Advertisement

ಐಜಿಪಿ ಬಂಗ್ಲೆ ಆವರಣದಿಂದಲೇ ಶ್ರೀಗಂಧದ ಮರ ಕಳವು

06:30 AM Aug 21, 2017 | Team Udayavani |

ಮಂಗಳೂರು: ರಾಜ್ಯದ ಪೊಲೀಸ್‌ ವ್ಯವಸ್ಥೆಯನ್ನೇ ತಲೆ ತಗ್ಗಿಸುವಂತೆ ಮಾಡುವ ಸ್ಫೋಟಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅದೇನೆಂದರೆ ಭದ್ರತೆ ವಿಚಾರದಲ್ಲಿ ಕರಾವಳಿಯ ನಾಲ್ಕು ಜಿಲ್ಲೆಗಳಿಗೆ ಅಧಿಪತಿ ಎನಿಸಿಕೊಂಡಿರುವ ಪಶ್ಚಿಮ ವಲಯ ಐಜಿಪಿ ಅವರ ಸರಕಾರಿ ಬಂಗ್ಲೆ ಆವರಣದಲ್ಲಿ ಬೆಳೆದು ನಿಂತಿದ್ದ ಶ್ರೀಗಂಧದ ಮರವನ್ನೇ ದುಷ್ಕರ್ಮಿಗಳು ಕೊಳ್ಳೆ ಹೊಡೆದಿದ್ದಾರೆ ! ಆ ಮೂಲಕ ಪೊಲೀಸರ ಬಹುದೊಡ್ಡ ಭದ್ರತಾ ವೈಫಲ್ಯವೊಂದು ಬಯಲಾಗಿದೆ.

Advertisement

ಹೌದು, ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್‌ ಇಲಾಖೆಯ ನೇತೃತ್ವ ವಹಿಸಿಕೊಂಡಿರುವ ಪಶ್ಚಿಮ ವಲಯದ ಐಜಿಪಿ ಹೇಮಂತ್‌ ನಿಂಬಾಳ್ಕರ್‌ ಅವರ ಸರಕಾರಿ ಬಂಗ್ಲೆಯು ಮಂಗಳೂರು ನಗರದಿಂದ ಸುಮಾರು ಐದು ಕಿ.ಮೀ. ದೂರದಲ್ಲಿರುವ ಮೇರಿಹಿಲ್‌ನಲ್ಲಿದೆ. ನಗರದ‌ ಹೆಲಿಪ್ಯಾಡ್‌ಗೆ ಹೊಂದಿಕೊಂಡಿರುವ ಈ ಐಜಿಪಿ ಬಂಗ್ಲೆ ಆವರಣದಲ್ಲಿದ್ದ ಬೆಲೆಬಾಳುವ ಶ್ರೀಗಂಧದ ಮರವೊಂದು ನಾಲ್ಕು ದಿನಗಳ ಹಿಂದೆಯಷ್ಟೇ ಬುಡ ಸಹಿತ ನಾಪತ್ತೆಯಾಗಿದೆ! ಆತಂಕದ ವಿಚಾರವೆಂದರೆ ಪಶ್ಚಿಮ ವಲಯ ಐಜಿಪಿ ಅಧಿಕೃತ ನಿವಾಸವಾಗಿರುವ ಕಾರಣಕ್ಕೆ ಇಲ್ಲಿ ದಿನದ 24 ಗಂಟೆಯೂ ಬಿಗಿ ಪೊಲೀಸ್‌ ಭದ್ರತೆಯಿದೆ. ಹೀಗಿರುವಾಗ ಪೊಲೀಸರ ಸರ್ಪಗಾವಲಿನ ನಡುವೆ ಸರಕಾರಿ ಬಂಗಲೆಯ ಆವರಣದೊಳಗೆ ಬೆಳೆದು ನಿಂತಿದ್ದ ಶ್ರೀಗಂಧದ ಮರವನ್ನು ಮಟ-ಮಟ ಮಧ್ಯಾಹ್ನವೇ ಬೇರು ಸಹಿತ ಬುಡಮೇಲು ಮಾಡಿಕೊಂಡು ಕಳ್ಳತನ ಮಾಡಿರುವುದು ಎಲ್ಲರನ್ನೂ ಮೂಕ ವಿಸ್ಮಯಗೊಳಿಸಿದೆ.

ಅವರು ಹೋಗಿ ಇವರು ಬರುವಷ್ಟರಲ್ಲಿ ಮರ ಕಾಣೆ !: ಇವೆಲ್ಲಕ್ಕಿಂತಲೂ ಮುಖ್ಯ ವಿಚಾರವೆಂದರೆ ಈ ಶ್ರೀಗಂಧದ ಮರವನ್ನು ಬಹಳ ವ್ಯವಸ್ಥಿತ ಹಾಗೂ ಪೂರ್ವ ನಿಯೋಜಿತ ಕೃತ್ಯವಾಗಿ ಕದ್ದೊಯ್ದಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಕಳೆದ ಏಳೂವರೆ ತಿಂಗಳಿನಿಂದ ಪಶ್ಚಿಮ ವಲಯ ಐಜಿಪಿಯಾಗಿದ್ದ ಹರಿಶೇಖರನ್‌ಗೆ ವರ್ಗವಾಗಿದ್ದು ಅವರ ಸ್ಥಾನಕ್ಕೆ ಹೇಮಂತ್‌ ನಿಂಬಾಳ್ಕರ್‌ ನೇಮಕಗೊಂಡಿದ್ದರು. ಆ. 17ರಂದು ಹರಿಶೇಖರನ್‌ ಅವರಿಂದ  ನಿಂಬಾಳ್ಕರ್‌ ಅಧಿಕಾರ ಸ್ವೀಕರಿಸಿದ್ದರು. ವಿಶೇಷ ಅಂದರೆ ಅದೇ ದಿನ ಅವರ ಸರಕಾರಿ ಬಂಗ್ಲೆ ಆವರಣದಲ್ಲಿದ್ದ ಶ್ರೀಗಂಧದ ಮರ ಕೂಡ ಕಳವು ಆಗಿದೆ.

ಮೂಲಗಳ ಪ್ರಕಾರ ಆ. 17ರಂದು ಹರಿಶೇಖರನ್‌ ತಮ್ಮ ಅಧಿಕೃತ ನಿವಾಸವನ್ನು ತೆರವುಗೊಳಿಸಿದ್ದಾರೆ. ಅಂದೇ ಅಪರಾಹ್ನ  ನಿಂಬಾಳ್ಕರ್‌ ಮೇರಿಹಿಲ್‌ನ ಅಧಿಕೃತ ನಿವಾಸಕ್ಕೆ ಸ್ಥಳಾಂತರ ಆಗುವವರಿದ್ದರು. ಹಳೇ ಐಜಿಪಿ ಮನೆ ಖಾಲಿ ಮಾಡಿ ಹೊಸ ಐಜಿಪಿ ಪ್ರವೇಶ ಆಗುವ ನಡುವಿನ ಎರಡು ಗಂಟೆ ಅಂತರದಲ್ಲಿ ಗಂಧದ ಮರ ತೆರವು ಕಾರ್ಯಾಚರಣೆ ಕೂಡ ಬಹಳ ವ್ಯವಸ್ಥಿತವಾಗಿ ನಡೆದಿದೆ ಎನ್ನಲಾಗಿದೆ.

ಬಂಗ್ಲೆ ಪಕ್ಕದಲ್ಲೇ ಮರವಿತ್ತು !
ಬಂಗ್ಲೆ ಮುಖ್ಯದ್ವಾರದಿಂದ ಐಜಿಪಿ ನಿವಾಸದತ್ತ ಹೋಗುವ ದಾರಿಯುದ್ದಕ್ಕೂ ತೇಗ ಸಹಿತ ಕೆಲವು ಉತ್ತಮ ಜಾತಿಯ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಅದೇ ರೀತಿ ಕಳವು ಆಗಿರುವ ಶ್ರೀಗಂಧದ ಮರವನ್ನು ಕೂಡ ಐಜಿಪಿ ವಾಸಿಸುವ ಕಟ್ಟಡದ ಸಮೀಪದಲ್ಲೇ ನೆಟ್ಟು ಬೆಳೆಸಲಾಗಿತ್ತು. ಹೀಗಿರುವಾಗ ಬಂಗ್ಲೆಗೆ ಹೊಂದಿಕೊಂಡಂತೆ ಸುಮಾರು ಹತ್ತಾರು ಅಡಿ ಎತ್ತರಕ್ಕೆ ಬೆಳೆದು ನಿಂತಿದ್ದ ಶ್ರೀಗಂಧ ಮರವನ್ನು ಸುಮಾರು 3ರಿಂದ 4 ಮಂದಿ ಸೇರಿಕೊಂಡು ಬೇರು ಸಹಿತ ಬುಡಮೇಲು ಮಾಡಿದ್ದಾರೆ. ಅನಂತರ ಪೊಲೀಸರ ಕಣ್ಣಿಗೂ ಬೀಳದಂತೆ ಬಹಳ ರಹಸ್ಯವಾಗಿ ಕದ್ದುಕೊಂಡು ಹೋಗಿದ್ದಾರೆ. ಬಂಗ್ಲೆಗೆ ಬಂದ ಹೊಸಬರಿಗೆ ಯಾರಿಗೂ ಆ ಜಾಗದಲ್ಲಿ ಮರವಿತ್ತು ಎನ್ನುವುದು ಗೊತ್ತಾಗಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿದೆ. ಈ ಮೊದಲು ನೋಡಿದವರಿಗಷ್ಟೇ ಅದು ಕಳ್ಳತನವಾಗಿರುವ ವಿಚಾರ ಈಗ ಗೊತ್ತಾಗಿದೆ. 

Advertisement

ಮರಕ್ಕೇ ಭದ್ರತೆಯಿಲ್ಲ; ಐಜಿಪಿ ಕಥೆಯೇನು?
ದ.ಕ., ಉಡುಪಿ, ಚಿಕ್ಕಮಗಳೂರು ಹಾಗೂ ಉ.ಕ. ಸೇರಿದಂತೆ ಒಟ್ಟು ನಾಲ್ಕು ಜಿಲ್ಲೆಗಳು (ಕಮಿಷನರೆಟ್‌ ಹೊರತುಪಡಿಸಿ) ಪಶ್ಚಿಮ ವಲಯದ ವ್ಯಾಪ್ತಿಗೆ ಬರುತ್ತವೆ. ಅಂದರೆ ಈ ನಾಲ್ಕು ಜಿಲ್ಲೆಗಳಲ್ಲಿ ಭದ್ರತೆ ವಿಚಾರದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಐಜಿಪಿ ವ್ಯಾಪ್ತಿಯಲ್ಲಿರುತ್ತದೆ. ಅಂಥ ಒಬ್ಬ ಪೊಲೀಸ್‌ ಅಧಿಕಾರಿ ನೆಲೆಸಿರುವ ಮನೆ ಆವರಣದಿಂದಲೇ ಶ್ರೀಗಂಧದ ಮರವನ್ನು ಹಾಡ ಹಗಲೇ ಕದ್ದು ಸಾಗಿಸಿರುವುದು ಜಿಲ್ಲೆಯ ಭದ್ರತೆ ವಿಚಾರದಲ್ಲಿ ಅತ್ಯಂತ ಗಂಭೀರ ವಿಚಾರ. ಏಕೆಂದರೆ ಈ ಹಿಂದೆ ನಕ್ಸಲ್‌ ಪೀಡಿತ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಕ್ಸಲರ ಅಟ್ಟಹಾಸ ಜೋರಾಗಿದ್ದ ಸಂದರ್ಭದ ಅನಂತರದಲ್ಲಿ ಐಜಿಪಿ ಬಂಗ್ಲೆಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗುತ್ತಿದೆ. ಹೀಗಿರುವಾಗ ಇಂಥ ಕಳವು ಪ್ರಕರಣ ದ.ಕ.ದ ಜಿಲ್ಲೆಯ ಇತಿಹಾಸದಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲೇ ಅಪರೂಪದ ಪ್ರಕರಣವಾಗಿದೆ. ಅರಣ್ಯ ಸಚಿವ ರಮಾನಾಥ ರೈ ಅವರ ತವರು ಜಿಲ್ಲೆಯಲ್ಲೇ ಹೀಗಾಗಿರುವುದು ಗಂಭೀರ ವಿಚಾರ.

ಐಜಿಪಿ ಮನೆ ಆವರಣದಲ್ಲಿಯೇ ಈ ಸ್ಥಿತಿಯಾದರೆ ಇನ್ನು ಜನಸಾಮಾನ್ಯರ ಕಥೆಯೇನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡುವುದು ಸಹಜ.

ಶ್ರೀಗಂಧದ ಮರ  ಕಳವು ಮೊದಲಲ್ಲ !
ಐಜಿಪಿ ಬಂಗ್ಲೆ ಆವರಣದಿಂದ ಶ್ರೀಗಂಧದ ಮರ ಕಳವು ಆಗಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅಂದರೆ, ನಿವೃತ್ತ ಪೊಲೀಸ್‌ ಅಧಿಕಾರಿ ಸತ್ಯನಾರಾಯಣ ರಾವ್‌ ಅವರು ಐಜಿಪಿಯಾಗಿದ್ದ ಅವಧಿಯಲ್ಲಿಯೂ ಬೃಹತ್‌ ಗಾತ್ರದ ಶ್ರೀಗಂಧದ ಮರವೊಂದು ಇದೇ ರೀತಿ ಸಿನಿಮೀಯ ಮಾದರಿಯಲ್ಲಿ ಕಳವಾಗಿತ್ತು. ಆದರೆ ಆ ಪ್ರಕರಣ ಬೆಳಕಿಗೆ ಬಂದಿರಲಿಲ್ಲ ಎನ್ನಲಾಗಿದೆ. ಇದನ್ನೆಲ್ಲ ಗಮನಿಸುವಾಗ ಐಜಿಪಿ ಬಂಗ್ಲೆ ಆವರಣದಿಂದ ಶ್ರೀಗಂಧ ಕಳವು ಆಗುತ್ತಿರುವುದರ ಹಿಂದೆ ವ್ಯವಸ್ಥಿತ ಜಾಲವೊಂದು ಕೆಲಸ ಮಾಡುತ್ತಿರುವುದು ಸ್ಪಷ್ಟವಾಗುತ್ತದೆ. ಈಗಷ್ಟೇ ಅಧಿಕಾರ ವಹಿಸಿಕೊಂಡಿರುವ ದಕ್ಷ ಐಜಿಪಿ ಹೇಮಂತ್‌ ನಿಂಬಾಳ್ಕರ್‌ ಅವರು ಒಂದು ವೇಳೆ ಈ ಬಗ್ಗೆ ತನಿಖೆಗೆ ಆದೇಶಿಸಿದರೆ ಆಗ ಈ ಕೃತ್ಯದ ಹಿಂದಿನ ರಹಸ್ಯ ಜಾಲ ಬಯಲಿಗೆ ಬರಬಹುದು.

ಬಿಗು ಭದ್ರತೆ ಇದ್ದರೂ …
ಐಜಿಪಿ ಅಧಿಕೃತ ನಿವಾಸ ಮೇರಿಹಿಲ್‌ನ ಸರಕಾರಿ ಬಂಗ್ಲೆ ಬಿಗು ಭದ್ರತಾ ವ್ಯವಸ್ಥೆಯನ್ನು ಹೊಂದಿದೆ. 2 ಎಕರೆಯಷ್ಟು ಜಾಗದಲ್ಲಿರುವ ಈ ಬಂಗ್ಲೆಗೆ ಪ್ರವೇಶ ದ್ವಾರದಲ್ಲಿ  ಸುಭದ್ರ ಗೇಟ್‌ ಇದ್ದು, ಪಕ್ಕದಲ್ಲೇ ಪೊಲೀಸರ ಕಾವಲಿಗೆ ಪ್ರತ್ಯೇಕ ಭದ್ರತಾ ಕೊಠಡಿ ಕೂಡ ಇದೆ. ಗೇಟ್‌ ಬಳಿಯೇ 3ರಿಂದ 4 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇಲ್ಲಿ  24 ಗಂಟೆಯೂ ಪೊಲೀಸರು ಕಾವಲಿದೆ. ಐಜಿಪಿ ಮನೆಗೆ ಯಾರೇ ಬಂದರೂ ತಪಾಸಣೆ ನಡೆಸಿಯೇ ಒಳಗೆ ಬಿಡುತ್ತಾರೆ. ಭದ್ರತೆ ಸಹಿತ ಐಜಿಪಿ ಬಂಗ್ಲೆ ಉಸ್ತುವಾರಿ ನೋಡಿಕೊಳ್ಳಲು ಪ್ರತಿದಿನ 15 ಪೊಲೀಸರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಬಂಗ್ಲೆ  ಸುತ್ತಲೂ ಕಾಂಪೌಂಡ್‌ ಇದ್ದು, ಪೊಲೀಸರ ಕಣ್ತಪ್ಪಿಸಿ ಅಪರಿಚಿತರು ಒಳಪ್ರವೇಶಿಸು ವುದು ಸುಲಭವಲ್ಲ. ಇನ್ನು ಐಜಿಪಿ ವಾಸವಿರುವ‌ ಕಟ್ಟಡದಲ್ಲಷ್ಟೇ ಸಿಸಿ ಕೆಮರಾ ಇದೆ ಎನ್ನುತ್ತಾರೆ ಐಜಿಪಿ ಮನೆಗೆ ಈ ಹಿಂದೆ ಭೇಟಿ ನೀಡಿರುವ ಕೆಲವರು.

– ಸುರೇಶ್‌ ಪುದುಬೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next