ಹೊಸದಿಲ್ಲಿ : ‘ಸಂವಿಧಾನದ 370ನೇ ವಿಧಿಯನ್ನು ರದ್ದು ಪಡಿಸಿದಲ್ಲಿ ಭಾರತದೊಂದಿಗಿನ ಕಾಶ್ಮೀರದ ಸಂಬಂಧ ಕಡಿದು ಹೋಗಲಿದೆ’ ಎಂಬ ಎಚ್ಚರಿಕೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪ್ರೊ. ಸೈಫುದ್ದೀನ್ ಸೋಜ್ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ಈ ವಾರ ಸಂವಿಧಾನದ 35ಎ ವಿಧಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಲಾದ ಅರ್ಜಿಗಳ ವಿಚಾರಣೆ ನಡೆಸಲಿದೆ.
‘ಸಂವಿಧಾನದ 370ನೇ ವಿಧಿಯನ್ನು ತಿರುಚಲಾದಲ್ಲಿ ಕಾಶ್ಮೀರದ ಲಾಲ್ ಚೌಕದಲ್ಲಿ ಪ್ರತಿಭಟನೆ ನಡೆಸಲಿರುವ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ನ್ಯಾಶನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲ ಮತ್ತು ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲೀ ಶಾ ಗೀಲಾನಿ ಅವರೊಂದಿಗೆ ನಾನೂ ಸೇರಿಕೊಳ್ಳುತ್ತೇನೆ’ ಎಂದು ಸೋಜ್ ಎಚ್ಚರಿಕೆ ನೀಡಿದರು.
‘ಕಾಶ್ಮೀರ ಕಣಿವೆಯಲ್ಲೀಗ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸೇನೆಯನ್ನು ಏಕೆ ಜಮಾಯಿಸಲಾಗಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಸ್ಥಳೀಯ ಕಾಶ್ಮೀರಿಗಳು ಈ ಪರಿಯ ಸೇನೆ ತಮ್ಮ ಸುತ್ತಮುತ್ತ ಇರುವುದನ್ನು ಕಂಡು ಅವಾಕ್ ಆಗಿದ್ದಾರೆ. ಸಂವಿಧಾನದ 370ನೇ ವಿಧಿಯನ್ನು ಒಂದೊಮ್ಮೆ ಕೋರ್ಟ್ ರದ್ದು ಮಾಡಿದಲ್ಲಿ ಭಾರತದೊಂದಿಗಿನ ಕಾಶ್ಮೀರದ ಸಂಬಂಧ ಕಡಿದುಹೋಗಲಿದೆ. ಸಂವಿಧಾನದ 35ನೇ ಮತ್ತು 370ನೇ ವಿಧಿಯನ್ನು ರದ್ದು ಮಾಡುವುದಕ್ಕೆ ಆರ್‌ಎಸ್‌ಎಸ್ ತೀವ್ರವಾಗಿ ಆಸಕ್ತವಾಗಿದೆ ಮತ್ತು ಅದು ಸುಪ್ರೀಂ ಕೋರ್ಟ್ ಮೆಟ್ಟಲೇರಿದೆ’ ಎಂದು ಸೋಜ್ ಹೇಳಿದರು.