Advertisement
ಶ್ರೀಮಾತೆಯವರ ಪ್ರೇಮ ಆಕಾಶ ದಷ್ಟು ವಿಶಾಲ, ಸಮುದ್ರದಷ್ಟು ಆಳ. ಅವರ ಪ್ರೀತಿ ಬಡವ – ಬಲ್ಲಿದ, ಉತ್ತಮ – ಅಧಮ, ಸಂನ್ಯಾಸಿ – ಗೃಹಸ್ಥ, ಮುಂತಾದ ಯಾವುದೇ ಭೇದಭಾವಗಳಿಲ್ಲದೆ ಎಲ್ಲರನ್ನೂ ತಬ್ಬಿಕೊಂಡಿತ್ತು. ಆ ಪ್ರೇಮವು ಆಧ್ಯಾತ್ಮಿಕತೆಯಿಂದ ಪ್ರೇರಣೆ ಗೊಂಡಿದ್ದರಿಂದ, ಅಲ್ಲಿ ಯಾವುದೇ ಸ್ವಾರ್ಥ, ಕಪಟತನವಿರಲಿಲ್ಲ. ಆದ್ದರಿಂದಲೇ ಅವರನ್ನು ವಾತ್ಸಲ್ಯ ತೀರ್ಥ, ಮಹಾಮಾತೆ ಎಂದು ಕರೆಯುವುದು.
ಶ್ರೀಮಾತೆಯವರು 1911ರ ಮಾರ್ಚ್‌ನಲ್ಲಿ ಬೆಂಗಳೂರಿಗೆ ಆಗಮಿಸಿದ್ದರು ಎಂದು ನಮಗೆಲ್ಲ ತಿಳಿದೇ ಇದೆ. 3 ದಿವಸ, 4 ರಾತ್ರಿಗಳನ್ನು ಬೆಂಗ ಳೂರಿನ ಬಸವನಗುಡಿಯಲ್ಲಿರುವ ಶ್ರೀರಾಮಕೃಷ್ಣ ಮಠದಲ್ಲಿ ಶ್ರೀಮಾತೆಯವರು ಕಳೆದರು. ಅಂದು ಅವರು ವಾಸವಾಗಿದ್ದ ಕೋಣೆಯನ್ನೇ ಇಂದೂ ಶ್ರೀಮಾತೆಯವರ ಗರ್ಭಮಂದಿರವಾಗಿ ನೋಡಬಹುದು. ಅಲ್ಲದೆ ಶ್ರೀಮಾತೆಯವರು ಕುಳಿತು ಧ್ಯಾನ ಮಾಡಿದ್ದ ಜಾಗವು ಶ್ರೀಮಾತೆಯ ಶಿಲಾಸನ ಎಂದು ಪ್ರಸಿದ್ಧಿ ಪಡೆದಿದೆ. ಹುಡುಗನೊಬ್ಬನು ಹತ್ತನೆಯ ತರಗತಿಯಲ್ಲಿ ಓದುತ್ತಿದ್ದ. ಅವನಿಗೆ ಶ್ರೀಮಾತೆಯವರು ಬೆಂಗಳೂರಿಗೆ ಬಂದಿರುವ ವಿಷಯ ತಿಳಿಯಿತು. ಆಶ್ರಮದ ಹೊರಗೆ ಗೇಟಿನ ಬಳಿ ಬಹಳ ಹೊತ್ತು ನಿಂತಿದ್ದ. ತಮ್ಮ ಕೊಠಡಿಯಿಂದ ಇದನ್ನು ಗಮನಿಸಿದ ಶ್ರೀಮಾತೆಯವರು, ಭಕ್ತನೊಬ್ಬನ ಬಳಿ “ಮಗು, ಆ ಹುಡುಗ ಯಾಕೆ ಒಳಗೆ ಬರುತ್ತಿಲ್ಲ?’ ಎಂದು ಕೇಳಿದರು. ಅದಕ್ಕೆ ಭಕ್ತನು, “ಅಮ್ಮ, ಅವನು ಹಿಂದುಳಿದ ಪಂಗಡಕ್ಕೆ ಸೇರಿದವನು. ಅವನು ಸ್ನಾನ ಮಾಡಿಲ್ಲ, ಶುಚಿಯಾದ ಬಟ್ಟೆಯನ್ನು ಹಾಕಿಲ್ಲ. ಆದ್ದರಿಂದ ಅವನನ್ನು ಒಳಗೆ ಹೇಗೆ ಬಿಡುವುದು?’ ಎಂದನು. ಥಟ್ಟನೆ ಶ್ರೀಮಾತೆಯವರು, “ಮಗು, ಹಾಗಾದರೆ ಅವನು ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿ ಬಂದರೆ ನಿನಗೆ ಅಭ್ಯಂತರವಿಲ್ಲ ತಾನೇ?’ ಎಂದರು. ಭಕ್ತನು “ಇಲ್ಲ’ ಎಂದ. ಶ್ರೀಮಾತೆಯವರು, “ಹಾಗಾದರೆ ನಾಳೆ ಸ್ನಾನ ಮಾಡಿಕೊಂಡು ಶುಭ್ರವಾದ ಬಟ್ಟೆಯನ್ನು ಹಾಕಿ ಕೊಂಡು ಬಂದು ನನ್ನನ್ನು ಕಾಣಲು ಆ ಬಾಲಕನಿಗೆ ತಿಳಿಸು’ ಎಂದು ಭಕ್ತನಿಗೆ ಹೇಳಿದರು. ಶ್ರೀಮಾತೆ ಯವರ ಮಾತನ್ನು ಬಾಲಕನಿಗೆ ತಿಳಿಸಲಾಯಿತು. ಆ ಬಾಲಕನು ಸಂತೋಷದಿಂದ ಮನೆಗೆ ತೆರಳಿದನು.
Related Articles
Advertisement
ಒಂದು ದಿನ ಸಂಜೆ, ಭಕ್ತರೊಬ್ಬನು ಶ್ರೀಮಾತೆ ಯವರ ಬಳಿ ಬಂದು “ದಯಮಾಡಿ ತಾವು ನನ್ನ ಮನೆಗೆ ಬರಬೇಕು. ಪ್ರಸಾದವನ್ನು ಸ್ವೀಕರಿಸಿ, ನಮಗೆ ಅನುಗ್ರಹ ಮಾಡಬೇಕು’ಎಂದು ಪ್ರಾರ್ಥಿಸಿದನು. ಶ್ರೀಮಾತೆಯವರು ಒಪ್ಪಿ, “ನಮ್ಮಲ್ಲಿ ನಿತ್ಯ ಬಂದು ನನ್ನ ಸೇವೆ ಮಾಡುತ್ತಿರುವ ಹಿಂದುಳಿದ ಪಂಗಡದ ಬಾಲಕನನ್ನೂ ನೀನು ಆಹ್ವಾನಿಸಬೇಕು, ಇಲ್ಲದಿದ್ದರೆ ನಾನು ಬರುವುದಿಲ್ಲ’ ಎಂದು ಷರತ್ತು ಹಾಕಿದರು. ಭಕ್ತನು ಒಲ್ಲದ ಮನಸ್ಸಿನಿಂದ ಆ ಷರತ್ತಿಗೆ ಒಪ್ಪಿದನು.
ಮಾರನೆಯ ದಿವಸ ಆ ಬಾಲಕನು ಮಧ್ಯಾಹ್ನವೇ ಆಶ್ರಮಕ್ಕೆ ಬಂದನು. ಶ್ರೀಮಾತೆ ಯವರ ಜತೆ ಭಕ್ತನ ಮನೆಗೆ ಬಾಲಕನೂ ತೆರಳಿದನು. ಶ್ರೀಮಾತೆಯವರು ತಮ್ಮ ಎಲೆಯಲ್ಲಿ ಬಡಿಸಿದ್ದ ಎಲ್ಲ ಪದಾರ್ಥಗಳನ್ನು ಸ್ವಲ್ಪವೇ ಸ್ವೀಕರಿಸಿ ಉಳಿದ ಪ್ರಸಾದವನ್ನು ಆ ಬಾಲಕನಿಗೆ ನೀಡಿದರು. ಪ್ರಸಾದವನ್ನು ಅಲ್ಲಿ ನೆರೆದಿದ್ದ ಭಕ್ತರೆಲ್ಲರಿಗೂ ಹಂಚಲು ಆದೇಶಿಸಿದರು. ಜಗನ್ಮಾತೆಯ ಆದೇಶ! ಯಾರಾದರೂ ತಿರಸ್ಕರಿಸಲು ಸಾಧ್ಯವೇ?!
ಅಲ್ಲಿದ್ದ ಹಿರಿಯ ಸನ್ಯಾಸಿಗಳೊಬ್ಬರು, “ನೋಡಿ, ಶ್ರೀಮಾತೆಯವರು ಈ ಮೂಲಕ ಸರಿಯಾದ ಆಚರಣೆಯನ್ನು ನಮಗೆ ತೋರಿಸಿದ್ದಾರೆ. ಇನ್ನು ಮೇಲೆ ಅಸ್ಪಶ್ಯತೆ ನಮ್ಮ ದೇಶದಲ್ಲಿ ಉಳಿಯಲಾರದು’ಎಂದರು. ಆ ಬಾಲಕನ ಹೆಸರು ಆದಿಮೂಲಂ ಎಂದು.
ಅವರು ಮುಂದೆ ಶಿವನಸಮುದ್ರದ ಜಲ ವಿದ್ಯುತ್ ಯೋಜನೆಯಲ್ಲಿ ಫೋರ್‌ಮನ್ ಆಗಿದ್ದರು. ಜಮ್‌ಶೆಡ್‌ಪುರದಲ್ಲಿರುವ ರಾಮಕೃಷ್ಣ ಮಠದ ಅಧ್ಯಕ್ಷರಾಗಿ ಬಹಳ ಕಾಲ ಸೇವೆ ಸಲ್ಲಿಸಿ, ಶ್ರೀಮಾತೆಯವರಿಂದ ಮಂತ್ರ ದೀಕ್ಷೆಯನ್ನು ಪಡೆದಿದ್ದ ಸ್ವಾಮಿ ಆದಿನಾಥಾನಂದರು (ಕಾಳಿದಾ ಮಹಾರಾಜ್) ದಕ್ಷಿಣ ಭಾರತಕ್ಕೆ ಬಂದಾಗ ಆದಿಮೂಲಂನ ಮನೆಯಲ್ಲಿಯೇ ತಂಗಿದ್ದರು. ಅವರಿಬ್ಬರೂ ಶ್ರೀಮಾತೆಯವರ ಕುರಿತು ಮಾತನಾಡುತ್ತಿದ್ದಾಗ, ಸ್ವಾಮಿ ಆದಿನಾಥಾನಂದರು ಆದಿಮೂಲಂನನ್ನು ಶ್ರೀಮಾತೆಯವರ ಭೇಟಿಯ ಕುರಿತು ಕೇಳಿದಾಗ, “ನಾನೀಗ ಏನಾಗಿರುವೆನೋ ಅದೆಲ್ಲವೂ ಶ್ರೀಮಾತೆಯ ಕೃಪೆಯಿಂದಲೇ’ಎಂದು ಕಂಬನಿ ಸುರಿಸಿದವರು ಆದಿಮೂಲಂ.
ಜಗನ್ಮಾತೆಯು ಪ್ರೇಮಾಂಬುದಿ ಅಲ್ಲವೇ!
ಸ್ವಾಮಿ ಶಾಂತಿವ್ರತಾನಂದ, ಶ್ರೀರಾಮಕೃಷ್ಣ ಆಶ್ರಮ, ಮೈಸೂರು