ನಿರ್ದೇಶಕ ಪ್ರಶಾಂತ್ ನೀಲ್ ಅವರ ಮೊದಲ ಕನಸು “ಉಗ್ರಂ’. ಹಲವು ಅಡೆತಡೆಗಳನ್ನು ದಾಟಿ ಅಂದು ತೆರೆಗೆ ಬಂದ ಚಿತ್ರ ಕೆಲವೇ ದಿನಗಳಲ್ಲಿ ಪೈರಸಿಯಾಗಿ, ಮೊಬೈಲ್, ಯುಟ್ಯೂಬ್‌ನಲ್ಲಿ ಓಡಾಡಿತ್ತು. ಅಂದು ಆ ಚಿತ್ರಕ್ಕೆ ಸಿಗಬೇಕಾದ ಮಾನ್ಯತೆ ದೊಡ್ಡ ಮಟ್ಟದಲ್ಲಿ ಸಿಗಲೇ ಇಲ್ಲ. ಈ ನೋವು ಪ್ರಶಾಂತ್ ನೀಲ್ ಅವರ ಮನದ ಮೂಲೆಯಲ್ಲಿ ಹಾಗೆಯೇ ಕುದಿಯುತ್ತಿತ್ತು. ಅದನ್ನು ಈಗ ಅತಿದೊಡ್ಡ ಮಟ್ಟದಲ್ಲಿ ಹೊರಹಾಕಿದ್ದಾರೆ. ಅದು “ಸಲಾರ್’ ಮೂಲಕ.
ಹೌದು, ಪ್ರಶಾಂತ್ ನೀಲ್ ದೊಡ್ಡ ಕ್ಯಾನ್ವಾಸ್‌ನಲ್ಲಿ ಸಿನಿಮಾವನ್ನು ಕಟ್ಟಿಕೊಡುವ ಮೂಲಕ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗ “ಸಲಾರ್’ನಲ್ಲೂ ಅದನ್ನು ಮುಂದುವರೆಸಿದ್ದಾರೆ. ಸಿನಿಮಾ ನೋಡಿದವರಿಗೆ ಹೊಸದೊಂದು ಲೋಕವನ್ನು ಪ್ರಶಾಂತ್ ನೀಲ್ ಕಟ್ಟಿಕೊಟ್ಟಿರೋದು ಎದ್ದು ಕಾಣುತ್ತದೆ. ಈ ದೊಡ್ಡ ಕ್ಯಾನ್ವಾಸ್‌ನಲ್ಲಿ “ಉಗ್ರಂ’ ಮೂಲ ಅಂಶವನ್ನಿಟ್ಟುಕೊಂಡು ಮಿಕ್ಕಂತೆ “ಸಲಾರ್’ ಹಾದಿಯಲ್ಲಿ ನಡೆದಿದ್ದಾರೆ. ಇಲ್ಲಿ ಅವರ ಹೆಜ್ಜೆ ದೊಡ್ಡದಾಗಿದೆ. ಈ ಹಾದಿಯಲ್ಲಿ ಫ್ರೆಂಡ್‌ಶಿಪ್, ತಾಯಿ ಸೆಂಟಿಮೆಂಟ್, ಸಾಮ್ರಾಜ್ಯಗಳ ಕತ್ತಿ ಕಾಳಗ, ಪಟ್ಟಕ್ಕಾಗಿ ನಡೆಯುವ ಜಿದ್ದಾಜಿದ್ದಿ ಎಲ್ಲವೂ “ಸಲಾರ್’ನಲ್ಲಿ ಅಡಗಿದೆ.
ಪ್ರಶಾಂತ್ ನೀಲ್ ಈ ಬಾರಿಯೂ ತಮ್ಮ ಫೆವರೇಟ್ ಶೈಲಿಯಾದ ಬ್ಲ್ಯಾಕ್‌ಶೇಡ್ ನಲ್ಲೇ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಸ್ನೇಹದಿಂದ ಆರಂಭವಾಗುವ ಕಥೆ ಮುಂದೆ ಹಲವು ರಾಜ್ಯಗಳನ್ನು ದಾಟಿ ಸಾಗುತ್ತದೆ. ಹೀಗೆ ಸಾಗುವ ಕಥೆಯ ಮುಖ್ಯ ಭಾಗ ನಡೆಯುವುದು ಖಾನ್ಸಾರ್ ಎಂಬ ಕಾಲ್ಪನಿಕ ಊರಿನಲ್ಲಿ. ದೇಶದ ಅಂಕೆಗೆ ಸಿಗದೇ ತಮ್ಮದೇ ಆದ ಸಂವಿಧಾನ ರಚಿಸಿರುವ ಈ ಊರಿನ ರಕ್ತಚರಿತ್ರೆಯೊಂದಿಗೆ ಚಿತ್ರ ಸಾಗುತ್ತದೆ.
ಇದೊಂದು ಸುದೀರ್ಘ ಸಿನಿಮಾ. ಸಾಕಷ್ಟು ದೃಶ್ಯ, ಸನ್ನಿವೇಶಗಳು ಬರುತ್ತವೆ. ಪ್ರತಿ ದೃಶ್ಯದ ಹಿಂದೆಯೂ ಪ್ರಶಾಂತ್ ನೀಲ್ ಅವರ ಶ್ರಮ ಎದ್ದು ಕಾಣುತ್ತದೆ. ಏನು ಹೇಳಬೇಕೋ ಅದನ್ನು ತುಂಬಾ ಡಿಟೇಲಿಂಗ್ ಆಗಿ ಹೇಳುವ ಮೂಲಕ ಸಿನಿಪ್ರಿಯರ ಮನತಣಿಸುವ ಪ್ರಯತ್ನ ಮಾಡಿದ್ದಾರೆ.
ಮುಖ್ಯವಾಗಿ “ಸಲಾರ್’ ಹೇಗೆ ಫ್ರೆಂಡ್‌ಶಿಪ್ ಕಥೆಯೋ, ಅದೇ ರೀತಿ ಮಾಸ್ ಇದು ಔಟ್ ಅಂಡ್ ಔಟ್ ಮಾಸ್ ಸಿನಿಮಾ. ಸಿನಿಮಾದುದ್ದಕ್ಕೂ ಅದೆಷ್ಟು ಹೆಣಗಳು ಉರುಳುತ್ತವೋ, ಅದೆಷ್ಟು ಲೀಟರ್ ರಕ್ತ ಸುರಿಯುತ್ತೋ… ಲೆಕ್ಕವಿಲ್ಲ. ಆ ಮಟ್ಟಿಗೆ ಪ್ರಭಾಸ್ ಅವರ ಮಾಸ್ ಫ್ಯಾನ್ಸ್‌ಗೆ “ಹಬ್ಬದೂಟ’ ಹಾಕಿಸಿದ್ದಾರೆ ಪ್ರಶಾಂತ್ ನೀಲ್. ಅಂದಹಾಗೆ, “ಸಲಾರ್’ನಲ್ಲಿ ನಡೆಯುವ ಖಾನ್ಸಾರ್ ಕಾಳಗ ಮುಗಿದಿಲ್ಲ. ಮುಂದಿನ ಭಾಗವಾದ “ಶೌರ್ಯಂಗ ಪರ್ವಂ’ನಲ್ಲಿ ಮತ್ತೂಂದು ನೆತ್ತರ ಹಾದಿಯ ಸೂಚನೆ ನೀಡಿದ್ದಾರೆ.
ನಾಯಕ ಪ್ರಭಾಸ್ ಅಭಿಮಾನಿಗಳಿಗೆ ಇದು ಖುಷಿ ಕೊಡುವ ಸಿನಿಮಾ. ಮಾತು ಕಮ್ಮಿ ಇದ್ದರೂ ಪ್ರಭಾಸ್ ಆ್ಯಕ್ಷನ್‌ನಲ್ಲಿ ಅಬ್ಬರಿಸಿದ್ದಾರೆ. ಕಣ್ಣಲ್ಲೇ ಮಾತನಾಡುವ, ಕೋಪದ ಕಟ್ಟೆ ಹೊಡೆದಾಗ “ಮದಗಜ’ ಆಗುವ ಪಾತ್ರದಲ್ಲಿ ಪ್ರಭಾಸ್ ಮಿಂಚಿದ್ದಾರೆ. ಚಿತ್ರದ ಮತ್ತೂಂದು ಪ್ರಮುಖ ಪಾತ್ರದಲ್ಲಿ ನಟಿಸಿರುವ ಪೃಥ್ವಿರಾಜ್ ಸುಕುಮಾರನ್ ತಮ್ಮ ಹಾವ-ಭಾವದಿಂದ ಗಮನ ಸೆಳೆಯುತ್ತಾರೆ. ನಾಯಕಿ ಶ್ರುತಿ ಹಾಸನ್‌ಗೆ ಇಲ್ಲಿ ಹೆಚ್ಚೇನು ಕೆಲಸವಿಲ್ಲ. ಉಳಿದಂತೆ ಕನ್ನಡದ ಅನೇಕ ಕಲಾವಿದರು ಇಲ್ಲಿ ಮಿಂಚಿದ್ದಾರೆ. ದೇವರಾಜ್, ಗರುಡ ರಾಮ್, ವಜ್ರಾಂಗ್ ಶೆಟ್ಟಿ, ಪ್ರಮೋದ್, ನವೀನ್ ಶಂಕರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತದಲ್ಲಿ ರವಿ ಬಸ್ರೂರು ಮಿಂಚಿದ್ದಾರೆ.
ರವಿಪ್ರಕಾಶ್ ರೈ