ಸಕಲೇಶಪುರ: ಸಕಲೇಶ್ವರಸ್ವಾಮಿ ಮಹಾ ರಥೋತ್ಸವ ಸೋಮವಾರ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. ಸಕಲೇಶ್ವರಸ್ವಾಮಿ ಜಾತ್ರೋತ್ಸವದ ಅಂಗವಾಗಿ ಶುಕ್ರವಾರದಿಂದ ಸಕಲೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿವಿಧ ಪೂಜೆ ಕೈಂಕರ್ಯಗಳು ಆರಂಭಗೊಂಡಿದ್ದು, ಶನಿವಾರ ರಾತ್ರಿ ಗಿರಿಜಾ ಕಲ್ಯಾಣ ಕಾರ್ಯಕ್ರಮ ನಡೆಯಿತು.
ಭಾನುವಾರ ಸಕಲೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಬ್ರಾಹ್ಮಣರ ಬೀದಿಯಲ್ಲಿ ಮೆರವಣಿಗೆ ನಡೆಸಿದ ನಂತರ ಘಳಿಗೆ ತೇರನ್ನು ಎಳೆಯಲಾಗಿತ್ತು. ಸೋಮವಾರ ವಿವಿಧ ಪೂಜೆ ಕಾರ್ಯಗಳನ್ನು ನಡೆಸಿದ ನಂತರ 12 ಗಂಟೆಗೆ ಸರಿಯಾಗಿ ದಿವ್ಯ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಈಡುಗಾಯಿ ಒಡೆದ ಭಕ್ತರು: ಬ್ರಾಹ್ಮಣರ ಬೀದಿ ಮೂಲಕ ಮುಖ್ಯರಸ್ತೆಯಲ್ಲಿ ಪುರಸಭೆವರೆಗೆ ಎಳೆದು ನಂತರ ರಥವನ್ನು ಸಂಜೆ 7 ಗಂಟೆ ವೇಳೆಗೆ ಹಿಂತಿರುಗಿ ಎಳೆದು ತಂದು ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಈ ವೇಳೆ ಸಾವಿರಾರು ಭಕ್ತಾದಿಗಳು ಹಣ್ಣುಕಾಯಿ,ಇಡುಗಾಯಿ ಅರ್ಪಿಸಿ ಪುನಿತರಾದರು. ಮುಖ್ಯ ಬೀದಿಯ ಹಲವರು ರಥಕ್ಕೆ ಆರತಿ ಬೆಳಗುವ ಮೂಲಕ ಸ್ವಾಗತಿಸಿದರು.
ಯುವಕರು ರಥದ ಮೇಲೆ ಬಾಳೆಹಣ್ಣು ಬೀರುವುದರಲ್ಲಿ ಸಂತಸ ಕಂಡರು. ಸಾವಿರಾರು ಯುವಕರು ವಾದ್ಯ ವೃಂದಕ್ಕೆ ನರ್ತನ ಮಾಡಿದರು. ರಥೋತ್ಸವದ ಅಂಗವಾಗಿ ಪಟ್ಟಣದ ಮುಖ್ಯ ಬೀದಿಯಲ್ಲಿ ವಾಹನ ಸಂಚಾರ ನಿಷೇಧಿಸಿ ಅಶೋಕ ರಸ್ತೆ ಹಾಗೂ ಅಜಾದ್ ರಸ್ತೆಯ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಅನ್ನ ಸಂತರ್ಪಣೆ: ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಪುರಸಭೆಯವರೆಗೆ ಹಲವೆಡೆ ವಿವಿಧ ಸಂಘಸಂಸ್ಥೆಗಳಿಂದ ಅನ್ನಸಂತರ್ಪಣೆ, ಮಜ್ಜಿಗೆ,ಐಸ್‌ಕ್ರೀಮ್ ಹಾಗೂ ತಂಪು ಪಾನೀಯ ವಿತರಣೆ ಮಾಡಲಾಯಿತು. ಸಾವಿರಾರು ಯುವಕರು ತೇರಿನಲ್ಲಿ ಭಾಗಿಯಾಗಿದ್ದು, ಅಲ್ಲಲ್ಲಿ ಯುವಕರ ಗುಂಪುಗಳ ನಡುವೆ ಸಣ್ಣಪುಟ್ಟ ಘರ್ಷಣೆಗಳು ನಡೆಯುತ್ತಲೇ ಇತ್ತು.
ಎರಡು ಗುಂಪುಗಳ ನಡುವೆ ಘರ್ಷಣೆ ಮಿತಿ ಮೀರಿದಾಗ ಪೋಲಿಸರು ಲಾಠಿ ಚಾರ್ಜ್ ಮೂಲಕ ಗುಂಪನ್ನು ಚದುರಿಸಿದ ಘಟನೆ ನಡೆಯಿತು. ಸಕಲೇಶಪುರ ಪುರಸಭಾ ಸದಸ್ಯರು, ರಾಜಕೀಯ ಮುಖಂಡರು ರಥೋತ್ಸವದಲ್ಲಿ ಭಾಗಿಯಾಗಿದ್ದರು. ರಥೋತ್ಸವದ ಅಂಗವಾಗಿ ಪಟ್ಟಣದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.