ಧರ್ಮಶಾಲಾ: ಕಳೆದ ಸೀಸನ್ ನ ರನ್ನರ್ ಅಪ್ ರಾಜಸ್ಥಾನ ತಂಡವು ಈ ಸೀಸನ್ ನ ಕೊನೆಯ ಲೀಗ್ ಪಂದ್ಯವನ್ನು ಶುಕ್ರವಾರ ನಡೆದಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗೆದ್ದರೂ ಪ್ಲೇ ಆಫ್ ತಲುಪುವ ಸಣ್ಣ ಆಸೆಯಿಂದ ಇನ್ನೂ ಕಣದಲ್ಲಿದೆ.
14 ಪಂದ್ಯಗಳಲ್ಲಿ ಏಳು ಗೆಲುವು ಮತ್ತು ಏಳು ಸೋಲಿನ ಬಳಿಕ 14 ಅಂಕಗಳೊಂದಿಗೆ ಸಂಜು ಸ್ಯಾಮ್ಸನ್ ಬಳಗ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಶುಕ್ರವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ರಾಜಸ್ಥಾನ ರಾಯಲ್ಸ್ ತಂಡವು ದೇವದತ್ತ ಪಡಿಕ್ಕಲ್ ಮತ್ತು ಜೈಸ್ವಾಲ್ ಅರ್ಧಶತಕದ ನೆರವಿನಿಂದ ಕೊನೆಯ ಓವರ್ ನಲ್ಲಿ ಗುರಿ ತಲುಪಿ ಜಯ ಸಾಧಿಸಿತು.
ಪಂದ್ಯದ ಬಳಿಕ ಮಾತನಾಡಿದ ನಾಯಕ ಸಂಜು ಸ್ಯಾಮ್ಸನ್ ಬೇಸರ ವ್ಯಕ್ತಪಡಿಸಿದರು.” ಹೆಟ್ಮೆಯರ್ ಚೆನ್ನಾಗಿ ಆಡುತ್ತಿದ್ದರು, ನಾವು 18.5 ಓವರ್ ಗಳಲ್ಲಿ ಚೇಸ್ ಮುಗಿಸುತ್ತೇವೆ ಎಂದು ನಾವು ಭಾವಿಸಿದ್ದೇವೆ (ಆರ್‌ಸಿಬಿಯ ನೆಟ್ ರನ್ ರೇಟ್ ಹಿಂದಿಕ್ಕಲು ಆರ್.ಆರ್ 18.3 ಓವರ್‌ಗಳಲ್ಲಿ ರನ್-ಚೇಸ್ ಅನ್ನು ಪೂರ್ಣಗೊಳಿಸಬೇಕಾಗಿತ್ತು). ಗುಣಮಟ್ಟದ ತಂಡವನ್ನು ಹೊಂದಿದ್ದೂ ನಾವು ಅಂಕಪಟ್ಟಿಯಲ್ಲಿ ಎಲ್ಲಿ ನಿಂತಿದ್ದೇವೆ ಎಂದು ನೋಡಿದರೆ ಸ್ವಲ್ಪ ಆಘಾತವಾಗುತ್ತದೆ. ನಾನು ಯಶಸ್ವಿ ಜೈಸ್ವಾಲ್ ಬಗ್ಗೆ ಪ್ರತಿ ಪಂದ್ಯದಲ್ಲೂ ಮಾತನಾಡುತ್ತಿದ್ದೇನೆ. ಅವರು ಪ್ರಬುದ್ಧತೆಯನ್ನು ತೋರಿಸಿದ್ದಾರೆ. ಅವರು 100 ಟಿ20 ಗಳನ್ನು ಆಡಿದಂತೆ ಭಾಸವಾಗುತ್ತಿದೆ. ಸುಮಾರು ಶೇಕಡಾ 90 ರಷ್ಟು ಸಂದರ್ಭದಲ್ಲಿ ಮೊದಲ ಓವರ್‌ನಲ್ಲಿ ಬೌಲ್ಟ್ ವಿಕೆಟ್ ಪಡೆಯುತ್ತಾರೆ ಎಂದು ನಾವು ಭಾವಿಸುತ್ತೇವೆ. ಕಳೆದ ಕೆಲವು ಪಂದ್ಯಗಳಲ್ಲಿ ನಾವು ಒತ್ತಡದಲ್ಲಿದ್ದೆವು” ಎಂದು ಸ್ಯಾಮ್ಸನ್ ಪಂದ್ಯದ ನಂತರ ಹೇಳಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರವಿವಾರದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ತನ್ನ ಕೊನೆಯ ಪಂದ್ಯವನ್ನು ಭಾರಿ ಅಂತರದಿಂದ ಕಳೆದುಕೊಂಡರೆ ಮತ್ತು ಮುಂಬೈ ಇಂಡಿಯನ್ಸ್ ತನ್ನ ಕೊನೆಯ ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತರೆ ರಾಜಸ್ಥಾನ ರಾಯಲ್ಸ್ ಪ್ಲೇ ಆಫ್ ಗೆ ಅರ್ಹತೆ ಪಡೆಯಬಹುದು.