Advertisement
ಈ ಪ್ರದೇಶದಲ್ಲಿ ಸುಮಾರು 200 ಮನೆಗಳಿದ್ದು, ಅವರಲ್ಲಿ 32 ಮನೆಗಳು ಕುಡಿಯುವ ನೀರಿನ ಸಂಪರ್ಕ ಹೊಂದಿದೆ. ಇನ್ನುಳಿದ ಮನೆಗಳಲ್ಲಿ ತೆರೆದ ಬಾವಿ ಹಾಗೂ ಕೊಳವೆ ಬಾವಿಗಳನ್ನು ಹೊಂದಿದ್ದಾರೆ. ಒಂದೆರಡು ಮನೆಗಳಲ್ಲಿ ಬಾವಿಯಿದ್ದರೂ ಕಲ್ಲಾಪುವಿನಲ್ಲಿ ಪ್ರತ್ಯೇಕವಾಗಿ ಸಮಿತಿಯೊಂದು ನಿರ್ವಹಣೆ ನಡೆಸುತ್ತಿದೆ. ಒಂದು ಕೊಳವೆ ಬಾವಿಯಿಂದ ನೀರಿನ ಸಂಪರ್ಕವನ್ನು ಹೊಂದಲಾಗಿದೆ.
ವರ್ಷದ ಎಲ್ಲ ತಿಂಗಳಿನಲ್ಲಿ ಕುಡಿಯುವ ನೀರಿನ ಸಾಕಷ್ಟು ಒರತೆ ಇದ್ದು, ನಿರ್ವಹಣೆಯಲ್ಲಿ ಅಷ್ಟೇನು ಸಮಸ್ಯೆ ಕಂಡಿಲ್ಲ. ಆದರೆ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನೀರಿನ ಒಳ ಹರಿವಿನಲ್ಲಿ ಉಪ್ಪಿನಾಂಶ ಕಂಡು ಬರುವುದರಿಂದ ಇದು ಇಲ್ಲಿನ ನೀರಿನ ನಿರ್ವಹಣೆಗೂ ಬಹಳ ತೊಂದರೆ ಆಗಿದೆ. ಆ ಸಂದರ್ಭದಲ್ಲಿ ಅನಿವಾರ್ಯವಾಗಿ ಟ್ಯಾಂಕರ್ ಮೂಲಕ ನೀರಿನ ಸಂಪರ್ಕವನ್ನು ನೀಡಲಾಗುತ್ತದೆ. ಹೆಚ್ಚುವರಿ ಕೊಳವೆ ಬಾವಿ
ಎರಡು ತಿಂಗಳ ಹಿಂದೆ ನೀರನ್ನು ಹೆಚ್ಚುವರಿಯಾಗಿ ಶೇಖರಿಸಲು ಪ್ರತ್ಯೇಕ ಕೊಳವೆ ಬಾವಿಯನ್ನು ಶಾಸಕ ಅಭಯಚಂದ್ರ ಜೈನ್ ಅವರ ಅನುದಾನದಲ್ಲಿ ಕೊರೆಯಲಾಗಿದೆ. ಇದರಲ್ಲಿ 6 ಇಂಚು ನೀರು ಸಿಕ್ಕಿದೆಯಾದರೂ ಅದರಲ್ಲೂ ಎಪ್ರಿಲ್ ಮೇ ತಿಂಗಳಿನಲ್ಲಿ ಉಪ್ಪು ನೀರು ಬರುವ ಸಾಧ್ಯತೆ ಇದೆ ಎಂದು ಪಂಚಾಯತ್ ಹೇಳಿಕೊಂಡಿದೆ. ಇದಕ್ಕಾಗಿಯೇ ಶಾಶ್ವತ ಪರಿಹಾರವಾಗಿ ತುಂಬೆಯಿಂದ ಮೂಲ್ಕಿಗೆ ಸರಬರಾಜು ಆಗುತ್ತಿರುವ ನೀರಿನ ಸಂಪರ್ಕ ಅಥವಾ ಕಿನ್ನಿಗೋಳಿಯ ಬಹುಗ್ರಾಮ ಯೋಜನೆಯಲ್ಲಿನ ನೀರಿನ ಸಂಪರ್ಕ ಸಿಕ್ಕಲ್ಲಿ ಪರಿಹಾರ ಕಂಡು ಕೊಳ್ಳಬಹುದು ಎಂಬ ಅಭಿಪ್ರಾಯ ಕೇಳಿ ಬಂದಿದೆ.
Related Articles
ಮೂರು ವರ್ಷಗಳ ಹಿಂದೆಯೇ ತುಂಬೆ ಸಂಪರ್ಕ ಪಡೆಯಲು ಮನವಿ ಸಲ್ಲಿಸಿದ್ದೇವೆ. ಸಮಸ್ಯೆ ಪರಿಹರಿಸಲು ಪ್ರಯತ್ನ ಸಾಗಿದೆ. ಕಲ್ಲಾಪುವಿನಲ್ಲಿನ ಉಪ್ಪು ನೀರಿನ ಒರತೆಯಿಂದ ಗ್ರಾಮಸ್ಥರು ಪಂಚಾಯತ್‌ನ್ನು ದೂರುವುದು ಸಹಜವಾದರೂ ನೀರನ್ನು ಟ್ಯಾಂಕರ್ ಮೂಲಕ ನೀಡುವ ವ್ಯವಸ್ಥೆ ಮಾಡುತ್ತಿದ್ದೇವೆ.
– ಮೋಹನ್‌ದಾಸ್, ಅಧ್ಯಕ್ಷರು,
ಪಡುಪಣಂಬೂರು ಗ್ರಾ.ಪಂ
Advertisement
ನೀರು ನಿರ್ವಹಣೆಯೂ ಸರಿಯಾಗಬೇಕುಕುಡಿಯುವ ನೀರಿನ ಬವಣೆಯಿಂದ ಆಗಾಗ ತೊಂದರೆಯಾಗುತ್ತದೆ. ಈ ಬಗ್ಗೆ ಗ್ರಾಮ ಪಂಚಾಯತ್ ಸಹಿತ ಸ್ಥಳೀಯ ಸಮಿತಿಯು ನೀರು ನಿರ್ವಹಣೆಯಲ್ಲಿನ ತೊಡಕನ್ನು ಸರಿಯಾಗಿ ಮಾಡಬೇಕು. ಉಪ್ಪು ನೀರಿನ ಸಮಸ್ಯೆ ಪರಿಹರಿಸಲು ಪ್ರಯತ್ನವಾಗಬೇಕು. ನಳ್ಳಿ ನೀರಿನ ಸಂಪರ್ಕವನ್ನೇ ನಂಬಿದವರಿಗೆ ಕಷ್ಟವಾಗುತ್ತದೆ.
-ಶಂಕರ ಶೆಟ್ಟಿಗಾರ್,ಸ್ಥಳೀಯರು ನರೇಂದ್ರ ಕೆರೆಕಾಡು