Advertisement

ಅಡ್ಡೂರು ಸೇತುವೆ ತಳದಲ್ಲೇ ಮರಳುಗಾರಿಕೆ: ಸಕ್ರಮವಾಗಿದ್ದರೂ ಸೇತುವೆಗೆ ಅಪಾಯದ ಭೀತಿ

12:10 AM Jan 31, 2023 | Team Udayavani |

ಬಂಟ್ವಾಳ: ಸೇತುವೆಗಳು ದುರ್ಬಲವಾಗಿ ಕುಸಿಯುವ ಭೀತಿಯ ಹಿನ್ನೆಲೆಯಲ್ಲಿ ಸರಕಾರವು ಸೇತುವೆಗಳ ತಳಭಾಗದಲ್ಲಿ ಮರಳುಗಾರಿಕೆಗೆ ನಿಷೇಧ ಹೇರಿದೆ.ಆದರೆ ಮಂಗಳೂರು ಹಾಗೂ ಬಂಟ್ವಾಳ ತಾಲೂಕನ್ನು ಸಂಪರ್ಕಿಸುವ ಪೊಳಲಿ ಸಮೀಪದ ಅಡ್ಡೂರು ಸೇತುವೆಯ ತಳ ಭಾಗದಲ್ಲೇ ಅವ್ಯಾಹತವಾಗಿ ಮರಳುಗಾರಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.

Advertisement

ಫಲ್ಗುಣಿ ನದಿಯಲ್ಲಿ ಮಂಗಳೂರು ತಾಲೂಕು ವ್ಯಾಪ್ತಿಗೆ ಸೇರಿದ ಪ್ರದೇಶ ದಲ್ಲಿ ಮರಳುಗಾರಿಕೆ ನಡೆಯುತ್ತಿದ್ದು, ಇದು ಸಕ್ರಮವೇ ಆದರೂ ಸೇತುವೆಯ ತಳ ಭಾಗದ ಜತೆಗೆ ನಿರ್ದಿಷ್ಟವಾಗಿ ಅದರ ಸುತ್ತಮುತ್ತಲ ಪ್ರದೇಶದಲ್ಲಿ ಅವಕಾಶವಿಲ್ಲ ಎಂದು ಈ ಹಿಂದೆಯೇ ಸರಕಾರ ಸ್ಪಷ್ಟವಾಗಿ ಹೇಳಿತ್ತು.

ಸೇತುವೆಯ ತಳದಲ್ಲಿ ಮರಳು ಗಾರಿಕೆ ನಡೆಸಿದರೆ ಬೃಹತ್‌ ಹೊಂಡ ಗಳು ಸೃಷ್ಟಿಯಾಗಿ ಸ್ತಂಭಗಳು ದುರ್ಬಲಗೊಂಡು ಕುಸಿಯುವ ಅಥವಾ ಬಿರುಕು ಬಿಡುವ ಸಾಧ್ಯತೆ ಹೆಚ್ಚಿರುತ್ತದೆ.

ಜಿಲ್ಲಾಡಳಿತದ ಗಮನ ಅಗತ್ಯ
ಅಡ್ಡೂರು ಸೇತುವೆಯ ಪಕ್ಕದಲ್ಲಿ ಉತ್ತರ ಭಾರತ‌ದ ಕಾರ್ಮಿಕರನ್ನು ಒಳಗೊಂಡ ತಂಡಗಳು ಮರಳುಗಾರಿಕೆ ನಿರತವಾಗಿದ್ದು, ಕಾರ್ಮಿಕರು ನದಿಯ ಮಧ್ಯಕ್ಕೆ ತೆರಳಿ ಸಾಂಪ್ರದಾಯಿಕ ಶೈಲಿಯಲ್ಲಿ ಮುಳುಗಿ ಮರಳನ್ನು ದೋಣಿಯಲ್ಲಿ ತುಂಬಿಕೊಂಡು ಬರುತ್ತಿದ್ದಾರೆ. ಒಂದಷ್ಟು ದೋಣಿಗಳು ಸೇತುವೆಯಿಂದ ಕೊಂಚ ದೂರದಲ್ಲಿ ಮರಳುಗಾರಿಕೆ ನಡೆಸಿದರೆ ಕೆಲವು ಸೇತುವೆಯ ತಳಭಾಗದಲ್ಲೇ ನಿಂತಿರುತ್ತವೆ. ಇದು ಸಕ್ರಮ ಮರಳುಗಾರಿಕೆಯೇ ಆಗಿದ್ದರೂ ಸೇತುವೆಯ ತಳಭಾಗ ಹಾಗೂ ಒಂದಷ್ಟು ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದೆ.

ಅಕ್ರಮ ಆರೋಪ
ಈ ಹಿಂದೆ ದ.ಕ.ದಲ್ಲಿ 2 ಸೇತುವೆಗಳು ಅಪಾಯಕ್ಕೆ ಸಿಲುಕಿದ ಸಂದರ್ಭದಲ್ಲೂ ಅಕ್ರಮ ಮರಳುಗಾರಿಕೆಯ ಆರೋಪ ಕೇಳಿಬಂದಿತ್ತು. 2018ರ ಜೂನ್‌ನಲ್ಲಿ ಮೂಲರಪಟ್ಣ ಸೇತುವೆ ಕುಸಿದಾಗ ಮರುಗಾರಿಕೆಯೇ ಕಾರಣ ಎಂದು ಕೆಲವರು ಆರೋಪಿಸಿದ್ದರು. 2021ರ ಜೂನ್‌ನಲ್ಲಿ ಮರವೂರು ಸೇತುವೆ ಬಿರುಕು ಬಿಟ್ಟಾಗಲೂ ಮರಳು ಗಾರಿಕೆಯ ಆರೋಪ ಕೇಳಿಬಂದಿತ್ತು.
ಆದರೆ ಈ ಎರಡು ಸೇತುವೆಗಳು ಅದೇ ಕಾರಣಕ್ಕೆ ಅಪಾಯಕ್ಕೆ ಸಿಲುಕಿವೆ ಎಂದು ಸ್ಪಷ್ಟವಾಗಿ ಹೇಳುವುದು ಅಸಾಧ್ಯವಾದರೂ ಆ ಕಾರಣವನ್ನೂ ಅಳಗಳೆಯುವಂತಿಲ್ಲ ಎನ್ನಲಾಗುತ್ತಿದೆ.

Advertisement

ಅಡ್ಡೂರು ಸೇತುವೆಯ ತಳಭಾಗದಲ್ಲೇ ಮರಳು ಗಾರಿಕೆ ನಡೆಯುತ್ತಿದೆಯೇ ಎಂಬ ಕುರಿತು ಪರಿಶೀಲಿೆಸಿ ಕ್ರಮ ಕೈಗೊಳ್ಳಲಾಗುವುದು.
– ರವಿಕುಮಾರ್‌ ಎಂ.ಆರ್‌. ದ.ಕ. ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next