ಮಂಗಳೂರು: ಕೇಂದ್ರ ಸರಕಾರದ ಅಪರಾಧ ತನಿಖಾ ಸಂಸ್ಥೆಯ ಹೆಸರು ಬಳಸಿ ಅಧಿಕಾರಿಗಳ ಸೋಗಿನಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದಾಗ ನಗರದ ಪೊಲೀಸರಿಂದ ಬಂಧಿತನಾದ ಕೇರಳ ಮೂಲದ ಸ್ಯಾಮ್ ಪೀಟರ್, ಗೌಡ ಸಾರಸ್ವತ ಸಮಾಜದ (ಜಿಎಸ್‌ಬಿ) ಸ್ವಾಮೀಜಿ ಒಬ್ಬರ ಅಪಹರಣ ಉದ್ದೇಶದಿಂದ ಮಂಗಳೂರಿಗೆ ಬಂದಿದ್ದ ಎಂಬು ದಾಗಿ ವಿಚರಣೆಯಿಂದ ತಿಳಿದು ಬಂದಿದೆ.
ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಡಾ| ಹರ್ಷ ಪಿ.ಎಸ್., ಸ್ಯಾಮ್ ಪೀಟರ್ ಉಡುಪಿಯ ಮಣಿ ಪಾಲದಲ್ಲಿ ವಾಸ್ತವ್ಯ ಮಾಡುತ್ತಿದ್ದ ಸಂದರ್ಭ ಉಡುಪಿಯ ಕಲ್ಪನಾ ಲಾಡ್ಜ್ ಮಾಲಿಕ ರಾಮಚಂದ್ರ ನಾಯಕ್‌ರ ಪರಿಚಯವಾಗಿತ್ತು. ನಾಯಕ್ ಅವರು ಕಾಶಿ ಮಠದ ಆಸ್ತಿ ವಿವಾದದ ಬಗ್ಗೆ ಸ್ಯಾಮ್‌ಗೆ ತಿಳಿಸಿ ವಿವಾದ ಬಗೆಹರಿಸುವ ಪ್ರಸ್ತಾವ ಮುಂದಿಟ್ಟಿದ್ದರು.
ವಿವಾದ ಬಗೆಹರಿಸುವ ಬಗ್ಗೆ ರಾಮಚಂದ್ರ ನಾಯಕ್ ಮೂಲಕ ಜಿಎಸ್‌ಬಿ ಸಮುದಾಯದ ಪರಿತ್ಯಕ್ತ ಸ್ವಾಮೀಜಿ ಕೇರಳದಲ್ಲಿರುವ ರಾಘವೇಂದ್ರ ಸ್ವಾಮೀಜಿ ಅವರನ್ನು ಆರೋಪಿ ಸ್ಯಾಮ್ ಪೀಟರ್ ಸಂಪರ್ಕಿಸಿದ್ದ. ಮಾತ್ರವಲ್ಲದೆ ಆಸ್ತಿ ವಿವಾದ ಬಗೆಹರಿಸಿಕೊಡಲು 15 ಲಕ್ಷ ರೂ. ಮುಂಗಡ ಪಡೆದಿದ್ದ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಜಿಎಸ್‌ಬಿ ಸಮಾಜದ ಪ್ರಸ್ತುತ ಸ್ವಾಮೀಜಿಯನ್ನು ಅಪಹರಿಸಲು ಸಂಚು ರೂಪಿಸಿ, ಸ್ಯಾಮ್ ಮಂಗಳೂರಿಗೆ ಬಂದಿದ್ದ. ಮಂಗಳೂರಿನ ಅಬ್ದುಲ್ ಲತೀಫ್ ಮತ್ತು ಜಿ. ಮೊಹಿದ್ದೀನ್ ಯಾನೆ ಚೆರಿಯನ್ ಆತನ ನೆರವಿಗೆ ನಿಂತಿದ್ದರು.
ತನಿಖೆ ವೇಳೆ ಅವರ ಸಂಚು ಪುಷ್ಟೀಕರಿಸುವ ದಾಖಲೆಗಳು ಸಿಕ್ಕಿವೆ. ವಸತಿ ಗೃಹದ ಮಾಲಿಕ ರಾಮಚಂದ್ರ ನಾಯಕ್‌ರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಅಸೌಖ್ಯದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಮಂಗಳೂರಿನ ಜಿಎಸ್‌ಬಿ ಸಮಾಜ ಮುಖಂಡರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ, ಹೆಚ್ಚಿನ ತನಿಖೆ ನಡೆಸುವಂತೆ ಕೋರಿದ್ದಾರೆ. ಸಮುದಾಯದ ಪರಿತ್ಯಕ್ತ ಸ್ವಾಮೀಜಿ ಸಹಿತ ಹಲವರನ್ನು ವಿಚಾರಣೆ ನಡೆಸಲು ಖುದ್ದು ಹಾಜರಾಗುವಂತೆ ಕದ್ರಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರೋಪಿ ಸ್ಯಾಮ್ ಪೀಟರ್ ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದು, ವಿಚಾರಣೆ ಮುಂದುವರಿದಿದೆ.