ಹೆಣ್ಣಿಗೆ ಚೆಂದದ ಉಡುಗೆ ಸೀರೆ. ಆದರೆ, ಈ ಸೀರೆ ಚೆಂದ ಕಾಣಬೇಕೆಂದರೆ ಅದಕ್ಕೆ ಹಾಕುವ ರವಿಕೆಯೂ ಅಷ್ಟೇ ಸೊಗಸಾಗಿ ಫ್ಯಾಷನಬಲ್ ಆಗಿ ಇರಬೇಕು. ಈಗೀಗ ಬೀದಿಬೀದಿಯಲ್ಲಿ ಬೋಟಿಕ್‌ಗಳು ಹುಟ್ಟಿಕೊಂಡಿವೆ. ಚೆಂದ ಚೆಂದದ ರವಿಕೆಗಳನ್ನು ಹೊಲಿದು ಕೊಡುತ್ತಾರೆ. ಸೀರೆಯ ಅರ್ಧ ಬೆಲೆಯಷ್ಟು ರವಿಕೆ ಹೊಲಿಸುವುದಕ್ಕೇ ಕೊಡಬೇಕಾಗುತ್ತದೆ. ಆದರೂ ಈಗಿನ ಫ್ಯಾಷನ್ ಯುಗದಲ್ಲಿ ಬೆಲೆಯನ್ನು ಯಾರೂ ಲೆಕ್ಕವಿಡುವುದಿಲ್ಲ. ತಮ್ಮ ಸೀರೆಯ ಅಂದವನ್ನು ಮತ್ತಷ್ಟು ಹೆಚ್ಚಿಸುವ ರವಿಕೆಗಳನ್ನು ಹೊಲಿಸುವುದರಲ್ಲಿ ಸ್ತ್ರೀಯರು ಪರಿಣಿತರು.
ಪ್ಲೇನ್ ಜಾರ್ಜೆಟ್ ಸೀರೆಗೆ ಎಂಬ್ರಾಯಿಡರಿ ಕೆಲಸ ಮಾಡಿದ ರವಿಕೆ ಚೆಂದ ಕಾಣುತ್ತದೆ. ಇನ್ನು ರೇಷ್ಮೆ ಸೀರೆಗಳಿಗಂತೂ ರವಿಕೆಗಳು ನಮ್ಮ ಅನುಕೂಲಕ್ಕೆ ತಕ್ಕಂತ ಡಿಸೈನುಗಳಲ್ಲಿ ಹೊಲೆಸಬಹುದು. ಕಾಸು ನಾವು ಎಷ್ಟು ಕೊಡುತ್ತೇವೋ ಡಿಸೈನ್ ಅಷ್ಟು ಉತ್ಕೃಷ್ಟವಾಗಿರುತ್ತದೆ. ಕತ್ತಿಗೆ ತೋಳಿಗೆ ಮಣಿಗಳನ್ನು ಪೋಣಿಸಿ ಹೊಲೆಸಿಕೊಳ್ಳಬಹುದು. ಬಣ್ಣಬಣ್ಣದ ಲೇಸ್‌ನಿಂದಲೂ ಅಲಂಕರಿಸಬಹುದು. ಮಣಿಗಳಲ್ಲಿ ಮುತ್ತಿನ ಮಣಿಗಳು, ಬಂಗಾರವರ್ಣದ ಮಣಿಗಳು ನಿಮ್ಮ ಸೀರೆಗೆ ಬಣ್ಣಕ್ಕೆ , ಡಿಸೈನಿಗೆ ತಕ್ಕಂತೆ ಆಯ್ದುಕೊಂಡು ಹೊಲಿಸಬಹುದು. ಬೆನ್ನಿನ ಭಾಗದಲ್ಲಿ ಟೈಯಿಂಗ್ ಹಿಡಿಸುವುದೂ ಬಿಡುವುದೂ ನಿಮ್ಮಿಷ್ಟ. ಟೈ ಮಾಡಿಸಿದರೆ ಅದಕ್ಕೆ ಮುತ್ತಿನ ಗೊಂಚಲನ್ನು ಇಳಿಬಿಡಬಹುದು. ಈಗೀಗ ಇಂಥ ಗೊಂಚಲುಗಳು ವಿವಿಧ ಬಗೆಯಲ್ಲಿ ಸಿಗುತ್ತದೆ. ಇದಕ್ಕೆಂದೇ ಪ್ರತ್ಯೇಕ ಅಂಗಡಿಗಳಿವೆ. ಈ ಗೊಂಚಲುಗಳು ನಿಮ್ಮ ರವಿಕೆಯ ಸೊಬಗನ್ನು ಹೆಚ್ಚಿಸುತ್ತದೆ.
ಗೋಲ್ಡನ್ ಲೇಸ್, ಸಿಲ್ವರ್ ಲೇಸ್ ಕೆಲಸ ಮಾಡಿಸಿದ ರವಿಕೆಗಳೂ ಚೆಂದ ಕಾಣುತ್ತದೆ. ಕೆಲವೊಮ್ಮೆ ರವಿಕೆಗಾಗಿ ಸೀರೆ ಕೊಳ್ಳುವುದೂ ನಡೆಯುತ್ತದೆ. ಬಂಗಾರ ಬಣ್ಣದ ಟಿಷೂ ಅಥವಾ ಜೆಕಾರ್ಡ್ ಬಟ್ಟೆಯಲ್ಲಿ ಹೊಲಿಸಿದ ರವಿಕೆಗೆ ಯಾವ ಸೀರೆಯೂ ಮ್ಯಾಚ್ ಆಗುತ್ತದೆ. ಈ ಬಟ್ಟೆಯೇ ಥಳಥಳಿಸುವುದರಿಂದ ಇದಕ್ಕೆ ಪ್ರತ್ಯೇಕ ಕುಸುರಿ ಕೆಲಸ ಬೇಕಾಗಿಲ್ಲ. ಈಗ ವೆಲ್ವೆಟ್ ಬಟ್ಟೆ ಥಾನಿನಲ್ಲಿ ವಿವಿಧ ಬಣ್ಣಗಳಲ್ಲಿ ಸಿಗುತ್ತದೆ. ವೆಲ್ವೆಟ್ ಬಟ್ಟೆ ಬಹಳ ಮೃದು ಹಾಗೂ ಹೊಳಪು. ಇದರಲ್ಲಿ ಕ್ಯಾಪ್ ಸ್ಲಿàವ್ಸ್ (ಅರ್ಧ ತೋಳು) ಇಡಿಸಿ ತೋಳಿಗೆ ಹಾಗೂ ಕತ್ತಿನ ಭಾಗದಲ್ಲಿ ಲೇಸ್ ವರ್ಕ್ ಮಾಡಿಸಿ ಜಾರ್ಜೆಟ್ ಅಥವಾ ಶಿಫಾನ್ ಸೀರೆಗೆ ಈ ರವಿಕೆಯನ್ನು ತೊಟ್ಟು ಯಾವುದಾದರೂ ಸಮಾರಂಭಕ್ಕೆ ಹೋದರೆ ಆ ಮೆಹಫೀಲ್‌ನ ಕಳೆ ನಿಮ್ಮಿಂದಲೇ ಏರುತ್ತದೆ.
ಇಲ್ಲಿ ನೋಡಿ ಎಲ್ಲೋ ಫ್ಯಾಷನ್ಸ್‌ನವರು ವಿವಿಧ ಬಗೆಯ ರೆಡಿಮೇಡ್ ಫ್ಯಾಷನೇಬಲ್ ರವಿಕೆಗಳನ್ನು ನಿಮಗಾಗಿ ಬಿಡುಗಡೆ ಮಾಡಿದ್ದಾರೆ. ಈ ಗೋಲ್ಡನ್ ಕಲರಿನ ಟಿಶ್ಯೂ ರವಿಕೆ ನೋಡಿ ಇದನ್ನು ಯಾವುದೇ ರೇಷ್ಮೆ ಸೀರೆಯ ಮೇಲೆ ರಿಸಬಹುದು.
ಈ ರಾಯಲ್ ಬ್ಲೂ ಕಲರ್, ಪಿಂಕ್ ಕಲರ್, ಮೆರೋನ್ ಕಲರ್ ಗ್ರೀನ್ ಕಲರ್, ಹೀಗೆ ವಿವಿಧ ವೆಲ್ವೆಟ್ಟಿನ ರವಿಕೆಗಳಿವೆ. ಇದನ್ನು ಯಾವುದಾದರೂ ಡಿಸೈನರ್ ಸೀರೆಗೆ ಹಾಕಬಹುದು. ಸಿಲ್ವರ್ ಹಾಗೂ ಗೋಲ್ಡನ್ ಕಲರಿನ ಜೂಟ್ ಮೆಟೀರಿಯಲ್ಲಿನ ರವಿಕೆಗಳಿವೆ. ಇದನ್ನು ಪ್ಲೇನ್ ಕಪ್ಪು ಅಥವಾ ಬಿಳಿ ಅಥವಾ ಯಾವುದಾದರೂ ತಿಳಿಬಣ್ಣದ ಸೀರೆಗಳಿಗೆ ಧರಿಸಿದರೆ ಚೆಂದ ಕಾಣುತ್ತದೆ.
ಕಪ್ಪು ಬಣ್ಣಕ್ಕೆ ಸಿಲ್ವರ್ ಲೇಸ್ ವರ್ಕ್ ಮಾಡಿರುವ ಈ ರವಿಕೆ ನೋಡಿ ಇದಂತೂ ಟಿಷೂ ಅಥವಾ ಜೆಕಾರ್ಡ್ ಸೀರೆಗೆ ಎದ್ದು ಕಾಣುತ್ತದೆ. ನೂರು ಜನರಲ್ಲಿ ನಿಮ್ಮನ್ನು ಪ್ರತ್ಯೇಕವಾಗಿ ಕಾಣುವಂತೆ ಮಾಡುವುದರಲ್ಲಿ ಈ ರವಿಕೆಯ ಪಾತ್ರ ಬಹು ಮುಖ್ಯ. ಅಳತೆಗಳನ್ನು ಅವರೇ ಕೊಟ್ಟಿದ್ದಾರೆ. ನಿಮ್ಮ ಹೊಂದುವ ಅಳತೆಯನ್ನು ಆರಿಸಿಕೊಳ್ಳಬಹುದು. ಟಿಶ್ಯು ಸೀರೆಯನ್ನು ಉಡುವುದರಿಂದ ಸ್ವಲ್ಪ ದಪ್ಪವಾಗಿ ಕಾಣುತ್ತೀರಿ ಹಾಗೂ ಒಳ್ಳೆಯ ಬಾಡಿಶೇಪ್ ಕಾಣುತ್ತದೆ. ಡಾರ್ಕ್ ಕಲರ್‌ಗಳನ್ನು ಆರಿಸಿಕೊಳ್ಳಬಹುದು. ಮದುವೆಯಂಥ ದೊಡ್ಡ ಫಂಕ್ಷನ್ ಎಂದಮೇಲೆ ಹೊಳಪು ಇರಬೇಕಲ್ಲ, ಹಾಗಾಗೇ ಹೆಚ್ಚಾಗಿ ಜರಿ ಅಥವಾ ಬೊಕೇಡ್ ಬಟ್ಟೆಯ ಬ್ಲೌಸ್ ಬಂದಿವೆ. ಇವು ಒಂಥರ ಅರ್ಧಂಬರ್ಧ ರೆಡಿಮೇಡ್ ಆಗೂ ಸಿಗುತ್ತವೆ. ಬೇಕೆಂದರೆ ನೀವೇ ಕಲರ್, ದೊಡ್ಡ, ಸಣ್ಣ ಬುಟ್ಟಾ , ಚಿನ್ನದ ಬಣ್ಣವೋ, ತಾಮ್ರ ಬಣ್ಣವೋ ಇಲ್ಲವೇ ಬೆಳ್ಳಿ ಬಣ್ಣವೋ ಬುಟ್ಟಾ ನೋಡಿ ಆರಿಸಬಹುದು. ಸಡಿಲವಾಗೇ ಹೊಲಿದಿರುತ್ತಾರೆ. ಬೇಕಾದ ಫಿಟ್ಟಿಂಗ್ ಮಾಡಿಕೊಡುತ್ತಾರೆ. ಅದರ ಮೇಲೂ ಮತ್ತೆ ಜರ್ದೋಸಿ, ಸೀಕ್ವಿನ್ ಕುಸುರಿ, ಎಂಬ್ರಾಯಡರಿ, ಬೀಡ್ ಕುಸುರಿಗೆ ಅವಕಾಶ ಇದ್ದೇ ಇದೆ.
ಕೆಲವು ಬ್ಲೌಸ್‌ಗಳ ಮೇಲೆ ಅದಾಗಲೇ ಆ್ಯಂಟಿಕ್ ಗೋಲ್ಡ್ ಬಣ್ಣದ ಬೀಡ್ ವರ್ಕ್, ಟಿಕಳಿ ಇರುತ್ತದೆ. ಇಂಥ ಬ್ಲೌಸ್‌ಗಳಲ್ಲೂ ಅಚ್ಚ ಹಸಿರು, ಪರ್ಪಲ್, ಮೆರೂನ್, ಗೋಲ್ಡ್‌ಕಲರ್‌ನ ಸಂಯೋಜನೆ ಜತೆಗೆ ಜರಿ ಇದ್ದರೆ ಹೆಚ್ಚಾ ಕಡಿಮೆ ಯಾವ ಹಳೆ ರೇಷ್ಮೆ ಸೀರೆಗೂ ಹೊಂದುವಂತಿರುತ್ತದೆ.
ವೀಣಾ ರಾವ್