ಕನ್ನಡ ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವರು ಪಿ. ಲಂಕೇಶ್. ಲಂಕೇಶ್ ಪುತ್ರಿ ಕವಿತಾ ಲಂಕೇಶ್, ಪುತ್ರ ಇಂದ್ರಜಿತ್ ಲಂಕೇಶ್ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಈಗ ಪಿ. ಲಂಕೇಶ್ ಅವರ ಮೊಮ್ಮಗ ಕೂಡ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ.
ಹೌದು, ಪಿ. ಲಂಕೇಶ್ ಅವರ ಮಗ ಇಂದ್ರಜಿತ್ ಲಂಕೇಶ್ ಮತ್ತು ಅರ್ಪಿತಾ ದಂಪತಿ ಪುತ್ರ ಸಮರ್ ಜಿತ್ ಲಂಕೇಶ್ ಈಗ ನಾಯಕ ನಟನಾಗಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಮೂಲಕ ಪಿ. ಲಂಕೇಶ್ ಕುಟುಂಬ ಮೂರನೇ ತಲೆಮಾರು ಕೂಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದೆ.
ಅಂದಹಾಗೆ, ಪಿ. ಲಂಕೇಶ್ ಮೊಮ್ಮಗನ ಚೊಚ್ಚಲ ಸಿನಿಮಾಕ್ಕೆ “ಗೌರಿ’ ಎಂದು ಹೆಸರಿಡಲಾಗಿದೆ. ಈಗಾಗಲೇ ಸದ್ದಿಲ್ಲದೆ “ಗೌರಿ’ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ಸಿನಿಮಾದ ಮುಹೂರ್ತ ಕೂಡ ನೆರವೇರಿದೆ.
ಇನ್ನು ತಮ್ಮ ಚೊಚ್ಚಲ ಸಿನಿಮಾದ ಬಗ್ಗೆ ಮಾತನಾಡಿರುವ ಸಮರ್‌ಜಿತ್ ಲಂಕೇಶ್, ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. “ನಮ್ಮ ತಂದೆ ಸಿನಿಮಾ ನಿರ್ದೇಶಕ ಅನ್ನುವ ಕಾರಣಕ್ಕಾಗಿ ನಾನು ಸಿನಿಮಾರಂಗಕ್ಕೆ ಬರುತ್ತಿಲ್ಲ. ಬದಲಾಗಿ ನನಗೆ ಇಲ್ಲಿ ನಟನಾಗಬೇಕು, ಇಲ್ಲೇ ಏನಾದರೂ ಸಾಧಿಸಬೇಕು ಎಂಬ ಹಂಬಲವಿದೆ. ಹಾಗಾಗಿ ಸಿನಿಮಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಇನ್ನು ಸಿನಿಮಾದಲ್ಲಿ ನಟನಾಗುವುದಕ್ಕೂ ಮೊದಲು ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ’ ಎನ್ನುವ ಸಮರ್‌ಜಿತ್, “ಬೆಂಗಳೂರಿನ “ರಂಗಶಂಕರ’ ಅದಾದ ನಂತರ “ನ್ಯೂಯಾರ್ಕ್ ಫಿಲಂ ಅಕಾಡೆಮಿ’ಯಲ್ಲಿ ಸಿನಿಮಾ ಸಂಬಂಧಿಸಿದ ಕೋರ್ಸ್ ಮಾಡಿದ್ದೇನೆ. ಅಲ್ಲಿ ನಟನಾ ತರಬೇತಿಯನ್ನು ಪಡೆದಿದ್ದೇನೆ. ಬೆಂಗಳೂರಿಗೆ ಬಂದ ನಂತರ ಚೇತನ್ ಡಿಸೋಜಾ ಬಳಿ ಸಾಹಸ ಕಲೆಯನ್ನು ಕಲಿತುಕೊಂಡರೆ, ಮುರಳಿ ಬಳಿ ಡಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದೇನೆ. ಜೊತೆಗೆ ನೀನಾಸಂನ ಇಬ್ಬರು ಶಿಕ್ಷಕರಿಂದ ತರಬೇತಿ ಪಡೆದುಕೊಂಡಿದ್ದೇನೆ. ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಮತ್ತು ಜಾಹೀರಾತು ಕ್ಷೇತ್ರದಲ್ಲೂ ಒಂದಷ್ಟು ಕೆಲಸ ಮಾಡಿದ್ದೇನೆ’ ಎಂದು ತಮ್ಮ ತೆರೆ ಹಿಂದಿನ ಹೋಂ ವರ್ಕ್ ಬಗ್ಗೆ ವಿವರಿಸುತ್ತಾರೆ.
ಇವಿಷ್ಟು ಅಭಿನಯಕ್ಕೆ ಸಂಬಂಧಿಸಿದ ತಯಾರಿಯಾದರೆ, ಇದರ ಜೊತೆಗೆ ನಿರ್ದೇಶನ ವಿಭಾಗದಲ್ಲೂ ಸಮರ್‌ಜಿತ್ ಒಂದಷ್ಟು ತರಬೇತಿ ಪಡೆದು ಕೊಂಡಿದ್ದಾರೆ. “ಯೋಗರಾಜ್ ಭಟ್ ನಿರ್ದೇಶನದ “ಗರಡಿ’ ಮತ್ತು “ಕರಟಕ ದಮನಕ’ ಎಂಬ ಎರಡು ಸಿನಿಮಾಗಳಲ್ಲಿ ಅವರ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಸಿನಿಮಾದಲ್ಲಿ ಕಲಿಯಬೇಕಾಗಿರುವುದು ಇನ್ನೂ ಸಾಕಷ್ಟಿದೆ. ಸದ್ಯ ಮೊದಲ ಸಿನಿಮಾದ ಮೂಲಕ ನಟನಾಗಿ ಪ್ರೇಕ್ಷಕರ ಮುಂದೆ ಬರಲು ಬೇಕಾದ ಎಲ್ಲ ತಯಾರಿ ಮಾಡಿಕೊಂಡಿದ್ದೇನೆ. ಪ್ರೇಕ್ಷಕರ ಮನರಂಜಿಸುವ ಭರವಸೆಯಿದೆ’ ಎನ್ನುತ್ತಾರೆ ಸಮರ್‌ಜಿತ್.
ಇನ್ನು ಸಮರ್‌ಜಿತ್ ಅಭಿನಯದ ಚೊಚ್ಚಲ ಸಿನಿಮಾ “ಗೌರಿ’ಗೆ ತಂದೆ ಇಂದ್ರಜಿತ್ ಲಂಕೇಶ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ತಾಯಿ ಅರ್ಪಿತಾ ಲಂಕೇಶ್ ಸಿನಿಮಾಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.