Advertisement
ಸಾಮಾನ್ಯ ಕಾರ್ಯಕರ್ತರ ಅಭಿಪ್ರಾಯವೂ ಸೇರಿದಂತೆ ವರಿಷ್ಠರು ನಾನಾ ಮೂಲಗಳು, ಸಮೀಕ್ಷೆಗಳಿಂದ ಪಡೆಯುವ ಮಾಹಿತಿ ಆಧರಿಸಿ ಪಕ್ಷದ ಕೇಂದ್ರ ಚುನಾವಣಾ ಸಮಿತಿಯು ವಿಸ್ತೃತ ಚರ್ಚೆ ನಡೆಸಿದ ಬಳಿಕವಷ್ಟೇ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುತ್ತದೆ. ಈ ಇಡೀ ಪ್ರಕ್ರಿಯೆಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿಯ ಪಾತ್ರ ಶೇ.30ರಷ್ಟು ಮಾತ್ರ ಎಂಬುದು ವಿಶೇಷ.
Related Articles
Advertisement
ಒಟ್ಟಾರೆ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ರಾಷ್ಟ್ರೀಯ ನಾಯಕರು ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ವಿಶೇಷ ಒತ್ತು ನೀಡಿದ್ದಾರೆ. ಎಲ್ಲ ಮೂಲಗಳ ಮಾಹಿತಿಯಲ್ಲೂ ಶಿಫಾರಸುಗೊಂಡಿರುವ ಹೆಸರುಗಳನ್ನೇ ಕ್ರೋಢೀಕರಿಸಿ ಸಾಧಕ- ಬಾಧಕ ಪರಿಶೀಲಿಸಿ ಸೂಕ್ತವೆಂದು ಮನವರಿಕೆಯಾದರಷ್ಟೇ ಅಂತಿಮಗೊಳಿಸುವ ವ್ಯವಸ್ಥೆ ರೂಪುಗೊಂಡಿದೆ. ಸಮರ್ಥ ಅಭ್ಯರ್ಥಿ ಆಯ್ಕೆಯಾದರೆ ಗೆಲುವಿಗೂ ಸಹಕಾರಿಯಾಗುವ ಉದ್ದೇಶದಿಂದ ಈ ವ್ಯವಸ್ಥೆ ಉಪಯುಕ್ತವಾಗಿದೆ ಎಂದು ರಾಜ್ಯ ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದರು.
ಪಕ್ಷಪಾತಕ್ಕೆ ಅವಕಾಶವಿಲ್ಲ: ನಾನಾ ಪ್ರಭಾವ, ಒತ್ತಡ, ಸ್ವಹಿತಾಸಕ್ತಿ ಇತರೆ ಕಾರಣಗಳಿಗೆ ಅರ್ಹ ಅಭ್ಯರ್ಥಿಗಳು, ಆಕಾಂಕ್ಷಿಗಳಿದ್ದರೂ ಅವರನ್ನು ಕಡೆಗಣಿಸಿ ಪಕ್ಷಪಾತ ತೋರಲು ಈಗಿನ ವ್ಯವಸ್ಥೆಯಲ್ಲಿ ಅವಕಾಶವೇ ಇಲ್ಲ. ಏಕೆಂದರೆ ಕಾರ್ಯಕರ್ತರು, ನಾನಾ ಆ್ಯಪ್‌ಗ್ಳಲ್ಲಿ ಸಲ್ಲಿಕೆಯಾದ ಮಾಹಿತಿ, ಸಮೀಕ್ಷಾ ವರದಿ, ಸಂಘ ಪರಿವಾರ ಮೂಲದ ಮಾಹಿತಿ ಪ್ರಕಾರ ಗೆಲ್ಲುವ ಸಾಧ್ಯತೆ ಇರುವ, ವರ್ಚಸ್ಸು ಹೊಂದಿರುವ ಅಭ್ಯರ್ಥಿಗಳ ಬಗ್ಗೆ ಮಾಹಿತಿಯನ್ನು ವರಿಷ್ಠರು ಇಟ್ಟುಕೊಂಡಿರುತ್ತಾರೆ.
ಒಂದೊಮ್ಮೆ ಕೋರ್ ಕಮಿಟಿಯಿಂದ ಶಿಫಾರಸುಗೊಂಡ ಪಟ್ಟಿಯಲ್ಲಿ ಇಲ್ಲದ ಸಂಭಾವ್ಯ ಅಭ್ಯರ್ಥಿ ಹೆಸರು ವರಿಷ್ಠರು ಪಡೆದ ಇತರೆ ಮೂಲಗಳ ಮಾಹಿತಿಯಲ್ಲಿ ಉಲ್ಲೇಖವಾಗಿದ್ದರೆ ಆ ಬಗ್ಗೆ ಪ್ರಶ್ನೆ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಾಕಷ್ಟು ಎಚ್ಚರಿಕೆ, ಸಮಗ್ರ ಚರ್ಚೆ ನಡೆಸಿದ ಬಳಿಕವಷ್ಟೇ ಶಿಫಾರಸು ಮಾಡುವುದು ಅನಿವಾರ್ಯ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ರಾಜ್ಯವೊಂದರಲ್ಲಿ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಚರ್ಚೆ ನಡೆಯುವಾಗ ಶಿಫಾರಸುಗೊಂಡ ಸಂಭಾವ್ಯ ಪಟ್ಟಿಯಲ್ಲಿ ಉಲ್ಲೇಖವಾಗದ ಅಭ್ಯರ್ಥಿಯ ಹೆಸರನ್ನು ಸ್ವತಃ ವರಿಷ್ಠರೇ ಪ್ರಸ್ತಾಪಿಸಿ ಈ ಅಭ್ಯರ್ಥಿ ಹೆಸರು ಏಕಿಲ್ಲ ಎಂದು ಪ್ರಶ್ನಿಸಿದ್ದಾರೆ. ಸಮಗ್ರ ಚರ್ಚೆಯ ಬಳಿಕ ಕೆಲ ಕ್ಷೇತ್ರಗಳ ಅಭ್ಯರ್ಥಿಗಳ ಬದಲಾವಣೆ ನಿರ್ಣಯ ಕೈಗೊಂಡ ಪ್ರಸಂಗವೂ ನಡೆದಿದೆ ಎನ್ನಲಾಗಿದೆ.
“ಸಪ್ತ ಮೂಲ’ ವರದಿ: ಪಕ್ಷದ ವರಿಷ್ಠರು ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಪಟ್ಟಂತೆ ಏಳು ಮೂಲಗಳ ವರದಿಗಳನ್ನು ಪ್ರಧಾನವಾಗಿ ಪರಿಗಣಿಸಲಿದ್ದಾರೆ. ಕಾರ್ಯಕರ್ತರು, ಬೂತ್‌ಮಟ್ಟದ ಸಮಿತಿ, ಶಕ್ತಿ ಕೇಂದ್ರ ಪ್ರಮುಖರು ಸೇರಿದಂತೆ ತಳಹಂತದಿಂದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯೊಂದು ಕೇಂದ್ರ ಚುನಾವಣಾ ಸಮಿತಿಗೆ ಸಲ್ಲಿಕೆಯಾಗುತ್ತದೆ.
ಬಳಿಕ ರಾಜ್ಯ ಬಿಜೆಪಿ ಕೋರ್ ಕಮಿಟಿಯು ಸಂಭಾವ್ಯರ ಪಟ್ಟಿಯನ್ನು ಶಿಫಾರಸು ಮಾಡಲಿದ್ದು, ಪ್ರಮುಖ ಮೂಲ ಎನಿಸಿದೆ. “ನಮೋ ಆ್ಯಪ್’ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣ ಮೂಲಗಳಿಂದ ಪಡೆಯುವ ಪ್ರತಿಕ್ರಿಯೆ, ಅಭಿಪ್ರಾಯವನ್ನೂ ಸಮಿತಿ ಗಂಭೀರವಾಗಿಯೇ ಪರಿಗಣಿಸಲಿದೆ.
ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದು, ಈ ಮೂಲಗಳ ಮಾಹಿತಿಗೂ ವಿಶೇಷ ಒತ್ತು ನೀಡಲಾಗುತ್ತದೆ. ಜತೆಗೆ ವರಿಷ್ಠರು ಮೂರು ಪ್ರತ್ಯೇಕ ಸಂಸ್ಥೆಗಳ ಮೂಲಕ ಪ್ರತ್ಯೇಕವಾಗಿ ಸಮೀಕ್ಷೆಗಳನ್ನು ನಡೆಸಿ ಆ ವರದಿಯನ್ನೂ ಪರಿಶೀಲಿಸಲಿದ್ದಾರೆ. ಜತೆಗೆ ಸಂಘ ಪರಿವಾರದ ಮೂಲದಿಂದಲೂ ಸಂಭಾವ್ಯ ಅಭ್ಯರ್ಥಿಗಳ ಮಾಹಿತಿ ಪಡೆಯಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.
* ಎಂ.ಕೀರ್ತಿಪ್ರಸಾದ್