ಪಲ್ಲೆಕೆಲೆ: ಭಾರತ ಟಿ20 ವಿಶ್ವಕಪ್ ಚಾಂಪಿಯನ್ ಆದ ಸಂಭ್ರಮದ ನಡುವೆಯೇ ಪ್ರಮುಖ ಕ್ರಿಕೆಟಿಗರಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜ ಅವರ ನಿವೃತ್ತಿಯ ಸುದ್ದಿಯನ್ನು ಅರಗಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಇವರ ಗೈರಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಂಡಿದೆ. ರೋಹಿತ್ ಶರ್ಮ ಜಾಗದಲ್ಲಿ ಸೂರ್ಯಕುಮಾರ್ ಯಾದವ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.
ಈ ನಡುವೆ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಶ್ರೀಲಂಕಾ ತಂಡದ ತಾತ್ಕಾಲಿಕ ಕೋಚ್ ಆಗಿ ನೇಮಕಗೊಂಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ಭಾರತದ ನಿವೃತ್ತ ಕ್ರಿಕೆಟಿಗರ ಲಾಭವನ್ನು ಶ್ರೀಲಂಕಾ ಪಡೆಯಬೇಕಿದೆ ಎಂದಿದ್ದಾರೆ.
ಭಾರತದ ವಿರುದ್ದ ಸರಣಿಗಾಗಿ ಜಯಸೂರ್ಯ ಅವರು ಲಂಕಾ ತಂಡದ ಹಂಗಾಮಿ ಕೋಚ್ ಆಗಿದ್ದಾರೆ. 16 ಸದಸ್ಯರ ಲಂಕಾ ತಂಡವನ್ನು ಪ್ರಕಟಿಸಲಾಗಿದೆ. ಟಿ20 ವಿಶ್ವಕಪ್ ಸೋಲಿನ ಬಳಿಕ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದ ವಾನಿಂದು ಹಸರಂಗ ಬದಲಿಗೆ ಚರಿತ್ ಅಸಲಂಕಾ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ.
ಜುಲೈ 27ರಿಂದ ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿ ನಡೆಯಲಿದೆ. ಮೂರು ಪಂದ್ಯಗಳ ಸರಣಿಯ ಎಲ್ಲಾ ಪಂದ್ಯಗಳು ಪಲ್ಲೆಕೆಲೆಯಲ್ಲಿ ನಡೆಯಲಿದೆ.
ಭಾರತದ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾ), ಶುಭಮನ್ ಗಿಲ್ (ಉ.ನಾ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿ.ಕೀ), ಸಂಜು ಸ್ಯಾಮ್ಸನ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್.