ಸೌತಾಂಪ್ಟನ್: ಕೋವಿಡ್-19 ಮಾರಿ ಈಗ ಇಂಗ್ಲೆಂಡ್ ಕ್ರಿಕೆಟಿಗರ ಮೇಲೆ ಆಕ್ರಮಣ ಮಾಡುವ ಸೂಚನೆ ನೀಡಿದೆ. ಆಲ್‌ರೌಂಡರ್ ಸ್ಯಾಮ್ ಕರನ್ ಅವರಿಗೆ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಆಂಗ್ಲ ಕ್ರಿಕೆಟಿಗರಲ್ಲಿ ಭೀತಿಯ ವಾತಾವರಣ ಮೂಡಿದೆ.
ಪ್ರವಾಸಿ ವೆಸ್ಟ್ ಇಂಡೀಸ್ ಎದುರಿನ ಸರಣಿಗಾಗಿ ತನ್ನದೇ ಆಟಗಾರರ ಎರಡು ತಂಡಗಳ ನಡುವೆ ಅಭ್ಯಾಸ ಪಂದ್ಯ ಆಡುತ್ತಿದ್ದ ವೇಳೆ ಈ ಅಂಶ ಬೆಳಕಿಗೆ ಬಂದಿದೆ. ಸ್ಯಾಮ್ ಕರನ್ ಗುರುವಾರವಷ್ಟೇ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು. ಈಗ ಅವರು ಏಗಸ್ ಬೌಲ್‌ನ ಹೊಟೇಲ್ ಕೊಠಡಿ ಯಲ್ಲಿ ಐಸೊಲೇಶನ್‌ನಲ್ಲಿದ್ದಾರೆ.
“ಕಳೆದ ರಾತ್ರಿ ಸ್ಯಾಮ್ ಕರನ್ ಅವರಲ್ಲಿ ಅನಾರೋಗ್ಯ ಕಾಣಿಸಿ ಕೊಂಡಿತು. ಬೆಳಗ್ಗಿನ ಕೋವಿಡ್-19 ಫಲಿತಾಂಶ ಪಾಸಿಟಿವ್ ಬಂದಿದೆ. ಸದ್ಯ ಇಲ್ಲಿನ ಹೊಟೇಲಿನಲ್ಲೇ ಐಸೊಲೇಶನ್‌ನಲ್ಲಿದ್ದಾರೆ. ಅವರು ಈ ಅಭ್ಯಾಸ ಪಂದ್ಯದಲ್ಲಿ ಇನ್ನು ಆಡುವುದಿಲ್ಲ’ ಎಂದು ಇಸಿಬಿ ಪ್ರಕಟನೆಯಲ್ಲಿ ತಿಳಿಸಿದೆ. ಮೊದಲ ದಿನದ ಆಟದ ಅಂತ್ಯಕ್ಕೆ ಕರನ್ 15 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.
ಸ್ಯಾಮ್ ಕರನ್‌ಗೆ ಕೋವಿಡ್-19 ಸಿಲುಕಿದ್ದರಿಂದ ಇಂಗ್ಲೆಂಡ್ ತಂಡದ ಉಳಿದ ಕ್ರಿಕೆಟಿಗರ ಫಲಿತಾಂಶದ ಬಗ್ಗೆಯೂ ಆತಂಕ ಮೂಡಿದೆ.