಲಿನ ಮಾರಯ್ಯನ ಕ್ಷೇತ್ರ, ಅಫಜಲಪುರ ತಾಲೂಕಿನ ಶರಣಿ ನೀಲೂರ ನಿಂಬೆಕ್ಕನ ಕ್ಷೇತ್ರಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.

ಜತೆಯಲ್ಲಿ ಜಿಲ್ಲಾ ಜಾಗತಿಕ ಲಿಂಗಾಯಿತ ಮಹಾಸಭಾ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್‌, ಆಳಂದದಲ್ಲಿ ರಮೇಶ ಲೋಹಾರ, ಬಾಬುರಾವ್‌ ಮಡ್ಡೆ, ಮುನ್ನೊಳ್ಳಿಯ ಗ್ರಾಮದಲ್ಲಿ ಶಿವಪುತ್ರಪ್ಪ ಪಾಟೀಲ, ಸಿದ್ಧು ವೇದಶೆಟ್ಟಿ ಇನ್ನಿತರರು ಇದ್ದರು. ಗೋಳಾ ಗ್ರಾಮದಲ್ಲಿ ಬಸವರಾಜ ಉಪ್ಪಿನ ಹಾಗೂ ಸಂಶೋಧಕರಿಗೆ ಕ್ಷೇತ್ರದ ಮಾಹಿತಿ ಒದಗಿಸಿದರು.

Advertisement

ಗೋಳಾದಲ್ಲಿ ಲಕ್ಕಮ್ಮನ ದೇವಸ್ಥಾನ ಪ್ರಸಿದ್ಧಿ ಪಡೆದುಕೊಂಡಿದ್ದು, 12ನೇ ಶತಮಾನದಲ್ಲಿ ಆಯ್ದಕ್ಕಿ ಲಕ್ಕಮ್ಮನವರು ಈ ಭಾಗದಲ್ಲಿ ಸಂಚರಿಸಿರಬಹುದು ಎನ್ನುವ ಕುರಿತು ಬೆಳಕಿಗೆ ಬರಬೇಕಿದೆ. ಲಕ್ಕಮ್ಮ ಎಂಬ ದೇವಸ್ಥಾನ ಗೋಳಾದಲ್ಲಿದ್ದರೆ, ನೆರೆಯ ಬಸವಂತವಾಡಿ ಗ್ರಾಮದಲ್ಲಿ ಶರಣಿ ಆಯ್ದಕ್ಕಿ ಲಕ್ಕಮನ ಪತಿ ಮಾರಯ್ಯನವರ ದೇವಸ್ಥಾನಕ್ಕೂ ಭೇಟಿ ನೀಡಿ ಸಂಶೋಧಕರು ಮಾಹಿತಿ ಕಲೆಹಾಕಿದರು.

ಇದೇ ವೇಳೆ ಮಾತನಾಡಿದ ಸಂಶೋಧಕ ಅಶೋಕ ದೊಮ್ಮಲೂರ ಅವರು, ಸದ್ಯ ಶರಣರ ಕ್ಷೇತ್ರಗಳಿಗೆ ಭೇಟಿ ಮಾಡಿ, ಈಗಾಗಲೇ ದಾಖಲಾದ ಶರಣ ಕ್ಷೇತ್ರಗಳು ಮತ್ತು ಅವರ ವಚನ ಸಾಹಿತ್ಯ, ಇನ್ನುಳಿದ ಬೇರೆ ಬೇರೆ ಕಡೆ ಅವರ ಕಾರ್ಯಕ್ಷೇತ್ರಗಳ ಮಾಹಿತಿ ಸಂಗ್ರಹಿಸಿ ನೈಜತೆ ಕರಿತು ತಾಳೆಮಾಡಿ ಡಿಜಿಟಲೀಕರಣ ಕೈಗೊಳ್ಳಲಾಗುತ್ತಿದೆ. ಒಬ್ಬ ಶರಣರ ಕುರಿತು ಮಾಹಿತಿ ಇದ್ದರೂ ಆ ಸ್ಥಳಕ್ಕೆ ಭೇಟಿ ನೀಡಲಾಗುತ್ತಿದೆ ಎಂದು ಹೇಳಿದರು.

ವಚನಗಳಲ್ಲಿ ಉಲ್ಲೇಖವಾಗಿರುವ ಶರಣರ ಮಾಹಿತಿ ದಾಖಲೀಖರಣ ಮಾಡಲಾಗುತ್ತಿದೆ. ಯಾವ ಕ್ಷೇತ್ರಗಳಲ್ಲಿ ಸ್ಮಾರಕ ಮತ್ತು ಕುರುಹುಗಳು ಇವೆಯೋ ಅವುಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ತಾಳೆಗೆರೆ, ಹಸ್ತಪ್ರತಿಗಳು ಹಾಗೂ ಹೊಸ ವಚನಗಳಲ್ಲಿನ ಉಲ್ಲೇಖಗಳ ಪರಿಶೀಲನೆ ಹೊಂದಾಣಿಕೆ ಮಾಡಿ ಸಂಗ್ರಹಿಸಿ ದಾಖಲೀಕರಣ ಅಂತಿಮ ಮಾಡಲಾಗುತ್ತಿದೆ. ಶರಣರ ಕ್ಷೇತ್ರಗಳಲ್ಲಿ, ಮಠಗಳಲ್ಲಿ, ದೇವಸ್ಥಾನಗಳಲ್ಲಿ ಹಸ್ತಪ್ರತಿ, ತಾಳೆಗೆರೆ ಇದ್ದರೆ ಅವುಗಳನ್ನು ಸ್ಕ್ಯಾನ್‌ ಮಾಡಿ ಮರಳಿ ಕೊಡಲಾಗುತ್ತಿದೆ. ಇದಕ್ಕೆ ಸಾರ್ವಜನಿಕರು, ಧರ್ಮಾಧಿಕಾರಿಗಳು, ಮಠಾಧೀಶರು ಸಹಕರಿಸಬೇಕು. -ಅಶೋಕ ದೊಮ್ಮಲೂರ, ಸಂಶೋಧಕ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next