Advertisement

ಮರಳು ಅಭಾವದಿಂದ ಕಾಮಗಾರಿಗಳು ಕುಂಠಿತ

11:29 AM Jan 23, 2020 | Naveen |

ಹೊನ್ನಾಳಿ: ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ. ಮರಳಿನ ವಿಷಯದಲ್ಲಿ ಹೊನ್ನಾಳಿಗೆ ಈ ಮಾತು ಅಕ್ಷರಶಃ ಅನ್ವಯಿಸುತ್ತದೆ. ಹೊನ್ನಾಳಿಯ ತುಂಗಭದ್ರಾ ನದಿಯಲ್ಲಿ ಉತ್ತಮ ಗುಣಮಟ್ಟದ ಮರಳು ಹೇರಳವಾಗಿ ಲಭಿಸುತ್ತಿದ್ದರೂ ಕಟ್ಟಡ ಕಾಮಗಾರಿಗಾಗಿ ಮಾತ್ರ ಮರಳು ಈ ಭಾಗದ ಜನತೆಗೆ ಸಿಗುತ್ತಿಲ್ಲ. ಸಾರ್ವಜನಿಕರು ಮರಳಿಗಾಗಿ ಪರಿತಪಿಸುವ  ದುಸ್ಥಿತಿ ಇದೆ.

Advertisement

ಮರಳಿನ ಕೃತಕ ಅಭಾವದಿಂದಾಗಿ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳೂ ಸೇರಿದಂತೆ ಈ ಭಾಗದ ಸುತ್ತ-ಮುತ್ತಲಿನ ವಿವಿಧ ಜಿಲ್ಲೆ-ತಾಲೂಕುಗಳಲ್ಲಿನ ಕಟ್ಟಡ ನಿರ್ಮಾಣ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ. ಇದರಿಂದಾಗಿ ಕಟ್ಟಡ ಕಾರ್ಮಿಕರು ಕೆಲಸ ಇಲ್ಲದೇ ಕಾಲ ಕಳೆಯುವಂತಾಗಿದೆ.

ಈ ಮಧ್ಯೆ, ಗ್ರಾಮ ಪಂಚಾಯಿತಿ ವಸತಿ ಫಲಾನುಭವಿಗಳಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಎತ್ತಿನ ಗಾಡಿಗಳಲ್ಲಿ ಮರಳು ಸಾಗಾಟಕ್ಕೆ ಷರತ್ತುಬದ್ಧ ಅನುಮತಿ ನೀಡಲಾಗಿದೆ.

ಇದರಿಂದಾಗಿ ಗ್ರಾಮೀಣ ಭಾಗಗಳ ಜನರು ಕೊಂಚ ನಿರಾಳರಾಗಿದ್ದಾರೆ. ಆದರೆ, ಗ್ರಾಮೀಣ ಭಾಗಗಳ ಜನರ ಹೆಸರಲ್ಲಿ ಎತ್ತಿನ ಗಾಡಿಗಳಲ್ಲಿ ಮರಳು ಸಾಗಾಟ ಮಾಡಿ, ಒಂದೆಡೆ ಸಂಗ್ರಹಿಸಿ, ಬಳಿಕ ಟ್ರ್ಯಾ ಕ್ಟರ್‌-ಟಿಪ್ಪರ್‌ ಲಾರಿಗಳ ಮೂಲಕ ಅಧಿ ಕ ಬೆಲೆಗೆ ಮರಳು ಮಾರಾಟ ಮಾಡುವ ಜಾಲವೂ ಇದೆ ಎಂಬ ಆರೋಪವೂ ಇದೆ. ಇದರಿಂದಾಗಿಯೇ ಪ್ರದೇಶದಲ್ಲಿ ಮರಳಿನ ಕೃತಕ ಅಭಾವ ಸೃಷ್ಟಿಯಾಗಿ ಬೆಲೆ ಹೆಚ್ಚುತ್ತಿದೆ ಎಂಬ ಮಾತುಗಳೂ ಇವೆ. ಆದರೆ ಈ ಬಗ್ಗೆ ಕ್ರಮ ಜರುಗಿಸಲು ಅಧಿ ಕಾರಿಗಳು ಮುಂದಾಗುತ್ತಿಲ್ಲ.

ಕ್ವಾರಿಗಳಿವೆ 33: ಹೊನ್ನಾಳಿ ತಾಲೂಕು ವ್ಯಾಪ್ತಿಯ ತುಂಗಭದ್ರಾ ನದಿಯಲ್ಲಿ 33ಕ್ಕೂ ಅಧಿಕ ಮರಳು ಕ್ವಾರಿಗಳಿವೆ. ಆ ಪೈಕಿ ಒಟ್ಟು 11 ಮರಳು ಕ್ವಾರಿಗಳನ್ನು ಮರಳು ತುಂಬಲು ಕಳೆದ ಬಾರಿ ಸರಕಾರ ಹರಾಜು ನೀಡಿತ್ತು. ಇದೀಗ, ಈ ಬಾರಿ ತಾಲೂಕಿನ ಏಳು ಕ್ವಾರಿಗಳಲ್ಲಿ ಮರಳು ತುಂಬಲು ಅನುಮತಿ ನೀಡಿದೆ. ಕ್ವಾರಿಯಲ್ಲಿ ಪ್ರತಿ ಟನ್‌ಗೆ 1400 ರೂ ದರವಿದ್ದು, ಅಧಿಕ ದರದ ಹಿನ್ನೆಲೆಯಲ್ಲಿ ಸಾಮಾನ್ಯ ಜನರು ಮರಳು ಖರೀದಿಸಲು ಹಿಂದೆ ಮುಂದೆ ನೋಡುವಂತಾಗಿದೆ.

Advertisement

ಏಳು ಕ್ವಾರಿಗಳಲ್ಲಿ ಮಾತ್ರ ಮರಳು ಲಭ್ಯ: ಸದ್ಯಕ್ಕೆ ಹೊನ್ನಾಳಿ ವ್ಯಾಪ್ತಿಯ ಏಳು ಕ್ವಾರಿಗಳಲ್ಲಿ ಮರಳು ಲಭ್ಯವಿದೆ. ತಾಲೂಕಿನ ಕೋಟೆಹಾಳ್‌, ಬಾಗೇವಾಡಿ, ಬೀರಗೊಂಡನಹಳ್ಳಿ-1 ಮತ್ತು 2, ಹಿರೇಬಾಸೂರು, ಬೇಲಿಮಲ್ಲೂರು, ಚಿಕ್ಕಬಾಸೂರು ಕ್ವಾರಿಗಳಲ್ಲಿ ಮರಳು ತುಂಬಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪರ್ಮಿಟ್‌ಗಳನ್ನು ವಿತರಿಸುತ್ತಿದೆ. ಹೊನ್ನಾಳಿ ವ್ಯಾಪ್ತಿಯ ಬಿದರಗಡ್ಡೆ, ರಾಂಪುರ, ಗೋವಿನಕೋವಿ, ಬುಳ್ಳಾಪುರ, ಹುರುಳೇಹಳ್ಳಿ ಕ್ವಾರಿಗಳಲ್ಲಿ ಮರಳಿನದರ ಹೆಚ್ಚಾಗಿದೆ ಎನ್ನುವ ಕಾರಣಕ್ಕೆ ಹಾಗೂ ಸಾರ್ವಜನಿಕರು ಯಾರೂ ಮರಳು ತುಂಬಲು ಆಸಕ್ತಿ ತೋರಿಸದ ಹಿನ್ನೆಲೆಯಲ್ಲಿ ಆ ಕ್ವಾರಿಗಳಲ್ಲಿ ಮರಳು ತುಂಬಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪರ್ಮಿಟ್‌ ಗಳನ್ನು ವಿತರಿಸುತ್ತಿಲ್ಲ. ಮರಳು ಸಮರ್ಪಕವಾಗಿ ಸರಬರಾಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಾರೂ ಚಿಂತಿಸುವ ಅಗತ್ಯವಿಲ್ಲ ಎಂಬುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹೇಳಿಕೆ.

ಮಳೆಗಾಲದ ಬಳಿಕ ಕಳೆದೆರಡು ತಿಂಗಳುಗಳಿಂದ ತುಂಗಭದ್ರಾ ನದಿಯಿಂದ ಮರಳು ತೆಗೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನೀಡಿದೆ. ಹೊನ್ನಾಳಿಯಲ್ಲಿ ಈಗಾಗಲೇ ತಾಲೂಕು ಮರಳು ಸಮಿತಿ ಸಭೆ ನಡೆಸಿ ಮರಳಿನ ಲಭ್ಯತೆ ಬಗ್ಗೆ ಗಮನಹರಿಸಿದೆ. ತಾಲೂಕು ಮರಳು ಸಮಿತಿಯ ಅಧ್ಯಕ್ಷ, ಉಪ ವಿಭಾಗಾಧಿ ಕಾರಿ ಮತ್ತಿತರ ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ವಿವರಿಸುತ್ತಾರೆ.

ಅಧಿಕಾರಿಗಳೊಂದಿಗೆ ಸಭೆ: ಸಿಎಂ ರಾಜಕೀಯ ಕಾರ್ಯದರ್ಶಿಗಳೂ ಆಗಿರುವ ಶಾಸಕ ಎಂ.ಪಿ. ರೇಣುಕಾಚಾರ್ಯ ಮರಳು ವಿತರಣೆ ಕುರಿತಂತೆ ತಾಲೂಕಿನ ಅಧಿ ಕಾರಿಗಳೊಂದಿಗೆ ನಿಯಮಿತವಾಗಿ ಸಭೆಗಳನ್ನು ನಡೆಸಿದ್ದಾರೆ. ಅಕ್ರಮ ಮರಳು ಸಾಗಾಟವನ್ನು ತಾವು ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ತುಂಗಭದ್ರೆ ಒಡಲಿಗೆ ಕನ್ನ: ತುಂಗಭದ್ರಾ ನದಿಯಲ್ಲಿ ದೊರೆಯುವ ಮರಳಿನ ಮೇಲೆಯೇ ಎಲ್ಲರ ಕಣ್ಣು. ನದಿಯ ಬಗ್ಗೆ, ಅದರಲ್ಲಿನ ಜೀವಜಾಲದ ಬಗ್ಗೆ ಯಾರಿಗೂ ಕಾಳಜಿ ಇಲ್ಲವಾಗಿದೆ. ಪರಿಸರದ ಅಸಮತೋಲನದ ದುಷ್ಪರಿಣಾಮವನ್ನು ನದಿಯಲ್ಲಿನ ಎಲ್ಲಾ ಜೀವಿಗಳೂ ಅನುಭವಿಸುವಂತಾಗುತ್ತದೆ.

ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸುವ ಬಡವರಿಗೆ ಮರಳು ಸಿಗುತ್ತಿಲ್ಲ. ಇದರಿಂದಾಗಿ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಅ ಧಿಕಾರಿಗಳು ಇತ್ತ ಗಮನಹರಿಸಿ ಶೀಘ್ರವೇ ಸುಲಭವಾಗಿ ಮರಳು ಲಭಿಸುವಂತೆ ಕ್ರಮ ಜರುಗಿಸಬೇಕು.
ಕತ್ತಿಗೆ ನಾಗರಾಜ್‌,
ಸಮಾಜ ಕಾರ್ಯಕರ್ತ,
ಹೊನ್ನಾಳಿ.

ಅಕ್ರಮ ಮರಳು ಸಾಗಣೆಯಾಗಲಿ ಅಥವಾ ತಾಲೂಕಿನಲ್ಲಿ ಮರಳಿನ ಅಭಾವವಾಗಲಿ ಕಂಡು ಬರುತ್ತಿಲ್ಲ. ಹೆಚ್ಚಿನ ದರ ಆಕರಣೆ ಅಥವಾ ಅಕ್ರಮ ಸಾಗಣೆ ಗಮನಕ್ಕೆ ತಂದಲ್ಲಿ ಕ್ರಮ ಕೈಗೊಳ್ಳಲಾಗುವುದು.
ತುಷಾರ್‌ ಬಿ. ಹೊಸೂರು,
ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next