ಸೈದಾಪುರ: ಬೇಸಿಗೆ ಸಮಯದಲ್ಲಿ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂಬುದು ಕೇವಲ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಗೆ ಸೀಮಿತವಾಗಿದ್ದು, ಕಣೇಕಲ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಕಾಳೆಬೆಳಗುಂದಿ ಗ್ರಾಪಂ ವ್ಯಾಪ್ತಿಯ ಕಣೇಕಲ್ ಗ್ರಾಮದಲ್ಲಿ ಒಂದು ತಿಂಗಳಿನಿಂದ ಕುಡಿಯುವ ನೀರಿಗಾಗಿ ಗ್ರಾಮಸ್ಥರು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗೆ ಹಾಗೂ ಸಂಜೆ ಮನೆ ಕೆಲಸ ಬಿಟ್ಟು ನೀರು ತರುವುದೇ ದೊಡ್ಡ ಕಾಯಕವಾಗಿದೆ. ಆದರೆ ಇದಕ್ಕೆ ಇಲ್ಲಿನ ಅಧಿಕಾರಿಗಳು ತಮಗೆ ಯಾವುದೇ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದಲ್ಲಿ ಸುಮಾರು 1500 ಜನಸಂಖ್ಯೆ ಹೊಂದಿದೆ. ಗ್ರಾಮದಲ್ಲಿ ಸುಮಾರು ವರ್ಷಗಳ ಹಿಂದೆ ನಿರ್ಮಿಸಿದ ಕೊಳವೆಬಾವಿಗಳು ಹಾಳಾಗಿವೆ. ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಸರ್ಕಾರ ಲಕ್ಷಾಂತರ ಹಣ ಖರ್ಚು ಮಾಡುತ್ತಿದೆ. ಆದರೆ ಇಲ್ಲಿನ ಸಣ್ಣಪುಟ್ಟ ತಾಂತ್ರಿಕ ತೊಂದರೆಗಳು ಮತ್ತು ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಣೇಕಲ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಅನೇಕ ಬಾರಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದರೂ, ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕನಿಷ್ಟ ಪಕ್ಷ ಗ್ರಾಮಕ್ಕೆ ಬಂದು ಸಮಸ್ಯೆ ಆಲಿಸುವುದಕ್ಕೂ ಮುಂದಾಗಿಲ್ಲ. ಇಂತಹ ಅಧಿ ಕಾರಿಗಳ ವಿರುದ್ಧ ಸಂಬಂಧಪಟ್ಟ ಮೇಲಧಿಕಾರಿಗಳು ಶಿಸ್ತು ಕ್ರಮ ಜರುಗಿಸಿ, ಅತೀ ಶೀಘ್ರದಲ್ಲಿ ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸಬೇಕು ಎಂಬುವುದು ಸ್ಥಳೀಯರ ಆಗ್ರಹವಾಗಿದೆ.
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇಳತೀರದು. ವರ್ಷವಿಡೀ ನೀರಿನ ಸಮಸ್ಯೆ ಹೀಗೆ ಇರುತ್ತದೆ. ಸಮಸ್ಯೆ ಪರಿಹರಿಸಬೇಕಾದ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.
ಬಸವರಾಜ ನಾಯಕ,
ಗ್ರಾಮಸ್ಥರು.
ಕುಣೇಕಲ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಯಾವುದೇ ಮಾಹಿತಿ ಇಲ್ಲ. ಆದರೆ ಅಲ್ಲಿನ ಸಮಸ್ಯೆ ಅರಿತು ಶೀಘ್ರದಲ್ಲಿ ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸುತ್ತೇವೆ.
ಶಿಲ್ಪಾ ಶರ್ಮಾ, ಸಿಇ
ಭೀಮಣ್ಣ.ಬಿ.ವಡವಟ್