Advertisement

ಥಿಯೇಟರ್‌ಗಳಲ್ಲಿ ಶೇ.50 ಸೀಟಿಗೆ ಮಾತ್ರ ಅವಕಾಶ:ಸರ್ಕಾರದ ದ್ವಂದ್ವನೀತಿಗೆ ಸಿನಿಮಂದಿ ಸಿಡಿಮಿಡಿ

01:29 PM Feb 03, 2021 | Team Udayavani |

ಬೆಂಗಳೂರು: ರಾಜ್ಯ ಸರ್ಕಾರವು ಕೊರೊನಾ 2ನೇ ಅಲೆಯ ನೆಪ ಹೇಳಿ ಫೆ.28ರವರೆಗೆ ಥಿಯೇಟರ್‌ ಗಳಲ್ಲಿ ಶೇ.50ರಷ್ಟು ಸೀಟು ಭರ್ತಿಗೆ ಮಾತ್ರ ಅನುಮತಿ ನೀಡಿರುವುದು ಕನ್ನಡ ಚಿತ್ರರಂಗದ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಮಂಗಳವಾರ ರಾಜ್ಯಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿ ವಿರುದ್ಧ ಸಿಡಿದೆದ್ದಿರುವ ಸಿನಿಮಂದಿ, “ಒಂದೋ ನಮ್ಮನ್ನು ನಮ್ಮ ಪಾಡಿಗೆ ಉದ್ಯಮ ನಡೆಸಲು ಬಿಡಿ, ಇಲ್ಲವೆಂದಾದರೆ ಸಿನಿಮಾ ಕ್ಷೇತ್ರವನ್ನೇ ಮುಚ್ಚುವುದಾಗಿ ಘೋಷಿಸಿ’ ಎಂದು ಆಕ್ರೋಶಭರಿತರಾಗಿ ನುಡಿದಿದ್ದಾರೆ. ಇತ್ತೀಚೆಗಷ್ಟೇ ಶೇ.100ರಷ್ಟು ಸೀಟು ಭರ್ತಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿತ್ತು.

ಇದನ್ನೂ ಓದಿ:ಪೋಸ್ಟರ್‌ನಲ್ಲಿ ಹಾಫ್ ಹೀರೋಯಿನ್‌: ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬಳು ಮಲೆಯಾಳಿ ಚೆಲುವೆ

ಕಳೆದ 11 ತಿಂಗಳಿನಿಂದ ಸಂಕಷ್ಟದಲ್ಲಿದ್ದ ಚಿತ್ರರಂಗ ಈಗಷ್ಟೇ ಚೇತರಿಕೆ ಕಾಣುತ್ತಿದೆ. ಅದರಲ್ಲೂ ಈ ತಿಂಗಳು ಸಾಕಷ್ಟು ಬಿಗ್‌ ಬಜೆಟ್‌ ಸಿನಿಮಾಗಳು ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿವೆ. ಇಂತಹ ಸಮಯದಲ್ಲಿ ಕೇವಲ ಶೇ.50ರಷ್ಟು ಸೀಟು ಭರ್ತಿ ಯಲ್ಲಿ ಸಿನಿಮಾ ಪ್ರದರ್ಶಿಸಿದರೆ ಹಾಕಿದ ಬಂಡವಾಳ ವಾಪಸ್‌ ಬರುವುದಾದರೂ ಹೇಗೆ ಎನ್ನುವುದು ನಿರ್ಮಾಪಕರ ಪ್ರಶ್ನೆ. ಲಕ್ಷಗಟ್ಟಲೆ ವ್ಯಯಿಸಿ ಪ್ರಮೋಶನ್‌ ಆರಂಭಿಸಲಾಗಿದ್ದು, ಸರ್ಕಾರದ ನಿರ್ಧಾರ ಚಿತ್ರೋದ್ಯಮಕ್ಕೆ ದೊಡ್ಡ ಹೊಡೆತವನ್ನೇ ನೀಡಿದೆ. ಪ್ರತಿ ವರ್ಷ ಸಿನಿಮಾ ಕ್ಷೇತ್ರದಿಂದ ಸರ್ಕಾರಕ್ಕೆ ದೊಡ್ಡ ಮೊತ್ತದ ತೆರಿಗೆ ಪಾವತಿಯಾಗುತ್ತದೆ.

ಬೇರೆಲ್ಲಾ ಉದ್ಯಮಗಳಿಗೆ ಇಲ್ಲದ ನಿರ್ಬಂಧ ಸಿನಿಮಾ ಉದ್ಯಮಕ್ಕೆ ಮಾತ್ರ ಯಾಕೆ ಎಂದು ನಿರ್ಮಾಪಕರು ಪ್ರಶ್ನೆ ಮಾಡುತ್ತಿದ್ದಾರೆ. ಸರ್ಕಾರದ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಈ ನಿರ್ಧಾರ ಖಂಡನೀಯ. ಈಗಷ್ಟೇ ಉದ್ಯಮ ಚೇತರಿಕೆಯ ಹಾದಿಯಲ್ಲಿದೆ. ಸಿನಿಮಾವನ್ನೇ ನಂಬಿಕೊಂಡ ನಮ್ಮಂಥವರು ಎಲ್ಲಿ ಹೋಗಬೇಕು? ಈ ಬಗ್ಗೆ ಶೀಘ್ರವೇ ಸಭೆ ನಡೆಸಿ, ಮುಂದಿನ ನಿರ್ಧಾರದ ಬಗ್ಗೆ ಚರ್ಚಿಸಲಿದ್ದೇವೆ ಎಂದಿದ್ದಾರೆ.

Advertisement

ಇದನ್ನೂ ಓದಿ: ಗೆಲುವಿನ ನಗೆ ಬೀರಿದ ರಾಮಾರ್ಜುನ: ಅನೀಶ್‌ ಮೊಗದಲ್ಲಿ ನಗು

ನಿರ್ಧಾರ ಕೇಳಿ ಶಾಕ್‌ ಆಗಿದೆ: ಕೇಂದ್ರ ಸರ್ಕಾರ ಶೇ.100ರಷ್ಟು ಪ್ರವೇಶಕ್ಕೆ ಅನುಮತಿ ನೀಡಿದ್ದರಿಂದ ನಿರ್ಮಾಪಕರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದರು. ಈಗ ಏಕಾಏಕಿ ರಾಜ್ಯ ಸರ್ಕಾರ ಮತ್ತೆ ಹಿಂದಿನ ನಿಯಮವನ್ನೇ ಜಾರಿ ಮಾಡಲು ಮುಂದಾಗಿ ರುವುದನ್ನ ಕೇಳಿ ಶಾಕ್‌ ಆಗಿದೆ. ನಿರ್ಮಾಪಕರು, ಪ್ರದರ್ಶಕರ ಪಾಲಿಗೆ ಇದೊಂಥರಾ ಬಿಸಿ ತುಪ್ಪದಂತಾಗಿದೆ. ಫ‌ುಲ್‌ ಮೀಲ್ಸ್‌ ಮುಂದೆ ಇಟ್ಟು, ಅದರಲ್ಲಿ ಅರ್ಧ ಮಾತ್ರ ತಿನ್ನುವಂತೆ ಹೇಳಿದ್ರೆ ನಿರ್ಮಾಪಕರು ಏನು ಮಾಡಬೇಕು?

ಸರ್ಕಾರದ ಈ ನಿರ್ಧಾರ ಹಿಂಪಡೆಯುವಂತೆ ಮನವಿ ಮಾಡುತ್ತಿದ್ದೇವೆ. ಚಿತ್ರೋದ್ಯಮದ ಸಂಕಷ್ಟವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‌ ಕುಮಾರ್‌ ಒತ್ತಾಯಿಸಿದ್ದಾರೆ.

ಎಲ್ಲೆಲ್ಲಿ 100% ಭರ್ತಿ?

ಪಶ್ಚಿಮ ಬಂಗಾಳ, ದೆಹಲಿ, ತಮಿಳು ನಾಡು, ಗುಜರಾತ್‌ ಸೇರಿದಂತೆ ಹಲವು ರಾಜ್ಯಗಳಲ್ಲಿ ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ.

ನಮ್ಮನ್ನು ನಮ್ಮ ಪಾಡಿಗೆ ಬಿಡಿ

ಕೊರೊನಾ ದೇಶವನ್ನು ಹಾಳು ಮಾಡಿತು. ಸರ್ಕಾರದ ರಾಜನೀತಿಗಳು ನಮ್ಮ ಉದ್ಯಮವನ್ನು ಹಾಳು ಮಾಡುತ್ತಿವೆ. ನಷ್ಟದಲ್ಲಿರುವ ಚಿತ್ರರಂಗಕ್ಕೆ ರಾಜ್ಯ ಸರ್ಕಾರ ಒಂದು ರೂಪಾಯಿ ಕೂಡ ಸಹಾಯ ಮಾಡಿಲ್ಲ. ಕೊನೇ ಪಕ್ಷ ನಮ್ಮ ಪಾಡಿಗೆ ಉದ್ಯಮ ನಡೆಸಲು ಬಿಡುತ್ತಾರೆ ಅಂದ್ರೆ, ಅದಕ್ಕೂ ಅವಕಾಶ ಕೊಡುತ್ತಿಲ್ಲ. ಇದಕ್ಕಿಂತ ಸರ್ಕಾರ ಚಿತ್ರೋದ್ಯಮ ಮುಚ್ಚುವಂತೆ ಘೋಷಿಸುವುದು ಒಳ್ಳೆಯದು ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ ಚಂದ್ರಶೇಖರ್‌ ಕಿಡಿಕಾರಿದ್ದಾರೆ. ದಿನಕ್ಕೊಂದು ನಿರ್ಧಾರ ಮಾಡುತ್ತಾ ಹೋದ್ರೆ, ರಾಜ್ಯ- ಕೇಂದ್ರ ದ್ವಂದ್ವ ನಿಲುವು ಹೊಂದಿದ್ದರೆ ಹೇಗೆ? ಹಲವು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿದ್ದು, ಪ್ರಚಾರಕ್ಕೆ ಲಕ್ಷಾಂತರ ರೂ. ಖರ್ಚು ಮಾಡುತ್ತಿವೆ. ಇವರೆಲ್ಲರ ಗತಿ ಏನಾಗಬೇಕು ಎಂದೂ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next