Advertisement

ದಲಿತರಿಗೆ ತಲುಪದ ರೈತ ಸಮ್ಮಾನ್‌; ರೈತರ ಹೆಸರಿಗೆ ಆಸ್ತಿ ವರ್ಗಾವಣೆಯಾಗದಿರುವುದು ಪ್ರಮುಖ ಕಾರಣ

12:42 AM Dec 22, 2022 | Team Udayavani |

ಬೆಂಗಳೂರು: ಕೇಂದ್ರದ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ ಹಣ ಅರ್ಧಕ್ಕರ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ರೈತರಿಗೆ ತಲುಪುತ್ತಲೇ ಇಲ್ಲ !

Advertisement

ಸ್ವತಃ ಕೃಷಿ ಇಲಾಖೆ ಈ ಹಿಂದೆಯೇ ನಡೆಸಿರುವ “ಕೃಷಿ ಸಮೀಕ್ಷೆ’ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಮತ್ತು ಪಂಗಡಕ್ಕೆ ಸೇರಿದ ಜಮೀನು ಹೊಂದಿದ ರೈತರ ಸಂಖ್ಯೆ ಕ್ರಮವಾಗಿ 9.73 ಲಕ್ಷ ಹಾಗೂ 5.21 ಲಕ್ಷ. ಈ ಪೈಕಿ ಸಣ್ಣ ಮತ್ತು ಅತಿಸಣ್ಣ ರೈತರ ಸಂಖ್ಯೆ (2 ಹೆಕ್ಟೇರ್‌ ಒಳಗಿನ) ಕ್ರಮವಾಗಿ 8.30 ಲಕ್ಷ ಹಾಗೂ 4 ಲಕ್ಷ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಪ್ರಸ್ತುತ ಕಿಸಾನ್‌ ಸಮ್ಮಾನ್‌ ಯೋಜನೆಯ ಫ‌ಲಾನುಭವಿಗಳ ಸಂಖ್ಯೆ ಸುಮಾರು ಏಳು ಲಕ್ಷ ಮಾತ್ರ ಎಂಬುದು ಬೆಳಕಿಗೆ ಬಂದಿದೆ.

ಸಣ್ಣ ಮತ್ತು ಅತಿಸಣ್ಣ ಬಡ ರೈತರ ಖಾತೆಗೆ 3 ಕಂತುಗಳಲ್ಲಿ ಕೇಂದ್ರದಿಂದ ವಾರ್ಷಿಕ 6 ಸಾವಿರ ರೂ.ಗಳನ್ನು ನೇರವಾಗಿ ಖಾತೆಗೆ ಜಮೆ ಮಾಡುವ ಜನಪ್ರಿಯ ಯೋಜನೆ ಕಿಸಾನ್‌ ಸಮ್ಮಾನ್‌. ಈ ಯೋಜನೆಯನ್ನು ಪ್ರೋತ್ಸಾಹಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ಆಡಳಿತದಲ್ಲಿ ನಾಲ್ಕು ಸಾವಿರ ರೂ. ಸೇರಿಸಿ ವಾರ್ಷಿಕ ಹತ್ತು ಸಾವಿರ ರೂ.ಗೆ ಏರಿಸಿದ್ದರು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅರ್ಹ ರೈತರಿಗೆ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ (ಎಸ್‌ಇಪಿ ಟಿಎಸ್‌ಪಿ) ಮೂಲಕ ಹಣ ಒದಗಿಸಲಾಗುತ್ತದೆ.

“ಅದೂ ಒಂದು ಕಾರಣ’
“ಜಮೀನು ಮಾಲಕತ್ವದ ದಾಖಲೆಯಲ್ಲಿ ಹೆಸರು ವರ್ಗಾವಣೆಯಾಗದಿರುವುದು ಒಂದು ಕಾರಣ ಇರಬಹುದು. ಆದರೆ ಅದೊಂದೇ ಅಲ್ಲ. ಸರಕಾರಿ ನೌಕರಿಯಲ್ಲಿರಬಹುದು, ತೆರಿಗೆ ಪಾವತಿದಾರರೂ ಆಗಿರಬಹುದು. ಕಿಸಾನ್‌ ಸಮ್ಮಾನ್‌ ಯೋಜನೆ ಅಡಿ ದಾಖಲೆಗಳು ಹೊಂದಾಣಿಕೆಯಾಗದೆ ತಿರಸ್ಕೃರಿಸಲ್ಪಟ್ಟವು ತುಂಬಾ ಕಡಿಮೆ. ವಿಮೆ ವಿಷಯದಲ್ಲಿ ಈ ಸಮಸ್ಯೆ ಇದೆ ಎನ್ನುತ್ತಾರೆ ಕೃಷಿ ಇಲಾಖೆ ಆಯುಕ್ತ ಬಿ. ಶರತ್‌.

ಫ‌ಲಾನುಭವಿಗಳು ಎಷ್ಟು?
ಎಸ್‌ಇಪಿ ಟಿಎಸ್‌ಪಿ ಮೂಲಕ 2021-22ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯ ಅರ್ಹ 4.36 ಲಕ್ಷ ಫ‌ಲಾನು ಭವಿಗಳಿಗೆ 145 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 2.63 ಲಕ್ಷ ರೈತರಿಗೆ 81 ಕೋಟಿ ರೂ. ಹಂಚಿಕೆ ಮಾಡ ಲಾಗಿದೆ. ಉಳಿದ ಸುಮಾರು 6 ಲಕ್ಷ ಮಂದಿ ವಂಚಿತರಾಗಿದ್ದಾರೆ. ಈ ಮಧ್ಯೆ 2022-23ನೇ ಸಾಲಿಗೆ ಪರಿಶಿಷ್ಟ ಜಾತಿಗೆ 240 ಕೋಟಿ ಹಾಗೂ ಪರಿಶಿಷ್ಟ ಪಂಗಡಕ್ಕೆ 120 ಕೋಟಿ ರೂ. ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಯಾಕೆ ಸಿಗುತ್ತಿಲ್ಲ?
ಯೋಜನೆಯಿಂದ ವಂಚಿತರಾಗಲು ಪ್ರಮುಖ ಕಾರಣ- ಬಹುತೇಕರ ಹೆಸರಿಗೆ ಅವರ ತಂದೆ ಅಥವಾ ತಾತನ ಹೆಸರಿನಲ್ಲಿರುವ ಜಮೀನುಗಳು ವರ್ಗಾವಣೆಯಾಗಿರುವುದಿಲ್ಲ. ಆದರೆ ಕೃಷಿ ಇಲಾಖೆಗೆ ತಮ್ಮ ಆಧಾರ್‌ ಸಂಖ್ಯೆ ಮತ್ತು ಬ್ಯಾಂಕ್‌ ಖಾತೆ ನೀಡಿರುತ್ತಾರೆ. ಇದರಿಂದ ಅನಾಯಾಸವಾಗಿ ಅರ್ಜಿಗಳು ತಿರಸ್ಕೃತಗೊಳ್ಳುತ್ತಿವೆ. ಈ ಬಗ್ಗೆ ಬಹುತೇಕ ರೈತರಿಗೆ ಮಾಹಿತಿ ಇಲ್ಲ. ಅಧಿಕಾರಿಗಳೂ ಮಾಹಿತಿ ನೀಡುವುದಿಲ್ಲ. ಪರಿಣಾಮ ಬಹುದೊಡ್ಡ ವರ್ಗ ಯೋಜನೆಯಿಂದ ವಂಚಿತವಾಗುತ್ತಿದೆ ಎಂದಿದ್ದಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು.

-ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next