Advertisement

ಕೌಠಾ ಗ್ರಾಮದಲ್ಲಿಲ್ಲ ನೈರ್ಮಲ್ಯ

10:08 AM Sep 23, 2017 | |

ಔರಾದ: ಗ್ರಾಮೀಣ ಭಾಗದಲ್ಲಿ ಜನರಿಗೆ ಸ್ವತ್ಛತೆ ಕಾಪಾಡಿ ಎಂದು ಡಂಗುರ ಸಾರುವ ಕೌಠಾ ಗ್ರಾಮ ಪಂಚಾಯಿತಿ
ಕೇಂದ್ರಸ್ಥಾನವೇ ಅಸ್ವತ್ಛತೆಯಿಂದ ಕೂಡಿದೆ. ಗ್ರಾಮದ ಬಡಾವಣೆಗಳಲ್ಲಿ ಚರಂಡಿಗಳಿಲ್ಲದೇ ಮಲಿನ ನೀರು ರಸ್ತೆಗೆ
ಹರಿದು ದುರ್ವಾಸನೆ ಹರಡಿದ್ದು, ರಸ್ತೆಗಳು ಕೆಸರು ಗದ್ದೆಯಂತಾಗಿವೆ.

Advertisement

ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಸ್ವತ್ಛತೆ ಕಾಪಾಡುವುದಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರತಿವರ್ಷ ವಿನೂತನ ಕಾರ್ಯಕ್ರಮಗಳ ಮೂಲಕ ಜನರ ಮನಸು ಪರಿವರ್ತನೆ ಮಾಡಲು ಮುಂದಾಗುತ್ತಿವೆ. ಆದರೆ ಕೌಠಾ ಗ್ರಾಮದ ಬಹುತೇಕ ಬಡಾವಣೆಗಳಲ್ಲಿ ರಸ್ತೆಯಲ್ಲಿ ಕಸದ ರಾಶಿ ತುಂಬಿಕೊಂಡಿವೆ.

ಗ್ರಾಮದ ರಸ್ತೆ ಪಕ್ಕದಲ್ಲಿ ಚರಂಡಿಗಳು ಇಲ್ಲದಿರುವುದರಿಂದ ಬಡಾವಣೆ ನಿವಾಸಿಗಳ ಮನೆಯ ಮಲಿನ ನೀರು
ಹಾಗೂ ಮಳೆ ನೀರು ರಸ್ತೆ ಮೇಲೆ ನಿಂತು ರಸ್ತೆಗಳು ಹಾಳಾಗಿ ಕೆಸರು ಗದ್ದೆಯಂತಾಗಿವೆ. ರಸ್ತೆಯಲ್ಲಿ ಸಂಚರಿಸುವವರು ಬಿದ್ದು ತಮ್ಮ ಕೈ ಕಾಲುಗಳನ್ನು ಮುರಿದುಕೊಳ್ಳುವ ಆತಂಕ ಕಾಡುತ್ತಿದೆ. 

ಗ್ರಾಮದ ದಲಿತ, ಎಸ್‌ಟಿ ಹಾಗೂ ಮಾದಿಗ ಸಮುದಾಯದ ಬಡಾವಣೆಯ ಜನರರಿಗೆ ನಿತ್ಯ ಕುಡಿಯುವ ನೀರು ಪೂರೈಸುವ ಪೈಪ್‌ಲೈನ್‌ಗಳು ಈ ಮೋರಿ ನೀರಿನ ಮೇಲೆಯೇ ಹಾದು ಹೋಗುತ್ತವೆ. ಅದಲ್ಲದೇ ನೀರಿನ ನಲ್ಲಿಗಳು ಕೂಡ ತಿಪ್ಪೆಗುಂಡಿಯಲ್ಲಿ ಇವೆ. ಹಾಗಾಗಿ ಮೂರು ಬಡಾವಣೆಯ ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜೀವಿಸುವ ಅನಿವಾರ್ಯತೆ ಇದೆ.

ಗ್ರಾಮದ ಕೆಲ ಬಡಾವಣೆಯಲ್ಲಿ ತಿಪ್ಪೆಗುಂಡಿಗಳನ್ನು ರಸ್ತೆ ಮೇಲೆ ಮಾಡಲಾಗಿದೆ. ಇದರಿಂದ ಮಲಿನ ನೀರು
ಎರಡು ಬಡಾವಣೆಗಳ ಮಧ್ಯದಲ್ಲಿ ನಿಂತು, ಇಲ್ಲಿನ ನಿವಾಸಿಗಳು ನಿತ್ಯ ದುರ್ವಾಸನೆ ಅನುಭವಿಸುವಂತಾಗಿದೆ. ಅಲ್ಲದೇ ರೋಗ ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

Advertisement

ಗ್ರಾಮೀಣ ಭಾಗದ ಸಮಸ್ಯೆಗಳನ್ನು ಅರಿತು ಬಗೆ ಹರಿಸಲು ಮುಂದಾಗಬೇಕಾದ ಗ್ರಾಮ ಪಂಚಾಯಿತಿ, ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೌನವಾಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿದೆ. 

„ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next