ದೇವದುರ್ಗ: ಜಾಲಹಳ್ಳಿ ಗ್ರಾಪಂನ 31 ಸಿಬ್ಬಂದಿಗಳಿಗೆ ಬರೋಬ್ಬರಿ 23 ತಿಂಗಳಿಂದ ವೇತನ ಬಾಕಿ ಇದ್ದು, ಇದೀಗ ಆ ಸಿಬ್ಬಂದಿ ಕುಟುಂಬ ನಿರ್ವಹಣೆ ಮಾಡಲು ಸಹ ಸಂಕಷ್ಟ ಪಡುವಂತಾಗಿದೆ. ದಿನಗೂಲಿ ಪೌರ ಕಾರ್ಮಿಕರು, ವಾಟರ್ ಮೇನ್, ಪರಿಚಾರಕ, ಡಾಟಾ ಆಪರೇಟರ್, ವಾಚಮೇನ್ ಸೇರಿದಂತೆ 31 ಜನ ಸಿಬ್ಬಂದಿ ಈ ಗ್ರಾಪಂ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾರ್ಷಿಕ ಆದಾಯ 20 ಲಕ್ಷಕ್ಕೂ ಅ ಧಿಕ ಸಂಗ್ರಹವಾಗುತ್ತಿದೆ. ಆದರೂ ಸಿಬ್ಬಂದಿ ವೇತನ ಪಾವತಿಸಲು ಅಧಿ ಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಬಾಕಿ ವೇತನ ಸಮಸ್ಯೆ ಕುರಿತು ಹಲವು ಬಾರಿ ಸಿಬ್ಬಂದಿಗಳು ಅಧಿ ಕಾರಿಗಳ ಗಮನಕ್ಕೆ ತಂದಿದ್ದಾರೆ.
ಇಲ್ಲಿವರೆಗೆ ಸಮಸ್ಯೆ ಬಗೆಹರಿದಿಲ್ಲ. ಆರೇಳು ತಿಂಗಳಿಗೊಮ್ಮೆ ಅಧಿಕಾರಿಗಳ ವರ್ಗಾವಣೆಯಿಂದಲೂ ಸಕಾಲಕ್ಕೆ ವೇತನ ಪಾವತಿಗೆ ಅಡ್ಡಿಯಾದಂತಾಗಿದೆ. ಆರೋಗ್ಯ ಸಮಸ್ಯೆ, ಮಕ್ಕಳಿಗೆ ಶಿಕ್ಷಣ ಸೇರಿದಂತೆ ಕುಟುಂಬ ನಿರ್ವಹಣೆ ಮಾಡಲು ಒಂದಿಲ್ಲೊಂದು ಸಮಸ್ಯೆ ಎದುರಿಸುವಂತ ಸ್ಥಿತಿ ಬಂದಿದೆ.
ಜಾಲಹಳ್ಳಿ ಗ್ರಾಮದ 9 ವಾರ್ಡ್‌ಗಳಲ್ಲಿ ಸ್ವತ್ಛತೆ, ಕುಡಿವ ನೀರು, ಬೀದಿದೀಪ, ಚರಂಡಿ ಸ್ವತ್ಛತೆ ಕೈಗೊಳ್ಳುವಂತ ಸಿಬ್ಬಂದಿಗಳ ಪಾಡು ಹೇಳತೀರದಾಗಿದೆ. ಡಾಟಾ ಆಪರೇಟ್ ಸಿಬ್ಬಂದಿ ವೇತನವೂ ಬಾಕಿ ಇದೆ. ಈ ಹಿಂದೆ ಅಧಿಕಾರ ಅನುಭವಿಸಿದ ಸದಸ್ಯರ ಮುಂದೆಯೂ ಸಿಬ್ಬಂದಿ ತಮ್ಮ ಗೋಳು ತೊಡಿಕೊಂಡಿದ್ದು, ಒಬ್ಬ ಸದಸ್ಯರು ಗಮನಹರಿಸಿಲ್ಲ ಎನ್ನುವುದು ಬೇಸರ ಸಂಗತಿ. ಇನ್ನಾದರೂ ಸ್ಥಳೀಯ ಶಾಸಕರು ಇತ್ತ ಗಮನ ಹರಿಸಬೇಕು ಎಂಬುದು ಸಿಬ್ಬಂದಿಗಳ ಆಗ್ರಹವಾಗಿದೆ.
ಜಾಲಹಳ್ಳಿ ಗ್ರಾಪಂ ಸಿಬ್ಬಂದಿಗಳ 23 ತಿಂಗಳ ಬಾಕಿ ವೇತನ ಪಾವತಿ ಮಾಡುವಂತೆ ವಿವಿಧ ಸಂಘಟನೆ ಮುಖಂಡರು ಕಚೇರಿ ಮುಂದೆ ಧರಣಿ ನಡೆಸಿದ ವೇಳೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದೇನೆ. ವಾರದಲ್ಲಿ ವೇತನ ಪಾವತಿ ಮಾಡಲು ಕ್ರಮ ವಹಿಸಲಾಗುತ್ತದೆ.
– ಅಣ್ಣರಾವ್, ತಾಪಂ ಎಡಿ
23 ತಿಂಗಳಿಂದ ವೇತನ ಇಲ್ಲದೇ ದುಡಿಯುತ್ತಿರುವ ಸಿಬ್ಬಂದಿಗೆ ಕೂಡಲೇ ವೇತನ ನೀಡಬೇಕು ಎಂದು ಅಧಿ ಕಾರಿಗಳಿಗೆ ಮನವಿ ಮಾಡಲಾಗಿದೆ. ವಾರದಲ್ಲಿ ಅರ್ಧಷ್ಟು ವೇತನ ಮಾಡದೇ ಇದ್ದರೇ ಹೋರಾಟ ಅನಿವಾರ್ಯ.
– ಗಿರಿಯಪ್ಪ ಪೂಜಾರಿ, ಸಿಐಟಿಯು ಸಂಘಟನೆ ಕಾರ್ಯದರ್ಶಿ
– ನಾಗರಾಜ ತೇಲ್ಕರ್