Advertisement

ಇಂದಿನಿಂದ ಸಂಚಾರಿ ವಿಜಯ್‌ ‘ಪುಕ್ಸಟ್ಟೆ ಲೈಫು’

09:01 AM Sep 24, 2021 | Team Udayavani |

ಸಾಮಾನ್ಯವಾಗಿ ಯಾವುದೇ ಸಿನಿಮಾದ ಪ್ರಮೋಶನ್‌ ಸಂದರ್ಭದಲ್ಲಿ ಅದರ ಹೀರೋ ತುಂಬಾನೇ ಮುಖ್ಯವಾಗುತ್ತಾರೆ. ಸಿನಿಮಾದಲ್ಲಿ ಅಭಿನಯಿಸಿದ ಹೀರೋ ರಿಲೀಸ್‌ ವೇಳೆ ಎದುರಿಗಿಲ್ಲದಿದ್ದರೆ, ಅದರಿಂದ ಸಿನಿಮಾಕ್ಕಾಗುವ ಹಿನ್ನಡೆ, ಪ್ರಮೋಶನ್ಸ್‌ಗೆ ಎದುರಾಗುವ ಸವಾಲು ಎಂಥದ್ದು ಅನ್ನೋದು ಸಿನಿಮಾದವರಿಗೆ ಗೊತ್ತಿರುವ ವಿಷಯ. ಈಗ “ಪುಕ್ಸಟ್ಟೆ ಲೈಫ‌ು’ ಸಿನಿಮಾದ ರಿಲೀಸ್‌ ವೇಳೆಯೂ ಚಿತ್ರತಂಡಕ್ಕೆ ಅಂಥದ್ದೇ ಸವಾಲು ಎದುರಾಗಿದೆ.

Advertisement

ಹೌದು, ಸಂಚಾರಿ ವಿಜಯ್‌ ಅಭಿನಯದ “ಪುಕ್ಸಟ್ಟೆ ಲೈಫು’ ಚಿತ್ರ ಇಂದು (ಸೆ. 24) ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಕಳೆದ ಕೆಲ ವಾರಗಳಿಂದ ಚಿತ್ರತಂಡ ಕೈಲಾದ ಮಟ್ಟಿಗೆ “ಪುಕ್ಸಟ್ಟೆ ಲೈಫು’ ಪ್ರಮೋಶನ್ಸ್‌ ಕೆಲಸ ನಡೆಸುತ್ತಿದೆ. ಇನ್ನು ಸಂಚಾರಿ ವಿಜಯ್‌ ದೈಹಿಕವಾಗಿ ಇಲ್ಲದಿರುವುದರಿಂದ, ಸಿನಿಮಾದ ಪ್ರಮೋಶನ್ಸ್‌ಗೆ ಕೊಂಚ ಮಟ್ಟಿಗೆ ಹಿನ್ನಡೆಯಾಗುತ್ತಿದ್ದರೂ, ಆ್ಯನಿಮೇಶನ್‌ ಮೂಲಕ ಸಂಚಾರಿ ವಿಜಯ್‌ ಅವರನ್ನು ಪ್ರಚಾರದ ಕಣಕ್ಕೆ ಇಳಿಸಿರುವ ಚಿತ್ರತಂಡ ಆ ಮೂಲಕ ಪ್ರೇಕ್ಷಕರನ್ನು ತಲುಪುವ ಕಸರತ್ತು ಮಾಡುತ್ತಿದೆ!

“ಪುಕ್ಸಟ್ಟೆ ಲೈಫು’ ಚಿತ್ರದ ಪ್ರಮೋಶನ್‌ ಸಲುವಾಗಿ ಚಿತ್ರತಂಡ ಸಂಚಾರಿ ವಿಜಯ್‌ ಅವರ ಆ್ಯನಿಮೇಶನ್‌ ವಿಡಿಯೋವನ್ನು ಬಿಡುಗಡೆ ಮಾಡಿದೆ. ಸ್ವರ್ಗ ಲೋಕದಲ್ಲಿರುವ ನಟ ಸಂಚಾರಿ ವಿಜಯ್‌ ತಾನು ನಾಯಕನಾಗಿರುವ “ಪುಕ್ಸಟ್ಟೆ ಲೈಫ‌ು’ ಚಿತ್ರದ ಬಿಡುಗಡೆಯ ಸುದ್ದಿಯನ್ನು ಸ್ವರ್ಗಸ್ಥರಾಗಿರುವ ಡಾ. ರಾಜ ಕುಮಾರ್‌, ಶಂಕರನಾಗ್‌, ವಿಷ್ಣುವರ್ಧನ್‌, ಅಂಬರೀಶ್‌, ಬಿ. ವಿ ಕಾರಂತ್‌, ಗಿರೀಶ್‌ ಕಾರ್ನಾಡ್‌ ಹೀಗೆ ಅನೇಕರ ಸಮ್ಮುಖದಲ್ಲಿ ತಿಳಿಸುತ್ತಾರೆ.

ಇದನ್ನೂ ಓದಿ:400 ಕೋಟಿ ರೂ. ಬಜೆಟ್‍ನ ಚಿತ್ರಕ್ಕೆ ಪ್ರೇಮ್ ನಾಯಕ

ಇದಕ್ಕೆ ಹಿರಿಯ ನಟರು ಬೆಂಬಲ ನೀಡುವಂತೆ ವಿಡಿಯೋ ಚಿತ್ರಿಸಲಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ವೈರಲ್‌ ಆಗಿದೆ. ಸಂಚಾರಿ ವಿಜಯ್‌ ಅವರ ಅನುಪಸ್ಥಿತಿಯಲ್ಲೂ ಚಿತ್ರತಂಡ ಇಂಥದ್ದೊಂದು ಕ್ರಿಯಾಶೀಲ ಪ್ರಯೋಗದ ಮೂಲಕ ಪ್ರಚಾರ ಕಾರ್ಯ ನಡೆಸುತ್ತಿರುವುದರ ಬಗ್ಗೆ ಚಿತ್ರರಂಗದಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next