ವಾಷಿಂಗ್ಟನ್: “ನೀವು ಯಾವುದೋ ಗೊಂದಲ ಅಥವಾ ಸಮಸ್ಯೆಯಲ್ಲಿರುತ್ತೀರಿ. ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀವು ಎಷ್ಟೇ ಯೋಚಿಸಿದರೂ ಪುನಃ ಏನೇನೋ ಗೊಂದಲ, ನೂರಾರು ಪ್ರಶ್ನೆ, ಉಪಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತಿವೆ. ಅಂಥ ಸಮಯದಲ್ಲೇ ನೀವು ಮಾನಸಿಕವಾಗಿ ದಣಿದು ನಿದ್ರಾವಸ್ಥೆಗೆ ಜಾರುತ್ತೀರಿ. ಆಗ ನಿಮಗೆ ಕನಸು ಬೀಳಲಾರಂಭಿಸುತ್ತದೆ. ಆ ಕನಸಿನಲ್ಲಿ ನಿಮ್ಮ ಸಮಸ್ಯೆಗಳಿಗೆ ನೀವು ಖುದ್ದಾಗಿ ಉತ್ತರ ಸಿಕ್ಕಂತಾಗುತ್ತದೆ. ಆಗ ನೀವು ಥಟ್ಟನೆ ಎದ್ದರೆ, ಕನಸಿನಲ್ಲಿ ಕಂಡ ಪರಿಹಾರೋಪಾಯವನ್ನು ಅನುಷ್ಠಾನಕ್ಕೆ ತಂದಾಗ.. ನಿಮಗೆ ಯಶಸ್ಸು ಖಂಡಿತವಾಗಿ ಸಿಗುತ್ತದೆ’
– ಹೀಗೆಂದು, ಶತಮಾನದ ಹಿಂದೆ ಖ್ಯಾತ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ಹೇಳಿದ್ದ ಮಾತೊಂದು ಈಗ ಪ್ರಾಯೋಗಿಕವಾಗಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲ, ಹೀಗೆ ಅರೆನಿದ್ರೆಯಲ್ಲಿ ಬೀಳುವ ಕನಸುಗಳನ್ನು ತಕ್ಷಣ ಎದ್ದು ಅನುಷ್ಠಾನಗೊಳಿಸುವುದರಿಂದ ವ್ಯಕ್ತಿಯ ಸೃಜನಶೀಲತೆ ಹೆಚ್ಚಾಗುತ್ತದೆ ಎಂಬ ಅಂಶವನ್ನು ಅಮೆರಿಕದ ಮನೋಶಾಸ್ತ್ರಜ್ಞರು ಕಂಡುಕೊಂಡಿದ್ದಾರೆ ಎಂದು “ಸೈನ್ಸ್ ‘ ನಿಯತಕಾಲಿಕೆ ವರದಿ ಮಾಡಿದೆ.
ಇದನ್ನೂ ಓದಿ:ಮತದಾನಕ್ಕೆಂದು ಬಂದವರಿಗೆ ಸೂಜಿ ಚುಚ್ಚಿದ ಆರೋಗ್ಯ ಸಿಬ್ಬಂದಿ
ಇದನ್ನೇ ಹೇಳಿದ್ದ ಇಬ್ಬರು ಮಹಾಶಯರು! ಎಡಿಸನ್ ಹೇಳಿದ್ದಿಷ್ಟು. ಹಲವಾರು ವೈಜ್ಞಾನಿಕ ಸಂಶೋಧನೆಗಳ ವೇಳೆ ಒಂದು ಹಂತದಲ್ಲಿ ದಾರಿ ಕಾಣದೇ ನಿಂತಾಗ ಥಾಮಸ್ ಆಲ್ವ ಎಡಿಸನ್, ಒಂದು ಕಬ್ಬಿಣದ ಚೆಂಡನ್ನು ಹಿಡಿದುಕೊಂಡು ಆರಾಮ ಕುರ್ಚಿಯಲ್ಲಿ ಗಾಢವಾಗಿ ನಿದ್ರೆಗೆ ಜಾರುತ್ತಿದ್ದರಂತೆ. ಆಗ, ಬೀಳುವ ಕನಸಿನಲ್ಲಿ ಅವರಿಗೆ ಸಮಸ್ಯೆಗೆ ಉತ್ತರಗಳು ಸಿಗುತ್ತಿದ್ದವಂತೆ. ಇದೇ ಮಾತನ್ನು ಸ್ಪೇನ್ ವರ್ಣಚಿತ್ರಗಾರ ಸಾಲ್ವಡಾರ್ ಡಾಲಿ ಕೂಡ ಹೇಳಿದ್ದ.
ಆಗ, ಇವರಿಬ್ಬರ ಮಾತುಗಳಿಗೆ ಹೆಚ್ಚಾಗಿ ಜಾಗತಿಕ ಮಾನ್ಯತೆ ಸಿಕ್ಕಿರಲಿಲ್ಲ. ಆದರೆ, ಈ ನಿಟ್ಟಿನಲ್ಲಿ ಪ್ರಯೋಗಗಳು ಜಾರಿಯಲ್ಲಿದ್ದವು. ಈಗ, ಎಡಿಸನ್ ಹಾಗೂ ಡಾಲಿ ಸಿದ್ಧಾಂತಗಳು ನಿಜ ಎಂದು ವಿಜ್ಞಾನಿಗಳು ತಿಳಿಸಿದ್ದು, ಅರೆನಿದ್ರಾವಸ್ಥೆಯಲ್ಲಿ ಮನಸ್ಸು ನಿರಾತಂಕವಾಗಿ ಯೋಚಿಸುವ ಸಾಮರ್ಥ್ಯವನ್ನು ಗಳಿಸುವುದಾದರೂ ಹೇಗೆ ಎಂಬುದರ ಬಗ್ಗೆ ಮತ್ತಷ್ಟು ಪ್ರಯೋಗಗಳನ್ನು ನಡೆಸಲು ಮುಂದಾಗಿದ್ದಾರೆ.