Advertisement

ಸಂಪಾಜೆ ಆರೋಗ್ಯ ಕೇಂದ್ರ: ವೈದ್ಯರು, ಸಿಬಂದಿ ಇಲ್ಲ!

10:28 AM Oct 08, 2018 | |

ಅರಂತೋಡು: ಸುಳ್ಯ ತಾಲೂಕಿನ ಗಡಿಭಾಗದಲ್ಲಿರುವ ಕೊಡಗು ಜಿಲ್ಲೆಯ ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಓರ್ವ ಆಡಳಿತ ವೈದ್ಯಾಧಿಕಾರಿ ಹಾಗೂ ಸಿಬಂದಿ ಹುದ್ದೆಗಳು ಖಾಲಿ ಬಿದ್ದಿದ್ದು, ಸೂಕ್ತ ಚಿಕಿತ್ಸೆ ಪಡೆಯಲು ರೋಗಿಗಳು ಅಲೆದಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಹಿಂದಿನ ಬಿ.ಜೆ.ಪಿ. ಸರಕಾರದ ಆಡಳಿತ ಅವಧಿಯಲ್ಲಿ ಆರೋಗ್ಯ ಬಂಧು ಯೋಜನೆಯಲ್ಲಿ ಸುಳ್ಯದ ಕೆ.ವಿ.ಜಿ. ಮೆಡಿಕಲ್‌ ಕಾಲೇಜಿನವರಿಗೆ ನಿರ್ವಹಣೆ ಮಾಡಲು ನೀಡಲಾಗಿತ್ತು. ಈ ಅವಧಿಯಲ್ಲಿ ಸಿಬಂದಿ ಕೊರತೆ ಇರಲಿಲ್ಲ .ಆರೋಗ್ಯ ಕೇಂದ್ರದ ನಿರ್ವಹಣೆಯೂ ಚೆನ್ನಾಗಿ ನಡೆಯುತ್ತಿತ್ತು. ಆನಂತರ ಅಧಿಕಾರಕ್ಕೆ ಬಂದ ಸರಕಾರ, ಆರೋಗ್ಯ ಬಂಧು ಯೋಜನೆಯನ್ನು ಹಿಂಪಡೆದ ಕಾರಣ ಎರಡೂವರೆ ವರ್ಷಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದರು ಹಾಗೂ ಸಿಬಂದಿ ಇಲ್ಲದೆ ಜನರು ಚಿಕಿತ್ಸೆ ಪಡೆಯಲು ಪರದಾಡುವಂತಾಗಿದೆ.

ಸಂಪಾಜೆ, ಚೆಂಬು, ಪೆರಾಜೆ, ಮದನಾಡು, ಗಾಳಿಬೀಡು, ಬೆಟ್ಟತ್ತೂರು ಗ್ರಾಮಗಳು ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುತ್ತವೆ. ಈ ಭಾಗಗಳಿಗೆ ಕಿರಿಯ ಆರೋಗ್ಯ ಸಹಾಯಕಿಯರೂ ಇಲ್ಲ. ಈ ಕೇಂದ್ರದಲ್ಲಿ ಆರೋಗ್ಯ ವೈದ್ಯಾಧಿಕಾರಿ, ಎಂಟು ಎಎನ್‌ಎಂಗಳು, ಒಬ್ಬರು ಲ್ಯಾಬ್‌ ಟೆಕ್ನೀಷಿಯನ್‌, ಕಚೇರಿ ಸಿಬಂದಿ,ಔಷಧಿ ವಿತರಕರು, ಮೂವರು ಪುರುಷ ಆರೋಗ್ಯ ಸಹಾಯಕರು, ಐದು ಗ್ರೂಪ್‌ ಡಿ ಹುದ್ದೆ ಸಹಿತ ಇತರ ಹುದ್ದೆಗಳು ಖಾಲಿ ಬಿದ್ದಿವೆ.

ನಿರಾಶ್ರಿತರ ವಾಸ್ತವ್ಯ
ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆ ಕಟ್ಟದಲ್ಲಿ ಜೋಡುಪಾಲದ ಪ್ರಕೃತಿ ವಿಕೋಪಕ್ಕೆ ಒಳಗಾಗಿ ನಿರಾಶ್ರಿತರಾದ 110 ಮಂದಿ ವಾಸ ಮಾಡುತ್ತಿದ್ದಾರೆ. ಇಲ್ಲಿ ವೈದ್ಯರಿಲ್ಲದೆ ಅವರೂ ಚಿಕಿತ್ಸೆಗಾಗಿ ಸುಳ್ಯ ತಾಲೂಕು ಕೇಂದ್ರದಲ್ಲಿರುವ ಖಾಸಗಿ ಆಸ್ಪತ್ರೆಗಳಿಗೆ, ತಾಲೂಕು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.

ಬಡವರಿಗೆ ಸಮಸ್ಯೆ
ಸಂಪಾಜೆಯಲ್ಲಿ ವೈದ್ಯರಿಲ್ಲದೆ ಬಡವರಾದ ನಮಗೆ ಸಮಸ್ಯೆಯಾಗಿದೆ. ನಾವು ಈಗ ಚಿಕಿತ್ಸೆಗಾಗಿ ಮಡಿಕೇರಿ ಇಲ್ಲವೇ ಸುಳ್ಯಕ್ಕೆ ತೆರಳಬೇಕಾಗಿದೆ. ಇಲ್ಲಿಗೆ ವೈದ್ಯರನ್ನು ತತ್‌ಕ್ಷಣ ಸರಕಾರ ನೇಮಕ ಮಾಡಬೇಕು ಎಂದು ಸಂಪಾಜೆ ನಿವಾಸಿ ಪ್ರಕಾಶ್‌ ಆಗ್ರಹಿಸಿದ್ದಾರೆ.

Advertisement

ತತ್‌ಕ್ಷಣ ನೇಮಿಸಿ
ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೂರ್ಣಕಾಲಿಕ ವೈದ್ಯ ಹಾಗೂ ಇತರ ಸಿಬಂದಿ ಕೊರತೆಯಿಂದ ಇಲ್ಲಿ ಬಡವರಿಗೆ ಚಿಕಿತ್ಸೆ ಪಡೆಯಲು ಸಮಸ್ಯೆಯಾಗಿದೆ. ಈ ಕಾರಣದಿಂದ ಇಲ್ಲಿಗೆ ತತ್‌ಕ್ಷಣ ವೈದ್ಯ ಹಾಗೂ ಇತರ ಸಿಬಂದಿಯನ್ನು ನೇಮಕ ಮಾಡಬೇಕು. ಇಲ್ಲದಿದ್ದರೆ ಸ್ಥಳೀಯರು ಪ್ರತಿಭಟನೆ ಹಾದಿ ಹಿಡಿಯುವ ಸಾಧ್ಯತೆ ಇದೆ.
– ಬಾಲಚಂದ್ರ ಕಳಗಿ,
ಸಂಪಾಜೆ ಗ್ರಾ.ಪಂ. ಅಧ್ಯಕ್ಷರು

ನಿರ್ವಹಣೆ ನಮ್ಮದೆ
ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರೋಗ್ಯ ಬಂಧು ಯೋಜನೆಯಡಿ ಸುಳ್ಯದ ಕೆವಿಜಿ ಮೆಡಿಕಲ್‌ ಕಾಲೇಜು ನಿರ್ವಹಣೆ ಮಾಡುತ್ತಿತ್ತು. ಅವರ ಅವಧಿ ಕೊನೆಗೊಂಡಿದೆ. ಈಗ ನಿರ್ವಹಣೆ ಜವಾಬ್ದಾರಿಯನ್ನು ಆರೋಗ್ಯ ಇಲಾಖೆಯೇ ಪಡೆದುಕೊಂಡಿದೆ. ಕೆವಿಜಿಯವರು ಸಮುದಾಯ ಸೇವೆ ನೀಡುತ್ತಿದ್ದಾರೆ.
 - ಡಾ| ರಾಜೇಶ್‌,
    ಜಿಲ್ಲಾ ಆರೋಗ್ಯಾಧಿಕಾರಿ, ಕೊಡಗು

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next