ಹೈದರಾಬಾದ್: ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ‘ಸಲಾರ್’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಅಂದುಕೊಂಡಂತೆ ಕೋಟಿ -ಕೋಟಿ ಖರ್ಚನ್ನು ಅದ್ಧೂರಿ ಮೇಕಿಂಗ್ ಗಾಗಿ ಮಾಡಿರುವುದು ಟೀಸರ್ ಮೊದಲ ನೋಟದಲ್ಲೇ ಗೊತ್ತಾಗುತ್ತದೆ.
ಗುರುವಾರ ಮುಂಜಾನೆ 5:12 ರ ಹೊತ್ತಿಗೆ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ರಿಲೀಸ್ ನ ಸಮಯಕ್ಕೂ ಕೆಜಿಎಫ್ ಚಿತ್ರದ ಕ್ಲೈಮ್ಯಾಕ್ಸ್ ಗೂ ಹೋಲಿಕೆ ಮಾಡಲಾಗಿತ್ತು. ಸಿನಿಮಾದ ಟೀಸರ್ ನೋಡುವಾಗ ಖಂಡಿತವಾಗಿಯೂ ಕೆಜಿಎಫ್ ಛಾಯೆ ಕಾಣುವುದಂತೂ ಸತ್ಯ.
ಕೆಜಿಎಫ್ ನಲ್ಲಿರುವಂತೆ ಇಲ್ಲಿಯೂ ನಾಯಕನ ಕಥೆ ಹೇಳಲು ಒಬ್ಬರಿದ್ದಾರೆ ಎನ್ನುವುದನ್ನು ಟೀಸರ್ ನಲ್ಲಿ ತೋರಿಸಲಾಗಿದೆ. ಬಾಲಿವುಡ್ ನ ಹಿರಿಯ ಟಿನು ಆನಂದ್ “ಸಿಂಹ.. ಚಿರತೆ.. ಹುಲಿ.. ಆನೆ.. ತುಂಬಾ ಡೇಂಜರಸ್.. ಎನ್ನುವಾಗ ದೈತ್ಯ ಗನ್ ಗಳನ್ನು ಹಿಡಿದು ನೂರಾರು ಜನರನ್ನು ಯುದ್ಧದ ಅಖಾಡದಲ್ಲಿ ಸಂಹಾರ ಮಾಡುವ ನಾಯಕ ನಟ ಪ್ರಭಾಸ್ ಅವರನ್ನು ಇಲ್ಲಿ ತೋರಿಸಲಾಗಿದೆ. ಅದ್ದೂರಿ ಮೇಕಿಂಗ್ ಸೆಟ್ ನಲ್ಲಿ ಫೈಟ್ ಗಳಿವೆ, ‘ಕೆಜಿಎಫ್’ ನಂತೆ ಇಲ್ಲೂ ಒಂದು ದೊಡ್ಡ ಅಖಾಡದಲ್ಲಿ ನೂರಾರು ಜನರೊಂದಿಗೆ ಒಂಟಿಯಾಗಿಯೇ ಹೋರಾಡುವ ನಾಯಕನ ಕಿಚ್ಚು ಇರುವುದು ಟೀಸರ್ ಝಲಕ್ ನಲ್ಲಿ ತೋರಿಸಲಾಗಿದೆ.
ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ ಎನ್ನುವ ಗಾಸಿಪ್ ಗೆ ಟೀಸರ್ ನಲ್ಲಿ ತೆರೆ ಎಳೆಯಲಾಗಿದೆ. ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಮೊದಲ ಭಾಗಕ್ಕೆ ‘ಕದನ ವಿರಾಮ’ ಎಂದು ಹೆಸರಿಡಡಲಾಗಿದೆ.
ಟೀಸರ್ ನಲ್ಲಿ ಟಿನು ಆನಂದ್, ಪ್ರಭಾಸ್ ಹಾಗೂ ಪೃಥಿರಾಜ್ ಸುಕುಮಾರನ್ ಅವರನ್ನು ಮಾತ್ರ ಮುಖ್ಯವಾಗಿ ತೋರಿಸಲಾಗಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾಕ್ಕೆ ಅದ್ಧೂರಿ ಬಜೆಟ್ ನಲ್ಲಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ.
ಈ ಸಿನಿಮಾದಲ್ಲಿ ಪ್ರಭಾಸ್ , ಶ್ರುತಿ ಹಾಸನ್, ಶ್ರೀಯಾ ರೆಡ್ಡಿ, ಈಶ್ವರಿ ರಾವ್, ಮಧು ಗುರುಸ್ವಾಮಿ ಮತ್ತು ಜಗಪತಿ ಬಾಬು ಮುಂತಾದವರು ನಟಿಸಿದ್ದಾರೆ.
ಸೆ.28 ರಂದು ವಿಶ್ವದೆಲ್ಲೆಡೆ ʼಸಲಾರ್ʼ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರಲಿದೆ.