ಡೆಹರಾಡೂನ್: ವಕ್ಫ್ ಮಂಡಳಿ ವ್ಯಾಪ್ತಿಯಲ್ಲಿ ಬರುವ ಮದ್ರಸಾಗಳಲ್ಲಿ ಇಸ್ಲಾಮ್ ತಣ್ತೀಗಳನ್ನು ಕಲಿಸುವುದು ಸಹಜ ವಿದ್ಯಮಾನ. ಇಷ್ಟೆಲ್ಲದರ ಮಧ್ಯೆ ಉತ್ತರಾಖಂಡ ವಕ್ಫ್ ಮಂಡಳಿ, ಮದ್ರಸಾಗಳಲ್ಲಿ ಸಂಸ್ಕೃತ ಕಲಿಸಲು ತೀರ್ಮಾನಿಸಿದೆ! ಆರಂಭಿಕ ಹಂತದಲ್ಲಿ ರಾಜ್ಯದ 4 ಮದ್ರಸಾಗಳಲ್ಲಿ ಪ್ರಾಯೋಗಿಕವಾಗಿ ಇದನ್ನು ಪರೀಕ್ಷಿಸಲಾಗುವುದು ನಂತರ ಉಳಿದ ಕಡೆ ಇದನ್ನು ವಿಸ್ತರಿಸಲಾಗುವುದು ಎಂದು ಉತ್ತರಾಖಂಡ ವಕ್ಫ್ ಮಂಡಳಿ ಸಿಇಒ ಶಿರಾಝ್ ಹುಸೇನ್ ಹೇಳಿದ್ದಾರೆ.
ಈ ಬೆಳವಣಿಗೆಗೆ ಮುಖ್ಯ ಕಾರಣ ಎನ್‌ಸಿಇಆರ್‌ಟಿ ಪಠ್ಯವನ್ನು ಮದ್ರಸಾಗಳಲ್ಲಿ ಅಳವಡಿಸಲು ಅಲ್ಲಿನ ವಕ್ಫ್ ಮಂಡಳಿ ತೀರ್ಮಾನಿಸಿರುವುದು. ಎನ್‌ಸಿಇಆರ್‌ಟಿ ಪಠ್ಯದಲ್ಲಿ ಸಂಸ್ಕೃತ ಮಾಮೂಲಿ. ಅದರ ಭಾಗವಾಗಿ ವಿದ್ಯಾರ್ಥಿಗಳು ಸಂಸ್ಕೃತ ಭಾಷೆಯನ್ನು ಕಲಿಯಬೇಕಾಗುತ್ತದೆ. ಇದೊಂದು ಮಹತ್ವದ ಬೆಳವಣಿಗೆಯಾಗಿ ದಾಖಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರಾಖಂಡ ವಕ್ಫ್ ಮುಖ್ಯಸ್ಥ ಶದಾಬ್ ಶಾಮ್ಸ್, ಯಾವುದೇ ಭಾಷೆಯನ್ನು ಯಾವುದೇ ಧರ್ಮದೊಂದಿಗೆ ತಳುಕು ಹಾಕಬಾರದು. ಪ್ರತಿಯೊಬ್ಬರೂ ಭಾಷೆಯನ್ನು ಕಲಿಯುವ ಹಕ್ಕು ಹೊಂದಿದ್ದಾರೆ. ಉತ್ತರಾಖಂಡದಲ್ಲಿ ಸಂಸ್ಕೃತ ಅಧಿಕೃತ ಭಾಷೆಗಳಲ್ಲಿ ಒಂದು. ಎನ್‌ಸಿಇಆರ್‌ಟಿ ಪಠ್ಯದಂತೆ ಇಂಗ್ಲಿಷ್, ಹಿಂದಿ ಜೊತೆಗೆ ಸಂಸ್ಕೃತವನ್ನು ಒಂದು ವಿಷಯವನ್ನಾಗಿ ಕಲಿಸಲು ತೀರ್ಮಾನಿಸಲಾಗಿದೆ. ಹಲವು ಪೋಷಕರೂ ಕೂಡ ತಮ್ಮ ಮಕ್ಕಳು ಇತರೆ ಮಕ್ಕಳಂತೆ ಎಲ್ಲ ವಿಷಯಗಳನ್ನು ಕಲಿಯಲಿ ಎಂದು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮದ್ರಸಾಗಳಲ್ಲಿ ಎನ್‌ಸಿಇಆರ್‌ಟಿ ಪಠ್ಯ ಅಳವಡಿಸಿಕೊಂಡಿರುವುದು ಮಹತ್ವದ ಸಂಗತಿ. ಮಾತ್ರವಲ್ಲ ಆ ಪ್ರಕಾರ ಸಂಸ್ಕೃತವನ್ನೂ ಕಲಿಸಲು ಹೊರಟಿರುವುದು ದೇಶದ ಹಲವು ಮದ್ರಸಾಗಳಲ್ಲಿ ಧನಾತ್ಮಕ ಬದಲಾವಣೆಗೆ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗಿದೆ