ಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಹೆಚ್ಚಿನ ತನಿಖೆಗಾಗಿ ಎರಡು ವಿಶೇಷ ತಂಡಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ರಚಿಸಿದೆ. ಮಲ್ಪೆ ವೃತ್ತ ನಿರೀಕ್ಷಕ ಹಾಗೂ ಬ್ರಹ್ಮಾವರ ವೃತ್ತ ನೀರಿಕ್ಷಕರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ.
ಒಂದು ತಂಡ ಬೆಳಗಾವಿಗೆ ತೆರಳಿದ್ದು, ಸಂತೋಷ್‌ಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಕಲೆ ಹಾಕುತ್ತಿದೆ. ನಗರದ ಹೊಟೇಲ್‌ನಲ್ಲಿ ಸೋಮವಾರ ರಾತ್ರಿ/ಮಂಗಳವಾರ ಮುಂಜಾನೆ ವೇಳೆ ಸಂತೋಷ್ ಅವರು ವಾಟ್ಸ್ ಆ್ಯಪ್‌ನಲ್ಲಿ ಸಚಿವ ಈಶ್ವರಪ್ಪ ಅವರ ಹೆಸರು ಉಲ್ಲೇಖೀಸಿ ಶೇ. 40 ಕಮಿಷನ್ ಕೇಳುತ್ತಾರೆ ಎಂದು ಆರೋಪ ಮಾಡಿ ಸಂದೇಶವನ್ನು ಮಾಧ್ಯಮ ಮಿತ್ರರಿಗೆ ಮತ್ತು ಆಪ್ತರಿಗೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಉಡುಪಿ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ತನಿಖಾಧಿಕಾರಿ ಯಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಸಂತೋಷ್ ಪಾಟೀಲ್ ಜತೆಗೆ ಲಾಡ್ಜ್ನಲ್ಲಿ ಉಳಿದುಕೊಂಡಿದ್ದ ಸ್ನೇಹಿತರಾದ ಪ್ರಶಾಂತ್ ಶೆಟ್ಟಿ, ಸಂತೋಷ್ ಮಡಿಕೇರಿ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿ ಸಿದ್ದು, ಅವರ ಹೇಳಿಕೆಯ ವೀಡಿಯೋ ದಾಖಲಿಸಿಕೊಂಡಿದ್ದಾರೆ. ಇಬ್ಬರು ಗೆಳೆಯರೊಂದಿಗೆ ತನಿಖಾಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ.
ತಾಂತ್ರಿಕ ತನಿಖೆ ಮಹತ್ವದ ಪಾತ್ರ: ಇಡೀ ಪ್ರಕರಣದಲ್ಲಿ ತಾಂತ್ರಿಕ ತನಿಖೆ ಮಹತ್ವದ ಪಾತ್ರ ವಹಿಸಲಿದೆ. ಸಿಸಿಟಿವಿ ಫೂಟೇಜ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೊಬೈಲ್ ಕರೆಗಳ ಪರಿಶೀಲನೆ, ವಾಟ್ಸಪ್ ಸಂದೇಶ ಕಳುಹಿಸಿರುವ ಖಚಿತತೆ ಬಗ್ಗೆ ಆಳವಾದ ತನಿಖೆ ನಡೆಯುತ್ತಿದೆ. ತಾಂತ್ರಿಕ ತನಿಖೆ ಗಾಗಿಯೇ ಒಂದು ತಂಡವನ್ನು ನಿಯೋಜಿಸಲಾಗಿದ್ದು, ಕಾರ್ಯ ಪ್ರವೃತ್ತವಾಗಿದೆ. ಈಗಾಗಲೆ ಮಣಿಪಾಲ ಮತ್ತು ಮಂಗಳೂರಿಂದ ಬಂದಿರುವ (ಎರಡು ಪ್ರತ್ಯೇಕ ಎಫ್ಎಸ್‌ಐಎಲ್ ತಂಡ) ವಿಧಿ ವಿಜ್ಞಾನ ವಿಭಾಗದ ತಜ್ಞರು ಘಟನ ಸ್ಥಳದಲ್ಲಿದ್ದ ಎಲ್ಲ ಮಾದರಿಗಳನ್ನು ಪರಿಶೀಲಿಸಿ, ಕೊಂಡೊಯ್ದಿದ್ದು, ವಿಶ್ಲೇಷಣೆ ನಡೆ ಯುತ್ತಿದೆ.
ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಕೇಸು:
ಈ ಪ್ರಕರಣದಲ್ಲಿ ಜನಪ್ರತಿನಿಧಿಯೊಬ್ಬರು ಆರೋಪಿಯಾಗಿರುವುದರಿಂದ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ. ತನಿಖಾಧಿಕಾರಿಗಳು ತನಿಖೆ ನಡೆಸಿ ತನಿಖಾ ವರದಿಯನ್ನು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ.