ಲವ್ ಮಾಕ್ವೇಲ್ ಚಿತ್ರ 2020ರ ಜನವರಿಯಲ್ಲಿ ಬಿಡುಗಡೆಯಾದ ಚಲನಚಿತ್ರ. ಕೃಷ್ಣ ಅವರ ಮೊದಲ ಚಿತ್ರ. ಹೆಸರೇ ಹೇಳುವಂತೆ ಪ್ರೀತಿಯ ನೆಲೆಯನ್ನು ಶೋಧಿಸಲು ಹೊರಡುವ ಚಿತ್ರದ ಕುರಿತು ಇಲ್ಲಿ ವಿವರಿಸಿರುವವರು ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜಿನ ಶಿಲ್ಪಾ ಹೇರಂಜಾಲ್ .
*
ಪ್ರೀತಿ ಹಾಗೂ ಮದುವೆಯನ್ನು ಮೂಲವಾಗಿರಿಸಿಕೊಂಡೇ ವಾಸ್ತವಕ್ಕೆ ಹತ್ತಿರವಾಗಿರುವಂತೆ ಕಾಣುವ, ಭಿನ್ನ ರೂಪದಲ್ಲಿ ಪ್ರೇಕ್ಷಕರ ಮುಂದೆ ಅನಾವರಣಗೊಂಡ ‘ಲವ್ ಮಾಕ್ಟೇಲ್’ ಚಿತ್ರ ನನ್ನ ನೆಚ್ಚಿನ ಚಿತ್ರಗಳಲ್ಲಿ ಒಂದಾಗಿದೆ. ಯಾವುದೇ ಸ್ಟಾರ್ ಡಮ್ ಇಲ್ಲದ ಡಾರ್ಲಿಂಗ್ ಕೃಷ್ಣ ನಟನೆ, ನಿರ್ದೇಶನದ ಲವ್ ಮಾಕ್ಟೇಲ್ ಚಿತ್ರದ ಕಥೆ, ನಿರೂಪಣೆ, ಎಲ್ಲವೂ ಚೆನ್ನಾಗಿದೆ.
ಪ್ರಕೃತಿಯ ಯಾವೊಂದು ಜೀವಿಯೂ ಪ್ರೀತಿಯ ಹೊರತಾಗಿಲ್ಲ ಕಾರಣ ಪ್ರಕೃತಿಯೇ ಪ್ರೀತಿ. ಮನುಷ್ಯ ಮಾತ್ರವಲ್ಲ, ನಿಸರ್ಗಕೆ ಅಂಟಿಕೊಂಡ ಪ್ರತಿ ಜೀವಿಯೂ ಪ್ರೀತಿಯ ಪಡೆಯಲು ಬಯಸುತ್ತದೆ. ನಾವಾಗಿದ್ದೂ ಪ್ರೀತಿಯಿಂದಲೆ ನಮ್ಮನೆಯ ಕರು, ಹಾರಾಡುವ ಗಿಳಿಮರಿ, ಓಡಾಡುವ ಜಿಂಕೆ, ಘರ್ಜಿಸುವ ಸಿಂಹ, ಚಿತ್ತಾರದ ಪಾತರಗಿತ್ತಿ ಎಲ್ಲವೂ ಪ್ರೀತಿಯ ಹುಟ್ಟಿನ ದ್ಯೋತಕವೇ. ಇವತ್ತಿಗೂ ಹುಟ್ಟು ನಿಂತಿಲ್ಲ. ಸುಂದರವಾದದ್ದನ್ನು ಪ್ರೀತಿಸುವುದು ಮೋಹದ ರೂಪವಾದರೆ, ಪ್ರೀತಿಸಿದ್ದನ್ನೇ ಸುಂದರ ಎಂದುಕೊಳ್ಳುವುದು ಪ್ರೀತಿಯ ಪರಿಪೂರ್ಣತೆಯ ರೂಪ.
ಇಂತಹದ್ದೇ ಒಂದು ಸುಂದರವಾದ, ಯುವಕನೊಬ್ಬನ ಪ್ರೀತಿ, ಮದುವೆಯ ಸುತ್ತ ಸುತ್ತುವ ಕಥಾ ಹಂದರವಾಗಿರುವ ಚಿತ್ರವೇ ಲವ್ ಮಾಕ್ಟೇಲ್. ಕೆಲ ಯುವಕರಂತೂ ಇದು ನನ್ನದೇ ಕಥೆ ಎಂದುಕೊಂಡವರಿದ್ದಾರೆ. ಪಯಣದ ಮಧ್ಯೆ ಆಕಸ್ಮಿಕವಾಗಿ ಭೇಟಿಯಾಗುವ ಆದಿ ಹಾಗೂ ಅದಿತಿಯ ನಡುವಿನ ಸಂಭಾಷಣೆಗಳ ಮೂಲಕ ಚಿತ್ರದ ಕಥೆ ಸಾಗುತ್ತದೆ. ಆದಿಯ ಕಥೆ ಕೇಳಿದಂತೆ ಆತನ ಮೇಲೆ ಅದಿತಿಯ ಮನದಲ್ಲಿ ಪ್ರೀತಿಯೂ ಮೂಡುತ್ತದೆ. ಪ್ರೀತಿಯ ಆಕರ್ಷಣೆ ರೂಪ ಹದಿಹರೆಯದಲಿ ಸಾಮಾನ್ಯ ವಯಸ್ಸು ದಾಟಿದ ಹಾಗೆ ನಿಜವಾದ ಪ್ರೀತಿಯ ಪಕ್ವತೆಯಾಗಿ ಬದಲಾಗಬಹುದು. ಆದಿಯ ಮೊದಲ ಪ್ರೀತಿ ಜ್ಯೋಷಿತಾ ಎಂಬ ಹುಡುಗಿಯೊಂದಿಗೆ ಆರಂಭವಾಗುತ್ತದೆ. ಆದರೆ ಇದು ಪ್ರೀತಿಯಾಗದೆ ಅವಳ ಆಸೆಯ ಬವಣೆಯಲ್ಲಿ ಬೆಂದು ಕರಕಲಾಗುತ್ತದೆ. ಯಾವುದೊ ಆಸ್ತಿ, ಜಾತಿ, ಶ್ರೀಮಂತಿಕೆಯ ಬಲೆಯಲ್ಲಿ ಜ್ಯೋಷಿತಳ ಪ್ರೀತಿ ಕ್ರೋಧ ರೂಪ ಪಡೆಯುತ್ತದೆ. ಅದ್ಯಾವುದೂ ಪ್ರೀತಿಯೆ ಆಗಿರಲಿಲ್ಲ. ಅದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ.
ವಾಸ್ತವದಲ್ಲಿ ಆದಿಯ ನಿಜವಾದ ಪ್ರೀತಿ ಆರಂಭವಾಗುವುದೇ ಆತನ ಬದುಕಿನಲ್ಲಿ ಬರುವ ನಿಧಿಮಾಳಿಂದ. ಆದಿಯ ಬಗ್ಗೆ ಗೊತ್ತಿದ್ದರೂ ಆತನ ಒಳಿತನ್ನು ಮಾತ್ರ ಸ್ವೀಕರಿಸುವ ಆಕೆಯ ದೊಡ್ಡ ಗುಣ ಆತನಿಗೂ ಇಷ್ಟವಾಗುತ್ತದೆ. ಆಸ್ತಿ, ಹಣಕ್ಕಿಂತ ಬದುಕಿನಲ್ಲಿ ಸಮಯ ಅತೀ ಮುಖ್ಯ ಎನ್ನುವ ನಿಧಿಮಾಳ ಮಾತು ಅರ್ಥಗರ್ಭಿತವಾದುದು. ಇದು ಎಲ್ಲರಿಗೂ ಪಾಠವೂ ಹೌದು. ಹಣ, ಐಶ್ವರ್ಯವೆಂದೆಲ್ಲ ತುಡಿಯುವ ಜನರಿಗೆ ಅದೆಲ್ಲ ಸಿಕ್ಕ ನಂತರ ಹಿಂದೆ ತಿರುಗಿ ನೋಡಿದಾಗ ಅವರೊಂದಿಗೆ ಅದನ್ನು ಅನುಭವಿಸಲು ಯಾರು ಇಲ್ಲದ ಸ್ಥಿತಿ ಇರುತ್ತದೆ.
ಹೀಗೆ ಆದಿ ನಿಧಿಮಾರ ಸುಂದರ ಸಂಸಾರದ ನೌಕೆ ಸಾಗುತ್ತಿದ್ದಾಗ ದೊಡ್ಡದಾದ ಅಲೆಯೊಂದು ಅಪ್ಪಳಿಸುತ್ತದೆ. ಕಾಯಿಲೆಯ ಕರಿಕತ್ತಲು ತಾಯಿತನದ ಭಾಗ್ಯವನ್ನೆ ಕಿತ್ತು ತಿಂದಿತು. ಪ್ರಾಣಕ್ಕಾಗಿ ಕಾದುಕುಂತಿತು. ಪ್ರೀತಿಯ ಕುಡಿ ಇನ್ನೇನು ಚಿಗುರೊಡೆಯಬೇಕು ಅಷ್ಟರಲ್ಲೆ ಚಿವುಟಿ ಹೋಗುತ್ತದೆ. ಆದರೂ ಆದಿ ಎದೆಗುಂದದೆ, ಹೃದಯದ ಭಾರ ಹೊತ್ತುಕೊಂಡೆ ನಿಂತು ಖುಷಿಯ ಹೊನಲನ್ನೆ ಅವಳೆಡೆಗೆ ತೂಗಿಬಿಡುವ, ಒಬ್ಬರನೊಬ್ಬರು ಬಿಟ್ಟುಕೊಡದೆ ಇರುವುದೆ ನಿಜವಾದ ಪ್ರೀತಿ. ಕಾಲನ ಕರೆಗೆ ಕಾದಿರುವವರೂ ನಾವೆಲ್ಲಾ .” ನಿದಿಮಾ” ಸದ್ದಿಲ್ಲದೆ ನಿರ್ಜೀವ ನಿಧಿಯಾಗಿ ಭೂಮಿಗಿಳಿದಳು. ಇಷ್ಟೊತ್ತಿಗಾಗಲೇ ಅದಿತಿಗೂ ನಿಧಾನವಾಗಿ ಆದಿಯ ಮೇಲೆ ಪ್ರೀತಿ ಚಿಗುರೊಡೆಯಲು ಶುರುವಿಟ್ಟಿತು. ಅದಿತಿಯ ಪ್ರೀತಿಯನ್ನು ಆದಿ ಸ್ವೀಕರಿಸಿ,ಮತ್ತೊಂದು ಹೊಸ ಲವ್ ಸ್ಟೋರಿ ಆರಂಭವಾಗುತ್ತಾ ಅಥವಾ ತಿರಸ್ಕರಿಸುತ್ತಾನಾ ಅನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್.
ನೈಜ ಪ್ರೀತಿಯೆಂದರೇನು ಎನ್ನುವುದರ ಬಗ್ಗೆ ಸುಲಲಿತ ಹಾಗೂ ಸುಂದರವಾದ ರೀತಿಯ ಕಥೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ.. ಇಂದಿನ ಯುವ ಸಮೂಹದಲ್ಲಿ ಮೂಡುವ ಆಕರ್ಷಣೆಯನ್ನೆ ಪ್ರೀತಿ ಎಂದು ತಮ್ಮನ್ನು ತಾವೇ ಮೋಸ ಮಾಡಿಕೊಳ್ಳುವ ಎಲ್ಲರೂ ನೋಡುವ ಚಿತ್ರವಿದು.
– ಶಿಲ್ಪಾ ಹೇರಂಜಾಲ್