ಶನಿವಾರ ಬಿಗ್‌ಬಾಸ್ ಕನ್ನಡ ನೋಡಿದವರಿಗೆ ಒಂದು ಅಚ್ಚರಿ ಕಾದಿತ್ತು. ಅದು ಬಿಗ್‌ಬಾಸ್ ಶೋನಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿರೋದು. ಕನ್ನಡ ಕಿರುತೆರೆ ಮೇಲೆ ಮೊದಲ ಬಾರಿಗೆ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದು, ಇದಕ್ಕೆ ಕಾರಣವಾಗಿದ್ದು ಸುದೀಪ್. ಬಿಗ್‌ಬಾಸ್ ವೇದಿಕೆಯಿಂದ ವಿಡಿಯೋ ಕಾಲ್ ಮೂಲಕ ಸುದೀಪ್ ಹಾಗೂ ಸಲ್ಮಾನ್ ಮಾತನಾಡಿದ್ದಾರೆ. ಜೊತೆಗೆ “ದಬಾಂಗ್-3′ ಚಿತ್ರತಂಡ ಕೂಡಾ ಜೊತೆಗಿತ್ತು.
ಮೊದಲ ಬಾರಿಗೆ ಈ ತರಹದ ಒಂದು ಪ್ರಯತ್ನವಾಗಿರೋದಕ್ಕೆ ಸುದೀಪ್ ಖುಷಿಯಾಗಿದ್ದಾರೆ. ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಸುದೀಪ್, “ಸಲ್ಮಾನ್ ಖಾನ್ ಅವರನ್ನು ಬಿಗ್‌ಬಾಸ್ ವೇದಿಕೆಯಿಂದ ಸಂಪರ್ಕಿಸಿದ್ದು ತುಂಬಾ ಖುಷಿ ಕೊಟ್ಟ ಕ್ಷಣ. ಈ ತರಹದ ಒಂದು ಪ್ರಯತ್ನ ಮೊದಲ ಬಾರಿಗೆ ನನ್ನ ಸಹೋದರ ಸಲ್ಮಾನ್ ಖಾನ್ ಜೊತೆಗೆ ನಡೆದಿರೋದು ಇನ್ನಷ್ಟು ಖುಷಿ ಕೊಟ್ಟಿದೆ’ ಎಂದು ಬರೆದುಕೊಂಡಿದ್ದಾರೆ.
ಬಿಗ್‌ಬಾಸ್ ಶೋನಲ್ಲಿ ವಿಡಿಯೋ ಕಾಲ್ ಮೂಲಕ ಕಾಣಿಸಿಕೊಂಡ ಸಲ್ಮಾನ್ ಖಾನ್, ಸುದೀಪ್ ಅವರ ನಟನೆ, ವ್ಯಕ್ತಿತ್ವದ ಬಗ್ಗೆ ಖುಷಿಯಿಂದ ಮಾತನಾಡಿದ್ದಾರೆ. ಸಲ್ಮಾನ್ ಖಾನ್ ನಟನೆಯ “ದಬಾಂಗ್-3′ ಚಿತ್ರ ಡಿಸೆಂಬರ್ 20 ರಂದು ತೆರೆಕಾಣುತ್ತಿದ್ದು, ಈ ಚಿತ್ರದಲ್ಲಿ ಸುದೀಪ್ ವಿಲನ್ ಆಗಿ ನಟಿಸಿದ್ದಾರೆ.