ಕಲಬುರಗಿ: ಭೀಮಾ ನದಿಯಿಂದ ಅಕ್ರಮವಾಗಿ ಮರಳು ಎತ್ತುವಳಿ ಮಾಡಿ ಸಂಗ್ರಹಿಸಿಡಲಾಗಿದ್ದ ಅಡ್ಡೆಗಳ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಹಾಯಕ ಆಯುಕ್ತರು ಜಂಟಿ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಮರಳು ಜಪ್ತಿ ಮಾಡಿದ್ದಾರೆ.
ಕಳೆದ ತಿಂಗಳು ಭೀಮಾ ನದಿ ಪಾತ್ರದಲ್ಲಿನ ಅಕ್ರಮ ಮರಳುಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ದಾಳಿ ನಡೆಸಿದ್ದರು. ಆದರೂ ನಿಲ್ಲದ ಅಕ್ರಮ ಮರಳುಗಾರಿಕೆ ವಿರುದ್ಧ ಈಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಎಎಸ್‌ಪಿ ಲೋಕೇಶಕುಮಾರ ಹಾಗೂ ಸಹಾಯಕ ಆಯುಕ್ತ ರಾಚಪ್ಪ ಜಂಟಿಯಾಗಿ ಭೀಮಾ ನದಿಗೆ ಹೊಂದಿಕೊಂಡಿರುವ ಜೇವರ್ಗಿ ಹಾಗೂ ಅಫಜಲಪುರ ತಾಲೂಕಿನ ವಿವಿಧ ಹಳ್ಳಿಗಳಲ್ಲಿನ ಹೊಲ, ಗದ್ದೆ, ಸರ್ಕಾರಿ ಗೈರಾಣಿ ಭೂಮಿಯಲ್ಲಿ ಸಂಗ್ರಹಿಸಿಟ್ಟ ಅಕ್ರಮ ಮರಳು ಅಡ್ಡೆ ಮೇಲೆ ತಂಡದೊಂದಿಗೆ ದಾಳಿ ನಡೆಸಿದ್ದಾರೆ. ಕೋಟ್ಯಂತರ ರೂ. ಮೊತ್ತದ ಅಕ್ರಮ ಮರಳು ಜಪ್ತಿ ಮಾಡಿ 23 ಟಿಪ್ಪರ್, 2 ಹಿಟಾಚಿ ವಶಪಡಿಸಿಕೊಳ್ಳಲಾಗಿದೆ.
ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಅಲ್ಲದೇ ವಶಪಡಿಸಿಕೊಳ್ಳಲಾದ ಅಕ್ರಮ ಮರಳು ಅಡ್ಡೆಗೆ ಪೊಲೀಸರನ್ನು ನಿಯೋಜಿಸಲಾಗಿದೆ.
37 ಪ್ರಕರಣ ದಾಖಲು: ಅಕ್ರಮ ಮರಳು ಸಾಗಾಣಿಕೆ, ಅಕ್ರಮ ಮರಳುಗಾರಿಕೆ ಸಂಗ್ರಹ ಸಂಬಂಧ ಒಟ್ಟು 37 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ನೇಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 22, ಅಫಜಲಪುರ ಠಾಣೆ ವ್ಯಾಪ್ತಿಯಲ್ಲಿ 13 ಹಾಗೂ ವಿಶ್ವವಿದ್ಯಾಲಯ ಠಾಣೆ ವ್ಯಾಪ್ತಿಯಲ್ಲಿ 2 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಹೊಲಗಳಲ್ಲಿ ಮರಳು ದಾಸ್ತಾನು ಮಾಡಿದ್ದರ ಸಂಬಂಧ ರೈತರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದಾಳಿಗೆ ಸಿಮೀತವಾಗದಿರಲಿ: ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ನಡೆದಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಕ್ರಮ ಮರಳುಗಾರಿಕೆಯಿಂದ ತಮ್ಮ ಹೊಲಗಳೆಲ್ಲ ಹಾಳಾಗಿವೆ. ಅಲ್ಲದೇ ಹಗಲು ರಾತ್ರಿಯನ್ನದೇ ಲಾರಿ, ಟಿಪ್ಪರ್‌ಗಳಿಂದ ರಸ್ತೆಗಳೆಲ್ಲ ಹಾಳಾಗುವುದರ ಜತೆಗೆ ರಾತ್ರಿ ಸಮಯದಲ್ಲಿ ನಿದ್ದೆ ಸಹ ಮಾಡದಿರುವ ಮಟ್ಟಿಗೆ ಅರ್ಭಟಿಸುತ್ತವೆ.
ಪೊಲೀಸರ ದಾಳಿ ನಿರಂತರವಾಗಿ ನಡೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮೇ 27ರಂದು ಜಿಲ್ಲಾಧಿಕಾರಿ ಎಂ. ವೆಂಕಟೇಶಕುಮಾರ ಅಫಜಲಪುರ ತಾಲೂಕು ಮಣ್ಣೂರು ಗ್ರಾಮದ ಹತ್ತಿರ ದಾಳಿ ನಡೆಸಿ 2500 ಮೆಟ್ರಿಕ್ ಟನ್ ಅಕ್ರಮ ಮರಳು ಜಪ್ತಿ ಮಾಡಿ ಕ್ರಮ ಕೈಗೊಳ್ಳಲಾಗಿತ್ತು. ಈಗ ಎಸ್‌ಪಿ ಹಾಗೂ ಕಂದಾಯ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದಾರೆ.