ಕನ್ನಡದ “ಕೆಜಿಎಫ್-2′ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್‌ದತ್ ನಟಿಸಲಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತು. ಆದರೆ, ಅವರು ಯಾವಾಗ “ಕೆಜಿಎಫ್’ ಚಿತ್ರ ತಂಡವನ್ನು ಸೇರಿಕೊಳ್ಳುತ್ತಾರೆ, ಅವರ ಭಾಗದ ಚಿತ್ರೀಕರಣ ಯಾವಾಗ ಅನ್ನೋದು ಕುತೂಹಲದ ಪ್ರಶ್ನೆಯಾಗಿತ್ತು. ಈಗ ಸಂಜಯ್‌ದತ್ ಅಧಿಕೃತವಾಗಿ “ಕೆಜಿಎಫ್-2′ ಚಿತ್ರೀಕರಣದ ಸೆಟ್‌ಗೆ ಎಂಟ್ರಿಯಾಗಿದ್ದಾರೆ. ಹೌದು, ಈಗಾಗಲೇ “ಕೆಜಿಎಫ್ -2′ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ.
ಯಶ್ ಅದಾಗಲೇ ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ. ಈಗ ಸಂಜಯ್‌ದತ್ ಕೂಡ ಅವರೊಂದಿಗೆ ಸೇರಿಕೊಂಡಿದ್ದಾರೆ. ಅಂದಹಾಗೆ, ಸೆ.22 ರಿಂದಲೇ ಕಡಪ ಸಮೀಪ “ಕೆಜಿಎಫ್ -2′ ಚಿತ್ರೀಕರಣ ನಡೆಯಬೇಕಿತ್ತು. ಆದರೆ, ಮಳೆ ಸುರಿದ ಕಾರಣ, ಅಲ್ಲಿಂದ ಚಿತ್ರತಂಡ ಹೈದರಾಬಾದ್‌ನ ರಾಮೋಜಿಫಿಲ್ಮ್ ಸಿಟಿಗೆ ಶಿಫ್ಟ್ ಆಗಿದೆ. ಬುಧವಾರದಿಂದ ಸಂಜಯ್‌ದತ್ ಅವರ ಭಾಗದ ಚಿತ್ರೀಕರಣ ಶುರುವಾಗಿದೆ.
ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ “ಕೆಜಿಎಫ್ -2′ ಚಿತ್ರಕ್ಕೆ ದೊಡ್ಡ ಸೆಟ್ ಹಾಕಲಾಗಿದಲ್ಲದೆ, ಇದು ದೊಡ್ಡ ಶೆಡ್ನೂಲ್ ಆಗಿದೆ. ಚಿತ್ರದ ಪ್ರಮುಖ ಚಿತ್ರೀಕರಣದ ಭಾಗ ಇದೇ ಆಗಿರುವುದರಿಂದ ಸುಮಾರು 22 ದಿನಗಳ ಕಾಲ “ಕೆಜಿಎಫ್-2′ ಚಿತ್ರದ ಚಿತ್ರೀಕರಣದಲ್ಲಿ ಸಂಜಯ್‌ದತ್ ಹಾಗು ಯಶ್ ಭಾಗವಹಿಸುತ್ತಿದ್ದಾರೆ ಎನ್ನಲಾಗಿದೆ. ಯಶ್ ಹಾಗು ಸಂಜಯ್‌ದತ್ ನಡುವಿನ ಫೈಟ್ಸ್ ಕೂಡ ಇದೇ ಶೆಡ್ನೂಲ್‌ನಲ್ಲಿ ಚಿತ್ರೀಕರಣಗೊಳ್ಳಲಿದೆ.
ಈಗಾಗಲೇ ಸಂಜಯ್‌ದತ್ ಜೊತೆಗೆ ಹಿಂದೆ ಮುಂದೆ ನಿಲ್ಲಿಸಲು ಸುಮಾರು ಆರು ಅಡಿ ಎತ್ತರದ ಒಂದಷ್ಟು ಕಲಾವಿದರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಬುಧವಾರ ಸೆಟ್‌ಗೆ ಹೋಗಿರು ಸಂಜಯ್‌ದತ್ ಜೊತೆಗೆ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಫೋಟೋವೊಣದನ್ನು ತೆಗೆಸಿಕೊಂಡಿರುವ ಫೋಟೋ ಸದ್ಯ ಸಾಮಾಜಿಕ ತಾಣದಲ್ಲಿ ಜೋರು ಸುದ್ದಿ ಮಾಡುತ್ತಿದೆ. ಬಾಲಿವುಡ್‌ನ ಮುನ್ನಾಭಾಯ್ ಸಂಜಯ್‌ದತ್ ಅವರು ಈ ಚಿತ್ರದಲ್ಲಿ ಅಧೀರನ ಪಾತ್ರ ಮಾಡುತ್ತಿದ್ದಾರೆ.
ಅದೊಂದು ಮೇಜರ್ ಪಾತ್ರವಾಗಿದ್ದು, ಸಾಕಷ್ಟು ಭಯಾನಕವಾಗಿರಲಿದೆ ಎಂದು ಈ ಹಿಂದೆಯೇ ಸಂಜಯ್‌ದತ್ ಹೇಳಿದ್ದರು. ಈಗ ಎಲ್ಲರಿಗೂ ಆ ಅಧೀರನ ಪಾತ್ರ ಹೇಗಿದೆ ಎಂಬ ಕುತೂಹಲವಂತೂ ಇದೆ. ಅದಕ್ಕಾಗಿ ಸಿನಿಮಾ ಬರುವವರೆಗೂ ಕಾಯಲೇಬೇಕು. ಅಂದಹಾಗೆ, ಇದೇ ಮೊದಲ ಸಲ ಸಂಜಯ್‌ದತ್ ಅವರು ಕನ್ನಡಕ್ಕೆ ಎಂಟ್ರಿಕೊಟ್ಟಿದ್ದಾರೆ ಎಂಬುದು ಇನ್ನೊಂದು ವಿಶೇಷ. ಹಾಗಾಗಿ, ಸಹಜವಾಗಿಯೇ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇದೆ.