ಮಂಗಳೂರು: ಸಿಆರ್‌ಝಡ್ ವಲಯದಲ್ಲಿ ಗುರುತಿಸಿರುವ ಮರಳು ದಿಬ್ಬಗಳಿಗೆ ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣೆ ಪ್ರಾಧಿಕಾರ (ಕೆಸಿಝಡ್‌ಎಂಎ)ದಿಂದ ಇನ್ನೂ ಅನುಮೋದನೆ ದೊರೆಯದ ಕಾರಣ ಮುಂದಿನ ಆಗಸ್ಟ್ ವೇಳೆಗೆ ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆ ಆರಂಭಗೊಳ್ಳುವುದು ಅನುಮಾನ. ಪರಿಣಾಮವಾಗಿ ಜಿಲ್ಲೆಯಲ್ಲಿ ಮರಳು ಸಮಸ್ಯೆಯ ಉದ್ಭವಿಸುವ ಆತಂಕ ಎದುರಾಗಿದೆ.
ಹಿಂದಿನ ಸಾಲಿನಲ್ಲಿ ನೀಡಿದ್ದ ಅನುಮತಿಯ ಅವಧಿ ಕಳೆದ ಡಿಸೆಂಬರ್‌ಗೆ ಮುಕ್ತಾಯ ಗೊಂಡಿದ್ದು, 6 ತಿಂಗಳು ಗಳಿಂದ ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆ ಸ್ಥಗಿತಗೊಂಡಿದೆ.
ಸಿಆರ್‌ಝಡ್‌ನಲ್ಲಿ ಮರಳುಗಾರಿಕೆ ಸ್ಥಗಿತಗೊಂಡಿದ್ದರೂ ನಾನ್‌ಸಿಆರ್‌ಝಡ್ ಮತ್ತು ತುಂಬೆ ವೆಂಟೆಡ್ ಡ್ಯಾಂನಲ್ಲಿ ನಡೆಸಿದ ಡ್ರೆಜ್ಜಿಂಗ್‌ನಿಂದ ಲಭಿಸಿದ ಮರಳು ನಿರ್ಮಾಣ ಕಾಮಗಾರಿಗಳಿಗೆ ಆಸರೆಯಾಗಿತ್ತು. ಡ್ರೆಜ್ಜಿಂಗ್ ಮರಳು ಮಾರ್ಚ್‌ನಲ್ಲಿ ಬರಿದಾಗಿದ್ದು, ನಾನ್ ಸಿಆರ್‌ಝಡ್‌ನಿಂದ ಮರಳು ಪೂರೈಕೆಯಾಗುತ್ತಿತ್ತು. ಜೂನ್‌ನಿಂದ 3 ತಿಂಗಳು ಮರಳುಗಾರಿಕೆಗೆ ನಿಷೇಧವಿದ್ದು, ಇಲ್ಲೂ ಮರಳುಗಾರಿಕೆ ಸ್ಥಗಿತಗೊಂಡಿದೆ. ಪ್ರಸ್ತುತ ಸಂಗ್ರಹದಿಂದ ಮರಳು ಪೂರೈಕೆಯಾಗುತ್ತಿದೆ.
ನಡೆಯದ ಕೆಸಿಝಡ್‌ಎಂಎ ಸಭೆ
ಬೇಥಮೆಟ್ರಿಕ್ಸ್ ಸರ್ವೆ ಮೂಲಕ ನೇತ್ರಾವತಿ, ಫಲ್ಗುಣಿ ಮತ್ತು ಶಾಂಭವಿ ನದಿಗಳಲ್ಲಿ ಹೊಸದಾಗಿ ಗುರುತಿಸಿರುವ ಮರಳು ದಿಬ್ಬಗಳ ಬಗ್ಗೆ ಎನ್‌ಐಟಿಕೆ ಸಲ್ಲಿಸಿರುವ ತಾಂತ್ರಿಕ ವರದಿಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಪರಿಶೀಲಿಸಿ ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣೆ ಪ್ರಾಧಿಕಾರಕ್ಕೆ ಕಳುಹಿಸಿದೆ.
ಕೋವಿಡ್‌ದಿಂದಾಗಿ ಕೆಸಿಝಡ್‌ಎಂಎ ಸಭೆ ಈ ವರೆಗೆ ನಡೆದಿಲ್ಲ. ಅಲ್ಲಿ ಅನುಮೋದನೆಗೊಂಡ ಬಳಿಕ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಅಂತಿಮವಾಗಿ ಪರವಾನಿಗೆಗಳನ್ನು ನೀಡುತ್ತದೆ. ಇದಕ್ಕೆ ಸುಮಾರು 1 ತಿಂಗಳ ಕಾಲಾವಕಾಶ ಬೇಕು. ಪ್ರಸ್ತುತ ಇರುವ ಮರಳುಗಾರಿಕೆ ನಿಷೇಧ ಆ.15ರ ವೇಳೆಗೆ ಕೊನೆಗೊಳ್ಳಲಿದೆ. ಅದರೊಳಗೆ ಈ ಎಲ್ಲ ಪ್ರಕ್ರಿಯೆ ನಡೆಯುವುದು ಅನುಮಾನ. ಜಿಲ್ಲೆಯಲ್ಲಿ ಪ್ರಸ್ತುತ ನಿರ್ಮಾಣ ಚಟುವಟಿಕೆ ಚೇತರಿಕೆ ಕಂಡಿದ್ದು ಮರಳಿಗೆ ಬೇಡಿಕೆ ಹೆಚ್ಚುತ್ತಿದೆ. ಆಗಸ್ಟ್ ವೇಳೆಗೆ ಸಿಆರ್‌ಝಡ್‌ನಲ್ಲಿ ಮರಳುಗಾರಿಕೆ ಆರಂಭಗೊಳ್ಳದಿದ್ದರೆ ಮರಳು ಸಮಸ್ಯೆ ತೀವ್ರ ಸ್ವರೂಪ ಪಡೆಯುವ ಸಾಧ್ಯತೆಗಳಿವೆ.
ದಿಬ್ಬ ಕಡಿಮೆ, ಪ್ರಮಾಣ ಸಮಾನ
ನೇತ್ರಾವತಿ, ಫಲ್ಗುಣಿ ಮತ್ತು ಶಾಂಭವಿ ನದಿಯ ಸಿಆರ್‌ಝಡ್ ವಲಯದಲ್ಲಿ ನಡೆಸಿರುವ ಬೇಥಮೆಟ್ರಿಕ್ ಸರ್ವೆಯಲ್ಲಿ ಈ ಬಾರಿ ಮರಳು ದಿಬ್ಬಗಳ ಸಂಖ್ಯೆ ಕಳೆದ ಬಾರಿಗಿಂತ ಕಡಿಮೆ ಇದೆ. ಆದರೆ ಮರಳು ಕಳೆದ ಬಾರಿಯಷ್ಟೇ ಇದೆ ಎನ್ನಲಾಗಿದೆ.
ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆಗೆ ಗುರುತಿಸಿರುವ ಮರಳು ದಿಬ್ಬಗಳ ವರದಿಯನ್ನು ಅನುಮೋದನೆಗಾಗಿ ಬೆಂಗಳೂರಿನಲ್ಲಿರುವ ಕೆಸಿಝಡ್‌ಎಂಎ ಕಳುಹಿಸಲಾಗಿದೆ. ಪ್ರಸ್ತುತ ಮರಳುಗಾರಿಕೆ ನಿಷೇಧವಿದೆ. ಪ್ರಾಧಿಕಾರದಿಂದ ಅನುಮತಿ ದೊರೆತ ಬಳಿಕ ಪರವಾನಿಗೆ ಸಂಬಂಧಿತ ಪ್ರಕ್ರಿಯೆ ನಡೆಯಲಿದೆ.
– ಸಿಂಧೂ ಬಿ. ರೂಪೇಶ್, ದ.ಕ. ಜಿಲ್ಲಾಧಿಕಾರಿ