Advertisement

ಸನಾತನ ಧರ್ಮದ ಪುನರುತ್ಥಾನದಿಂದ ದೇಶ ರಕ್ಷಣೆ

11:45 AM Mar 20, 2022 | Team Udayavani |

ಹುಬ್ಬಳ್ಳಿ: ಸನಾತನ ಧರ್ಮದ ಪುನರುತ್ಥಾನವಾದರೆ ದೇಶದ ರಕ್ಷಣೆಯಾದಂತೆ. ಆ ನಿಟ್ಟಿನಲ್ಲಿ ದೇಶದ ಪ್ರಾಚೀನ ಸಂಸ್ಕೃತಿ ಸಂರಕ್ಷಣೆ ಮಾಡುವ ಕಾರ್ಯವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ಶ್ರೀಮದುತ್ತರಾದಿ ಮಠಾಧೀಶ ಶ್ರೀ ಅಭಿನವ ರಘೂತ್ತಮ ತೀರ್ಥರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಗಳು ಹೇಳಿದರು.

Advertisement

ಲಿಂಗರಾಜ ನಗರದ ಶ್ರೀಮದುತ್ತರಾದಿ ಮಠದಲ್ಲಿ ಶನಿವಾರ ನೂತನ ಪೂಜಾ ಮಂಟಪ ಉದ್ಘಾಟಿಸಿ ಆಶೀರ್ವಚನ ನೀಡಿದರು. ಧಾರ್ಮಿಕ ಮನೋಭಾವ ಯಾವುದೋ ಒಂದು ಗುಂಪಿಗೆ ಸೇರಿದ್ದು ಎಂದು ಭಾವಿಸಬಾರದು. ಧರ್ಮವು ವಿಶ್ವದ ರಕ್ಷಣೆಗಾಗಿಯೇ ಇರುವುದು. ಧರ್ಮವಿಲ್ಲದೆ ಧರ್ಮನಿರಪೇಕ್ಷವಾಗಿ ರಾಷ್ಟ್ರ ನಡೆಸುತ್ತೇವೆ ಎಂಬುದು ಸುಳ್ಳು. ಧರ್ಮವಿದ್ದರೆ ಮಾತ್ರ ದೇಶದ ರಕ್ಷಣೆ. ಇನ್ನೊಬ್ಬರಿಗೆ ಉಪಕಾರ ಮಾಡುವುದೇ ಧರ್ಮ. ಅಪಕಾರ ಮಾಡುವುದೇ ಅಧರ್ಮ. ವಿಜ್ಞಾನ ಇಂದು ನಮಗೆ ಬೇಕಾದಷ್ಟು ಸವಲತ್ತು ಒದಗಿಸಿದೆ. ವೈಜ್ಞಾನಿಕವಾದ ಎಲ್ಲ ಸವಲತ್ತು ಸದುಪಯೋಗ ಪಡಿಸಿಕೊಂಡು ಪರೋಪಕಾರ ಮಾಡಬೇಕೆಂಬ ಭಾವನೆ ಒದಗಿಸಿಕೊಡುವುದು ತತ್ವಜ್ಞಾನ. ಅಂತಹ ಧರ್ಮ ಸಂರಕ್ಷಣೆಯಾದರೆ ಮಾತ್ರ ಪರಸ್ಪರ ಉಪಕಾರ, ಪ್ರೀತಿ ಮಾಡಬಹುದು. ಅಂತಹ ಧರ್ಮಭಾವನೆ ಕಿತ್ತು ಹಾಕಿದರೆ ಯಾರು ಯಾರಿಗಾದರೂ ಅಪಕಾರ, ಮೋಸ, ವಂಚನೆ ಮಾಡಬಹುದು ಎಂದರು.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ದೇಶದಲ್ಲಿ ಪರಿವರ್ತನೆ ಆಗುತ್ತಿದೆ. ಧರ್ಮದ ರಾಜ್ಯ ಸ್ಥಾಪನೆಯತ್ತ ದೊಡ್ಡ ಹೆಜ್ಜೆ ಇಡುತ್ತಿದೆ. ಸನಾತನ ಧರ್ಮ ಪುನರುತ್ಥಾನ ಆಗುತ್ತಿದೆ. ಷಡ್‌ ದರ್ಶನಗಳಲ್ಲಿ ವೇದಾಂತವೂ ಒಂದು. ಷಡ್‌ ದರ್ಶನಗಳಿಗೆ ಮೂಲಭೂತ ಆಧಾರ ವೇದಾಂತ. ಕೇಂದ್ರ ಸರಕಾರವು ಅಯೋಧ್ಯಾದಿಂದ ಬದರಿನಾಥ, ಚಾರಧಾಮಕ್ಕೆ ಯಾವುದೇ ಕಷ್ಟವಿಲ್ಲದೆ ಹೋಗಿ ಬರುವಂತಹ ವ್ಯವಸ್ಥೆ ಮಾಡಿದೆ. ಅಯೋಧ್ಯೆಯಿಂದ ಆರಂಭಿಸಿ ಕಾಶಿ ವಿಶ್ವನಾಥ ಮೂಲಕ ರಾಮೇಶ್ವರ ತಲುಪುವ ವ್ಯವಸ್ಥೆ ಮಾಡಿದೆ. ಸ್ವಾಮಿಗಳ ನೇತೃತ್ವದಲ್ಲಿ ಚಾರಧಾಮ ಯಾತ್ರೆ ಆಯೋಜಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಗೋವಿಂದ ಜೋಶಿ, ನೇತ್ರತಜ್ಞ ಡಾ| ಎಂ.ಎಂ. ಜೋಶಿ, ಡಾ| ಜಿ.ಬಿ. ಸತ್ತೂರ, ಡಾ| ವಿ.ಜಿ. ನಾಡಗೌಡ, ಡಾ| ವೆಂಕಟರಮಣ ಕಟ್ಟಿ, ಡಾ| ಶ್ರೀನಿವಾಸ ಜೋಶಿ, ಡಾ| ಅಮಿತ ಸತ್ತೂರ, ಡಾ| ಅನಿರುದ್ಧ ಕುಲಕರ್ಣಿ, ಡಾ| ವಿಜಯಕುಮಾರ ಪಾಟೀಲ, ಜ್ಯೋತಿ ಜೋಶಿ, ರಾಜಣ್ಣ ಕೊರವಿ, ತಿಪ್ಪಣ್ಣ ಮಜ್ಜಗಿ, ಉಮೇಶ ಕೌಜಗೇರಿ, ರೂಪಾ ಮೊಗಲಿಶೆಟ್ಟರ, ಪೂಜಾ ಶೇಜವಾಡಕರ, ಸುನಿಲ್‌ ಸಾಲಿ, ಮಧ್ವೇಶ ಗದ್ದನಕೇರಿ, ದತ್ತಮೂರ್ತಿ ಕುಲಕರ್ಣಿ, ಕಿರಣ ಗಡ, ಜಯತೀರ್ಥ ಕಟ್ಟಿ, ಗಿರೀಶ ಜೋಶಿ, ಪಂ| ಜಯತೀರ್ಥಾಚಾರ ಹುಂಡೇಕರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next