ಕಡಬ : ಗ್ರಾಮಗಳು ಅಭಿವೃದ್ಧಿ ಯಾದಾಗ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯಾಗಲು ಸಾಧ್ಯ. ಮಹಿಳೆಯರು ಸ್ವತಂತ್ರ ಉದ್ದಿಮೆಗಳಿಂದ ಆರ್ಥಿಕವಾಗಿ ಸ್ವಾವ ಲಂಬಿಗಳಾದಾಗ ರಾಷ್ಟ್ರದ ಅಭಿವೃದ್ಧಿಗೆ ವೇಗ ಸಿಗುತ್ತದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಸೆಲ್ವಮಣಿ ಆರ್. ನುಡಿದರು.
ಅವರು ಕಡಬದ ಸಂತೆಕಟ್ಟೆ ಬಳಿಯ ಪಂಚಾಯತ್ ಕಟ್ಟಡದಲ್ಲಿ ಶ್ರೀನಿಧಿ ಸಂಜೀವಿನಿ ಗ್ರಾ.ಪಂ. ಒಕ್ಕೂಟದ ಸಂಜೀವಿನಿ ಕೆಎಸ್‌ಆರ್‌ಎಲ್‌ಪಿಎಸ್ ಮಾರಾಟ ಮಳಿಗೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಸಂಘದವರ ಬೇಡಿಕೆಯಂತೆ ಗ್ರಾ.ಪಂ. ಮಾರಾಟ ಮಳಿಗೆಗೆ ಅವಕಾಶ ಮಾಡಿಕೊ ಟ್ಟಿದ್ದು, ಯಶಸ್ವಿಯಾಗಿ ಮುನ್ನಡೆಸಿಕೊಂಡು ಜನಸಾಮಾನ್ಯರಿಗೆ ಸಂಸ್ಥೆಯಿಂದ ಸೌಲಭ್ಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನಿಸಬೇಕು. ಗ್ರಾಮಾಂತರ ಭಾಗದಲ್ಲಿ ಹೆಚ್ಚಿನ ಪ್ರಚಾರಕ್ಕೆ ಒಲವು ತೋರಬೇಕಾಗಿದೆ. ಮಳಿಗೆ ಯಶಸ್ವಿ ಯಾಗಿ ಮುಂದುವರಿದಾಗ ಇನ್ನಷ್ಟು ವ್ಯವಸ್ಥೆಗಳುಳ್ಳ ಸುಸಜ್ಜಿತ ಕಟ್ಟಡ ಒದಗಿಸಲು ಪ್ರಯತ್ನಿಸಲಾಗುವುದು. ಪ್ರತೀ ತಾಲೂಕಿನಲ್ಲಿ ಸಾಂಕೇತಿಕವಾಗಿ ಒಂದೆರಡು ಮಳಿಗೆಗಳನ್ನು ಪ್ರಾರಂಭಿಸಲಾಗುತ್ತಿದ್ದು, ಹಂತ ಹಂತವಾಗಿ ಎಲ್ಲೆಡೆ ವಿಸ್ತರಿಸಲಾಗುವುದು ಎಂದರು. ರಿಬ್ಬನ್ ಕತ್ತರಿಸುವ ಮೂಲಕ ಮಳಿಗೆಯಲ್ಲಿ ವ್ಯಾಪಾರಕ್ಕೆ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಚಾಲನೆ ನೀಡಿದರು.
ಕಡಬ ಪಟ್ಟಣವು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು, ಹೆಚ್ಚಿನ ಎಲ್ಲ ಸೌಲಭ್ಯಗಳು ಇಲ್ಲಿಯೇ ದೊರೆಯುವಂತಾಗಿದೆ. ಹಲವಾರು ಸಂಸ್ಥೆಗಳು ಪ್ರಾರಂಭಗೊಂಡಿವೆ. ಇದೀಗ ಇಲ್ಲಿ ಸಂಜೀವಿನಿ ಮಾರಾಟ ಮಳಿಗೆ ಪ್ರಾರಂಭಗೊಂಡಿರುವುದು ಮಹಿಳಾ ಸಶಕ್ತೀಕರಣಕ್ಕೆ ಪೂರಕವಾಗಿದೆ. ಮಹಿಳೆಯರು ಸ್ತ್ರೀಶಕ್ತಿ ಸಂಘಗಳು ಹಾಗೂ ಸ್ವ ಸಹಾಯ ಸಂಘಗಳಲ್ಲಿ ತೊಡಗಿಸಿಕೊಂಡು ಆರ್ಥಿಕ ಸಬಲತೆಯನ್ನು ಹೊಂದುತ್ತಿದ್ದಾರೆ. ಸ್ವ-ಉದ್ಯೋಗ ಮಾಡುವುದರೊಂದಿಗೆ ಇತರರಿಗೆ ಉದ್ಯೋಗ ಕಲ್ಪಿಸುವ ಉದ್ದಿಮೆಗಳನ್ನು ಆರಂಭಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಸರಕಾರವು ಮಹಿಳಾ ಸಶಕ್ತೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಮಹಿಳೆಯರು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಹೊಂದಬೇಕು ಎಂದರು.
ಜಿ.ಪಂ.ನ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್ ಸಂಜೀವಿನಿ ಮಾರಾಟ ಮಳಿಗೆ ಬಗ್ಗೆ ಮಾಹಿತಿ ನೀಡಿದರು. ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ತಾ.ಪಂ. ಇಒ ಜಗದೀಶ್ ಎಸ್.. ತಾ.ಪಂ. ಸಹಾಯಕ ನಿರ್ದೇಶಕ ನವೀನ್ ಭಂಡಾರಿ, ಶ್ರೀನಿಧಿ ಸಂಜೀವಿನಿ ಗ್ರಾ.ಪಂ. ಒಕ್ಕೂಟದ ಅಧ್ಯಕ್ಷೆ ಶೀಲಾ, ಎನ್‌ಆರ್‌ಎಲ್‌ಎಂ ತಾ.ಪಂ. ವಲಯ ಮೇಲ್ವಿಚಾರಕಿ ನಮಿತಾ, ಗ್ರಾ.ಪಂ. ಸದಸ್ಯರಾದ ಹನೀಫ್ ಕೆ.ಎಂ., ಶರೀಫ್ ಎ.ಎಸ್., ಕೃಷ್ಣ ನಾಯ್ಕ, ಹರ್ಷ ಕೋಡಿ, ಸರೋಜಿನಿ ಆಚಾರ್ಯ, ರೇವತಿ, ನೇತ್ರಾ, ಶ್ರೀನಿಧಿ, ಸಂಜೀವಿನಿ ಗ್ರಾ.ಪಂ. ಒಕ್ಕೂಟದ ಮಹಿಳೆಯರು, ಗ್ರಾ.ಪಂ. ಸಿಬಂದಿ ಉಪಸ್ಥಿತರಿದ್ದರು. ಪಿಡಿಒ ಚೆನ್ನಪ್ಪ ಗೌಡ ಕಜೆಮೂಲೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಿಬಂದಿ ಹರೀಶ್ ಬೆದ್ರಾಜೆ ನಿರೂಪಿಸಿ, ಲೆಕ್ಕ ಸಹಾಯಕ ಭುವನೇಂದ್ರ ಕುಮಾರ್ ವಂದಿಸಿದರು. ಗ್ರಾ.ಪಂ. ಕಾರ್ಯದರ್ಶಿ ಸಂತೋಷ್, ಸಿಬಂದಿ ಪದ್ಮಯ್ಯ, ವಾರಿಜಾ, ಶಶಿಕಲಾ, ಗುರುರಾಜ್ ಭಟ್, ಕೀರ್ತನ್, ರಿಯಾಝ್ ಸಹಕರಿಸಿದರು.
ಅಂಗನವಾಡಿ ಕೇಂದ್ರಕ್ಕೆ ಭೇಟಿ
ಕೊರಂದೂರು ಅಂಗನವಾಡಿಗೆ ಭೆೇಟಿ ನೀಡಿದ ಜಿ.ಪಂ. ಇಒ ಡಾ| ಸೆಲ್ವಮಣಿ ಅಂಗನವಾಡಿ ಕಟ್ಟಡ ಮತ್ತು ಅಲ್ಲಿಯ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಅಂಗನವಾಡಿಯಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷೆ, ಗ್ರಾ.ಪಂ. ಸದಸ್ಯೆ ನೀಲಾವತಿ ಶಿವರಾಮ್ ಸ್ವಾಗತಿಸಿ, ಅತಿಥಿಗಳನ್ನು ಬರಮಾಡಿಕೊಂಡರು. ಕಾರ್ಯಕರ್ತೆ ಜಯಶ್ರೀ ವಂದಿಸಿದರು.
ಘನತ್ಯಾಜ್ಯ ಘಟಕಕ್ಕೆ ಭೇಟಿ, ಪರಿಶೀಲನೆ
ಕಡಬ ಗ್ರಾ.ಪಂ. ಗೊಳಪಟ್ಟ ಕೋಡಿಂಬಾಳ ಗ್ರಾಮದ ಬೊಳ್ಳೂರು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಘನತ್ಯಾಜ್ಯ ವಿಲೇವಾರಿ ಹಾಗೂ ಗೊಬ್ಬರ ತಯಾರಿಕ ಘಟಕವನ್ನು ಪರಿಶೀಲಿಸಿ, ಮಾಹಿತಿ ಪಡೆದುಕೊಂಡರು.