Advertisement

ಪ್ರೇಮಾಂತರಂಗ

08:15 AM Nov 29, 2017 | Harsha Rao |

“ಉಪೇಂದ್ರ ಮತ್ತೆ ಬಾ’ ಸಿನಿಮಾದಲ್ಲಿ ಪ್ರೇಮಾ ನಟಿಸುತ್ತಿದ್ದಾರೆ ಅಂತ ಕೇಳಿಯೇ ಜನ ಖುಷಿಪಟ್ಟಿದ್ದರು. ಕನ್ನಡಿಗರು ಎಂದೂ ಮರೆಯದ ನಟಿಯರಲ್ಲಿ ಪ್ರೇಮಾ ಕೂಡ ಒಬ್ಬರು. 1995ರಲ್ಲಿ ತೆರೆಕಂಡ “ಸವ್ಯಸಾಚಿ’ ಇವರ ಮೊದಲ ಚಿತ್ರ. ನೋಡ ನೋಡುತ್ತಿದ್ದಂತೆ ಕನ್ನಡದ ಸೂಪರ್‌ ಸ್ಟಾರ್‌ ನಟಿಯಾದರು. ತೆಲುಗು ಚಿತ್ರರಂಗದಲ್ಲೂ ಬೇಡಿಕೆಯ ನಟಿ ಎನಿಸಿಕೊಂಡರು. “ಓಂ’, “ನಮ್ಮೂರ ಮಂದಾರ ಹೂವೆ’, “ಯಜಮಾನ’ದಂಥ ಸಾಲು ಸಾಲು ಹಿಟ್‌ ಚಿತ್ರಗಳನ್ನು ಕೊಟ್ಟರು. ಬರೋಬ್ಬರಿ ಎಂಟು ವರ್ಷಗಳ ನಂತರ ಅವರು ಮತ್ತೆ ಬಣ್ಣ ಹಚ್ಚಿದ್ದಾರೆ. ಅವರು ಇನ್ಮುಂದೆ ಸಿನಿಮಾಗಳಲ್ಲಿ ನಟಿಸುತ್ತಾರ? ಇಷ್ಟು ದಿನ ಏನು ಮಾಡುತ್ತಿದ್ದರು? ಎಂಬೆಲ್ಲದರ ಕುರಿತು ಅವರೇ ಮಾತನಾಡಿದ್ದಾರೆ.

Advertisement

-ತುಂಬಾ ವರ್ಷಗಳ ನಂತರ ಮತ್ತೆ ಚಿತ್ರರಂಗಕ್ಕೆ ಮರಳಿದ್ದೀರಿ. ಮುಂದೆ ಇಲ್ಲೇ ಉಳಿಯುತ್ತೀರಾ? 
ನಾನು ತುಂಬಾ ಮೂಡಿ. “ಉಪೇಂದ್ರ ಮತ್ತೆ ಬಾ’ ಚಿತ್ರದಲ್ಲಿ ನಟಿಸಲು ನಿರ್ದೇಶಕರು ಕೇಳಿಕೊಂಡರು. ನನಗೂ ಕಥೆ ಇಷ್ಟ ಆಯ್ತು. ಹಾಗಾಗಿ ಒಪ್ಪಿಕೊಂಡೆ. ಮುಂದೆಯೂ ಕಥೆ ಇಷ್ಟ ಆದರೆ ಒಪ್ಪಿಕೊಳ್ಳುತ್ತೇನೆ ಅಷ್ಟೇ. ಮನಸ್ಸಿನ ಇಚ್ಛೆಯಂತೆ ನಡೆಯುವವಳು ನಾನು. ನನಗೆ ಸಿನಿಮಾ ಒಂದೇ ಜೀವನ ಅಲ್ಲ. ಅದರ ಹೊರತಾಗಿಯೂ ನಾನು ಜೀವನವನ್ನು ಎಂಜಾಯ್‌ ಮಾಡಬೇಕು ಅಂದುಕೊಂಡಿದ್ದೇನೆ, ಎಂಜಾಯ್‌ ಮಾಡುತ್ತಿದ್ದೇನೆ ಕೂಡ. 

-ತುಂಬಾ ದೊಡ್ಡ ದೊಡ್ಡ ನಟರ ಜೊತೆಯಲ್ಲಿ ನಟಿಸಿದ್ದೀರಿ? ಯಾವ ನಟರ ಯಾವ ಗುಣಗಳು ನಿಮಗಿಷ್ಟ ಆಗಿವೆ?
ವಿಷ್ಣುವರ್ಧನ್‌ರ ಶಿಸ್ತು ನನಗೆ ಇಷ್ಟ. ಅವರು ಕ್ಯಾಮೆರಾ ಮುಂದೆ ನಿಂತರೆ ಬೇರೆಯದೇ ವ್ಯಕ್ತಿಯಾಗಿ ಬಿಡುತ್ತಿದ್ದರು. ಸ್ವಲ್ಪವೂ ಸೋಮಾರಿತನ ಇಲ್ಲ. ಅಷ್ಟು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರು. ಮೋಹನ್‌ ಲಾಲ್‌ ಪೂರ್ವ ತಯಾರಿ ಮತ್ತು ಲೈಟಿಂಗ್‌ ಬಗ್ಗೆ ಅವರ ತಿಳುವಳಿಕೆ ಇಷ್ಟ ಆಗಿದೆ. “ಸವ್ಯಸಾಚಿ’, “ಓಂ’ ಚಿತ್ರಗಳ ಶೂಟಿಂಗ್‌ ನೋಡಲು ಡಾ. ರಾಜ್‌ ಕುಮಾರ್‌ ಬರುತ್ತಿದ್ದರು. ಆ ವಯಸ್ಸಿನಲ್ಲೂ ಮತ್ತೂಬ್ಬರ ಕೆಲಸ ನೋಡುವ, ಮೆಚ್ಚುವ ಅವರ ಗುಣ ತುಂಬಾನೇ ಹಿಡಿಸಿತ್ತು. 

-ನಿಮ್ಮ ಎತ್ತರ ನಿಮಗೆ ಪ್ಲಸ್‌ ಅಥವಾ ನೆಗೆಟಿವ್‌? 
ಐ ಲವ್‌ ಮೈ ಹೈಟ್‌. ನಮ್ಮ ಮನೇಲಿ ಎಲ್ಲರೂ ಎತ್ತರ ಇದ್ದಾರೆ. ನನ್ನ ತಂಗಿ ನನಗಿಂತ ಎತ್ತರ, ಆಕೆ. 6.1 ಇದ್ದಾಳೆ. ಆಕೆ ಗಂಡ 6.3 ಇದ್ದಾರೆ. ಎತ್ತರ ಇರುವವರಿಗೆ ಎಲ್ಲಾ ಡ್ರೆಸ್‌ ಚಂದ ಕಾಣಿಸುತ್ತೆ. ಸೀರೆ ಉಟ್ಟರೂ ಒಂದು ಶೇಪ್‌ ಅಲ್ಲಿ ಇರಿ¤àವಿ, ಜೀನ್ಸ್‌ ಹಾಕಿದರೂ ನೀಟಾಗಿ ಕಾಣಿ¤àವಿ. ನೀವು ಎತ್ತರ ಇರುವ ಯಾರನ್ನಾದರೂ ಕೇಳಿ, ಅವರಿಗೆ ಅವರ ಎತ್ತರದ ಬಗ್ಗೆ ಅಭಿಮಾನ ಇರುತ್ತದೆ. ಸುಶ್ಮಿತಾ ಸೇನ್‌, ಶ್ರೀದೇವಿ ಕೂಡ ಎತ್ತರ ಇದಾರೆ. ಅವರಿಗೂ ಅವರ ಹೈಟ್‌ ಡಿಸ್‌ಅಡ್ವಾಂಟೇಜ್‌ ಆಗಿಲ್ಲ. 

-ಸೀರೆ ನಿಮಗೆ ಚೆನ್ನಾಗಿ ಒಪ್ಪುತ್ತೆ ಅಂತ ಎಲ್ಲಾ ಸಿನಿಮಾದಲ್ಲೂ  ಸೀರೆ ಉಡಿಸಿದ್ರಾ ಅಥವಾ ಸೀರೆ ನಿಮಗೂ ಇಷ್ಟಾನ? 
ಒಪ್ಪುತ್ತೆ ಅನ್ನೋದಕ್ಕಿಂತ ಪಾತ್ರಗಳು ಹಾಗೆ ಇದ್ದವು. “ಕೌರವ’ದಲ್ಲಿ ನಟಿಸಿದ ಬಳಿಕ ನನಗೆ ಸಿಕ್ಕ ಪಾತ್ರಗಳೆಲ್ಲಾ ಪ್ರಬುದ್ಧ ಪಾತ್ರಗಳೇ. ನಾನು ತುಂಬಾ ಮಾಡರ್ನ್ ಆಗಿ ಕಾಣಿಸಿಕೊಳ್ಳಲು ರೆಡಿ ಇರಲಿಲ್ಲ. ನನಗೆ ಕಾಸ್ಟೂéಮ್‌ಗಿಂತ ಪಾತ್ರಗಳೇ ಮುಖ್ಯ. ನನ್ನ ಶಾಪಿಂಗ್‌ನಲ್ಲಿ ಸೀರೆಗೇ ಮೊದಲ ಆದ್ಯತೆ. ಪ್ಲೇನ್‌ ಸೀರೆ ಇಷ್ಟ, ಹೆಚ್ಚು ಭಾರದ, ಡಿಸೈನ್‌ ಇರುವ ಸೀರೆ ಇಷ್ಟ ಆಗಲ್ಲ. ಕಾಟನ್‌ ಸೀರೆಗಳೂ ತುಂಬಾ ಇಷ್ಟ. ಜೀನ್ಸ್‌-ಟಾಪ್‌ ಕೂಡ ಹಾಕುತ್ತೇನೆ. 

Advertisement

– ಜೀನ್ಸ್‌ನಲ್ಲಿ ನಿಮ್ಮನ್ನು ನೋಡಿದಾಗ ಜನರು ಹೇಗೆ ಪ್ರತಿಕ್ರಿಯಿಸ್ತಾರೆ?
ನನ್ನನ್ನು ಯಾರೂ ಗುರುತಿಸುವುದೇ ಇಲ್ಲ. ಕೆಲವರು “ಎಲ್ಲೋ ನೋಡಿದ್ದೀವಲ್ಲ ಇವರನ್ನ’ ಅಂತ ಪಕ್ಕದವರ ಬಳಿ ಹೇಳ್ತಾ ಇರ್ತಾರೆ. ಅವರಿಗೆ ಗೊತ್ತಾಗುವುದರೊಳಗೆ ನಾನು ಅಲ್ಲಿಂದ ಹೊರಟಾಗಿರುತ್ತದೆ. 

-ಬಿಡುವಿನ ಸಮಯದಲ್ಲಿ ಏನು ಮಾಡ್ತೀರಾ?
ನಾನು ನನಗೆ ಬಿಡುವನ್ನೇ ಕೊಡುವುದಿಲ್ಲ. ಸೋಮಾರಿಯಾಗಿ ಒಂದು ಕಡೆ ಕುಳಿತಿರುವುದಕ್ಕೆ ನನಗೆ ಸಾಧ್ಯವಿಲ್ಲ. ಪ್ರತಿ ದಿನ ಯೋಗ ಮಾಡ್ತೇನೆ. ಜಿಮ್‌, ಯೋಗ ಮಾಡ್ತೀನಿ. ಫ್ರೆಂಡ್ಸ್‌ ಜೊತೆ ಹರಟೆ ಹೊಡಿತೀನಿ. ನಾನು ಈಗ ಫ‌ುಲ್‌ಟೈಮ್‌ ಪ್ರೇಕ್ಷಕಿ. ಒಳ್ಳೆ ಚಿತ್ರಗಳನ್ನು ಥಿಯೇಟರ್‌ಗೆà ಹೋಗಿ ನೋಡ್ತೀನಿ. ಮೊನ್ನೆಯಷ್ಟೇ ತೆಲುಗಿನ “ಅರ್ಜುನ್‌ ರೆಡ್ಡಿ’ ನೋಡಿದೆ. 

– ನಟಿ ಆಗದೇ ಇದ್ದಿದ್ದರೆ ಏನಾಗ್ತಾ ಇರಿ¤ದ್ರಿ? 
ಗಗನಸಖೀ ಆಗಿರ್ತಾ ಇದ್ದೆ. “ಸವ್ಯಸಾಚಿ’ ಸಿನಿಮಾ ಮುಗಿದ ತಕ್ಷಣ ನಾನು ಮಾಡಿದ ಕೆಲಸ ಎಂದರೆ ಗಗನಸಖೀ ತರಬೇತಿಗೆ ಅರ್ಜಿ ತಂದಿದ್ದು. ಮನೆಯಲ್ಲೂ ಹೇಳಿದ್ದೆ, “ಈ ಸಿನಿಮಾ ಏನಾದರೂ ಸಕ್ಸಸ್‌ ಆಗದಿದ್ದರೆ, ಮತ್ತೂಂದು ಸಿನಿಮಾ ಮಾಡು ಅಂತ ಒತ್ತಾಯಿಸಬೇಡಿ. ನನಗೆ ಇದರಲ್ಲಿ ಆಸಕ್ತಿ ಇಲ್ಲ. ನಾನು ಗಗನಸಖೀಯಾಗಿ ಹಾರಾಡಿಕೊಂಡಿರಬೇಕು’ ಅಂತ. ಆದರೆ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ಪೋಷಕರು ಸಿನಿಮಾದಲ್ಲೇ ಮುಂದುವರಿ ಎಂದರು. ಜೊತೆಗೆ ಶಿವ ರಾಜ್‌ಕುಮಾರ್‌ ಕೂಡ “ಸಿನಿಮಾ ಕ್ಷೇತ್ರ ಬಿಡಬೇಡಿ’ ಎಂದು ಸಲಹೆ ನೀಡಿದರು. 

– ನಿಮ್ಮ ಕಾಲದ ಚಿತ್ರರಂಗಕ್ಕೂ ಈಗಿನ ಚಿತ್ರರಂಗಕ್ಕೂ ಇರುವ ವ್ಯತ್ಯಾಸ ಏನು?
ಈಗ ಹೊಸ ಪ್ರಯೋಗಗಳು ನಡೆಯುತ್ತಿವೆ. ಆದರೆ ನನಗೆ ನಮ್ಮ ಕಾಲವೇ ಹೆಚ್ಚು ಇಷ್ಟ. ಆಗಿನ ನಿರ್ದೇಶಕರು ನಟರಿಗೆ ಹೊಂದುವಂಥ ಪಾತ್ರಗಳು, ಕಥೆಗಳನ್ನು ಕೊಡುತ್ತಿದ್ದರು. ವಿಷ್ಣುವರ್ಧನ್‌ ಅವರು ಕಡೆಯವರೆಗೂ ಹಿರೋ ಆಗಿಯೇ ಮಿಂಚಿದರು. ಅವರ ವಯಸ್ಸಿಗೆ ತಕ್ಕಂಥ ಪಾತ್ರ ಮತ್ತು ಕಥೆ ಇರುತ್ತಿತ್ತು. ನಟನೆ ವಿಚಾರದಲ್ಲಿ ಹಿರೋಯಿನ್‌ಗಳಿಗೂ ಹೀರೋಗಳಷ್ಟೇ ಅವಕಾಶ ಇರಿ¤ತ್ತು.  ಕಥೆ ಬರೆಯುವಾಗಲೇ, ಈ ಪಾತ್ರಕ್ಕೆ ಮಾಲಾಶ್ರೀನೇ ಬೇಕು, ಪ್ರೇಮಾನೇ ಬೇಕು ಅಂಥ ನಿರ್ದೇಶಕರು ಹೇಳುತ್ತಿದ್ದರು. ಈಗ ವಾರಕ್ಕೆ ನಾಲ್ಕು ಸಿನಿಮಾ ರಿಲೀಸ್‌ ಆಗುತ್ತವೆ. ಕಥೆಗಳೂ ನೆನಪಿರುವುದಿಲ್ಲ, ಸಿನಿಮಾಗಳೂ ನೆನಪಿರುವುದಿಲ್ಲ, ನಾಯಕ, ನಾಯಕಿಯರಂತೂ ಮನಸ್ಸಿನಲ್ಲಿ ಉಳಿಯುವುದೇ ಇಲ್ಲ. 

– ಉಪೇಂದ್ರಗೆ ಹೆದರುತ್ತಾ “ಓಂ’ನಲ್ಲಿ ನಟಿಸಿದ್ದೆ
ನಾನು ನಟಿಸಿರುವ ಸಿನಿಮಾಗಳಲ್ಲಿ ನನ್ನ ಮನಸ್ಸಿಗೆ ತುಂಬಾ ಹತ್ತಿರದ ಸಿನಿಮಾ ಅಂದ್ರೆ “ಓಂ’. ಆ ಚಿತ್ರ ಮಾಡುವಾಗ ನಾನು ಚೆನ್ನಾಗಿ ಅಭಿನಯಿಸುತ್ತೀನಿ ಅಂತ ನಂಬಿಕೇನೆ ಇರಲಿಲ್ಲ. ಡೈಲಾಗ್‌ ಹೇಳಲು ತಡವರಿಸಿದರೆ ಉಪೇಂದ್ರ ರೇಗಾಡುತ್ತಿದ್ದರು. ಅವರಿಗೆ ಹೆದರಿಕೊಂಡೇ ನಟಿಸಿದ್ದೇನೆ. ಜೊತೆಗೆ, ಶಿವರಾಜ್‌ಕುಮಾರ್‌ರಂಥ ಸ್ಟಾರ್‌ ಎದುರು, ರಾಜ್‌ಕುಮಾರ್‌ ಬ್ಯಾನರ್‌ ಅಡಿ ಕೆಲಸ ಮಾಡುತ್ತಿದ್ದೇನೆ ಎಂದೆಲ್ಲಾ ನರ್ವಸ್‌ ಆಗಿದ್ದೆ. ಸಿನಿಮಾ ನೋಡಿದ ಮೇಲೆ ನನ್ನ ನಟನೆ ನೋಡಿ ನನಗೇ ಆಶ್ಚರ್ಯ ಆಯ್ತು.

– ನಿಮ್ಮಲ್ಲಿಲ್ಲದ ಕೆಟ್ಟ ಗುಣ
ನಾನು ಗಾಸಿಪ್‌ ಮಾಡಲ್ಲ. 
– ಇಷ್ಟಪಟ್ಟು ತಿನ್ನುವುದು 
ಕಿಚಡಿ, ಚಿಕನ್‌ ಬಿರಿಯಾನಿ
– ನಿಮ್ಮ ಫೇವರಿಟ್‌ ಪಾಸ್‌ ಟೈಮ್‌
ನಿದ್ದೆ ಮಾಡೋದು 
– ಬಾಲ್ಯದಿಂದಲೂ ಇರುವ ಹವ್ಯಾಸ
ಬ್ಯಾಡ್ಮಿಂಟನ್‌, ಬ್ಯಾಸ್ಕೆಟ್‌ಬಾಲ್‌
– ಜೀವನದ 3 ಮುಖ್ಯ ಅಂಶಗಳು
ಆರೋಗ್ಯ, ಕುಟುಂಬ ಮತ್ತು ಕೆಲಸ
– ಫೇವರಿಟ್‌ ನಟಿಯರು
ಶ್ರೀದೇವಿ, ಮಾಧುರಿ ದೀಕ್ಷಿತ್‌

-ಹೊಸ ನಟಿಯರಿಗೆ ನಿಮ್ಮ ಸಂದೇಶ?
ಸಿನಿಮಾ ನೀರಿನ ಮೇಲಿನ ಗುಳ್ಳೆಯಂತೆ. ಇದಷ್ಟೇ ಜೀವನ ಅಲ್ಲ. ಇಲ್ಲಿ ಯಶಸ್ಸು ಸಿಗದಿದ್ದರೆ ಬೇರೆ ಕ್ಷೇತ್ರ ಆಯ್ದುಕೊಳ್ಳಿ. ಜೀವನದಲ್ಲಿ ಏನನ್ನಾದರು ಸಾಧಿಸಿ. 

ನಟಿಯರನ್ನು ಕನ್ನಡ ಚಿತ್ರರಂಗ ನಿರ್ಲಕ್ಷಿಸಿದೆ
ಮಹಿಳಾ ಕಲಾವಿದರನ್ನು ಬಳಸಿಕೊಳ್ಳುವಲ್ಲಿ ಕನ್ನಡ ಚಿತ್ರರಂಗ ತುಂಬಾ ಹಿಂದೆ ಬಿದ್ದಿದೆ. ಈ ಬಗ್ಗೆ ನನಗೆ ಬೇಸರವಿದೆ. ನಟಿಯರಿಗೆ ಮದುವೆಯಾಗುತ್ತಿದ್ದಂತೆ ಇವರೇ ನಿವೃತ್ತಿ ಕೊಟ್ಟು ಬಿಡುತ್ತಾರೆ. ಮದುವೆಯಾದ ಬಳಿಕ ನಟಿಯರು ಮನೆಯಲ್ಲಿರಬೇಕು, ಇಲ್ಲದಿದ್ದರೆ ಪೋಷಕ ಪಾತ್ರಗಳನ್ನು ಮಾಡಬೇಕು. ವಿವಾಹಿತ, ಮಧ್ಯಮ ವಯಸ್ಸಿನ ಮಹಿಳೆಯರ ಜೀವನದಲ್ಲಿ ನೋವು, ನಲಿವು, ಹೋರಾಟ ಎಲ್ಲಾ ಇರುತ್ತದೆ. ಆದರೆ ಅವರ ಕಥೆಯನ್ನು ತೆರೆ ಮೇಲೆ ತೋರಿಸುವ ನಿರ್ದೇಶಕರು ನಮ್ಮಲ್ಲಿಲ್ಲ. ಹಿಂದಿಯಲ್ಲಿ 50ರ ಸಮೀಪ ಇರುವ ಶ್ರೀದೇವಿ ಕೂಡ ಹಿರೋಯಿನ್‌ ಆಗ್ತಾರೆ. ಅವರಿಗಾಗಿ “ಇಂಗ್ಲಿಷ್‌ ವಿಂಗ್ಲಿಷ್‌’ನಂಥ ಕಥೆ ಮಾಡುತ್ತಾರೆ. ವಿದ್ಯಾ ಬಾಲನ್‌ ಮದುವೆ ನಂತರವೂ ಬೇಡಿಕೆಯ ನಟಿಯೇ. ಅವರ ವಯಸ್ಸಿಗೆ ತಕ್ಕಂಥ “ಕಹಾನಿ’, “ತುಮ್ಹಾರಿ ಸುಲು’ ಚಿತ್ರಗಳು ಅವರಿಗೆ ಸಿಗುತ್ತವೆ. 3 ಮಕ್ಕಳ ತಾಯಿ ಆದ ಜ್ಯೂಲಿಯಾ ರಾಬರ್ಟ್ಸ್ ಈಗಲೂ ಹಾಲಿವುಡ್‌ ಟಾಪ್‌ ನಟಿಯರಲ್ಲಿ ಒಬ್ಬರು. ಕನ್ನಡ ಚಿತ್ರರಂಗದಲ್ಲಿ ಇಂಥ ಉದಾಹರಣೆಗಳು ಬಹಳ ಅಪರೂಪ. 

– ಚೇತನ. ಜೆ.ಕೆ

Advertisement

Udayavani is now on Telegram. Click here to join our channel and stay updated with the latest news.

Next