ಈ ಹುಡುಗಿಯ ಹೆಸರು ಸಾಯಿ ಅಕ್ಷತಾ. ಅಪ್ಪಟ ಕನ್ನಡತಿ. ಮೂಲತಃ ಕುಂದಾಪುರದ ಬೆಡಗಿ. ಓದಿದ್ದು, ಬೆಳೆದಿದ್ದೆಲ್ಲವೂ ಮಂಗಳೂರು. ಎಲ್ಲಾ ಸರಿ, ಸಾಯಿ ಅಕ್ಷತಾ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆ ಎಂಬ ಪ್ರಶ್ನೆ ಎದುರಾಗಬಹುದು. ಈ ಹುಡುಗಿಗೆ ಸಿನೆಮಾ ಅಂದರೆ ಎಲ್ಲಿಲ್ಲದ ಪ್ರೀತಿ. ಆ ಪ್ರೀತಿ ಈಕೆಯನ್ನು ಕರೆದುಕೊಂಡು ಹೋಗಿದ್ದು, ತೆಲುಗು ಚಿತ್ರರಂಗಕ್ಕೆ. ಹೌದು, ಸಾಯಿ ಅಕ್ಷತಾ ಮೊದಲು ಶೇಖರಂ ಗಾರಿ ಅಬ್ಟಾಯಿ ಎಂಬ ಚಿತ್ರ ನಿರ್ದೇಶಿಸಿದರು! ಅಷ್ಟೇ ಅಲ್ಲ, ಆ ಚಿತ್ರದ ನಾಯಕಿಯಾಗಿಯೂ ನಟಿಸಿದರು. ಕನ್ನಡದ ಹುಡುಗಿಯೊಬ್ಬಳು ಬೇರೆ ಚಿತ್ರರಂಗಕ್ಕೆ ಹೋಗಿ ನಾಯಕಿಯಾಗುವುದೇ ಸಾಹಸದ ವಿಷಯ. ಅದರಲ್ಲೂ ಸಾಯಿ ಅಕ್ಷತಾ, ನಿರ್ದೇಶಕಿಯಾಗಿಯೂ ಎಂಟ್ರಿಯಾಗಿದ್ದು ವಿಶೇಷ. ಅಲ್ಲಿಂದ ತಮಿಳು ಚಿತ್ರರಂಗಕ್ಕೂ ಕಾಲಿಟ್ಟ ಅಕ್ಷತಾ, ನನ್‌ಬರಳ್ ನರ್ಪಣಿ ಮಂಡ್ರಮ್ ಚಿತ್ರದ ನಾಯಕಿಯೂ ಹೌದು. ಇನ್ನು, ತೆಲುಗಿನಲ್ಲಿ ಈಗ ತೆರೆಗೆ ಸಿದ್ಧವಾಗಿರುವ ಜೆಡಿ ಚಕ್ರವರ್ತಿ ಅಭಿನಯದ ಉಗ್ರಂ ಚಿತ್ರದಲ್ಲೂ ನಟಿಸಿದ್ದಾರೆ. ಈಗ ಇದೇ ಅಕ್ಷತಾ, ಮೊದಲ ಬಾರಿಗೆ ಕನ್ನಡಕ್ಕೆ ಬಂದಿದ್ದಾರೆ. ಪರಸಂಗ ಚಿತ್ರಕ್ಕೆ ಅವರು ನಾಯಕಿ. ಇದು ಅವರ ಮೊದಲ ಕನ್ನಡ ಚಿತ್ರ. ಹಾಗಂತ, ಅವರಿಗೆ ಈ ಹಿಂದೆ ಅವಕಾಶಗಳು ಬಂದಿಲ್ಲವಂತೇನಿಲ್ಲ. ಸಾಕಷ್ಟು ಅವಕಾಶ ಬಂದಿದ್ದರೂ, ಅವರಿಗೆ ಕಥೆ, ಪಾತ್ರಗಳು ಅಷ್ಟಾಗಿ ಹಿಡಿಸಲಿಲ್ಲವಂತೆ. ಪರಸಂಗ ಚಿತ್ರದ ಕಥೆ ಮತ್ತು ಪಾತ್ರದಲ್ಲಿ ನಟನೆಗೆ ಹೆಚ್ಚು ಆದ್ಯತೆ ಇದೆ ಅಂತೆನಿಸಿ, ಆ ಚಿತ್ರ ಒಪ್ಪಿಕೊಂಡಿದ್ದಾರೆ. ಈಗ ಪರಸಂಗ ತೆರೆಗೆ ಬರಲು ಸಜ್ಜಾಗಿದೆ ಮತ್ತು ಆ ಚಿತ್ರವನ್ನು ಎದುರು ನೋಡುತ್ತಿದ್ದಾರೆ ಅಕ್ಷತಾ.
ಎಲ್ಲಾ ಸರಿ, ನಿರ್ದೇಶನವನ್ನೇ ಯಾಕೆ ಆಯ್ಕೆ ಮಾಡಿಕೊಂಡರು? ಈ ಪ್ರಶ್ನೆಗೆ ಉತ್ತರಿಸುವ ಅವರು, ಭವಿಷ್ಯದಲ್ಲಿ ಒಳ್ಳೆಯ ಹೆಸರು ಗಳಿಸಬೇಕು ಎಂಬುದು ಅವರ ಆಸೆಯಂತೆ. ನಾಯಕಿಯಾದರೆ, “ಐದಾರು ವರ್ಷಗಳ ಕಾಲ ಮಾತ್ರ ಉಳಿಯಬಹುದು. ಅದೇ ನಿರ್ದೇಶಕಿಯಾದರೆ, ಅವಕಾಶ ಸಿಕ್ಕಾಗೆಲ್ಲಾ ನಿರ್ದೇಶನ ಮಾಡಿಕೊಂಡಿರಬಹುದು’ ಎಂಬುದು ಅವರ ಮಾತು. ಅಕ್ಷತಾ ಈ ಹಿಂದೆಯೇ, ಕನ್ನಡದಲ್ಲಿ ನಟಿಸುವ ಮನಸ್ಸು ಮಾಡಿದ್ದರು. ಆಗಷ್ಟೇ, ತೆಲುಗು, ತಮಿಳಿನಲ್ಲಿ ಅವಕಾಶಗಳು ಒಂದಾದ ಮೇಲೊಂದು ಬಂದಿದ್ದರಿಂದ ಕನ್ನಡಕ್ಕೆ ಬರುವಾಗ ಸ್ವಲ್ಪ ತಡವಾಯಿತಂತೆ.
ಪರಸಂಗ ಒಳ್ಳೆಯ ಕಥೆ ಮತ್ತು ಪಾತ್ರ ಇರುವ ಚಿತ್ರ. ಜೊತೆಗೊಂದು ಸಂದೇಶವೂ ಇದೆ. ನಾನೊಬ್ಬ ನಿರ್ದೇಶಕಿಯಾಗಿದ್ದರಿಂದ ಕಥೆ ಹೇಗೆ ತೆರೆಯ ಮೇಲೆ ಬರುತ್ತೆ ಎಂಬುದು ಗೊತ್ತಿತ್ತು. ಅಭಿನಯಿಸಲು ಹೆಚ್ಚು ಆದ್ಯತೆ ನೀಡಲಾಗಿದೆ. ನಾನು ಕನ್ನಡದ ಮೊದಲ ಚಿತ್ರ ಮಾಡಲು ಪರಸಂಗ ಸೂಕ್ತ ಆಯ್ಕೆ ಅಂದುಕೊಂಡು ನಟಿಸಿದ್ದೇನೆ. ಸದ್ಯಕ್ಕೆ ಕನ್ನಡದಲ್ಲಿ ಒಂದಷ್ಟು ಕಥೆಗಳು ಬರುತ್ತಿವೆ. ಈಗ ತಮಿಳಿನಲ್ಲಿ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ. ಅತ್ತ, ತೆಲುಗಿನಲ್ಲೂ ಮಾತುಕತೆ ನಡೆಯುತ್ತಿದೆ. ನೋಡಬೇಕು ಕನ್ನಡದಲ್ಲಿ ಇನ್ನೊಂದು ಒಳ್ಳೆಯ ಅವಕಾಶ ಬಂದರೆ ಖಂಡಿತ ಮಿಸ್ ಮಾಡಿಕೊಳ್ಳುವುದಿಲ್ಲ. ನಟನೆ ಮತ್ತು ನಿರ್ದೇಶನ ಈ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತೇನೆ.’ ಎನ್ನುತ್ತಾರೆ ಅಕ್ಷತಾ.
ಎಲ್ಲಾ ಸರಿ, “ಪರಸಂಗ’ ಚಿತ್ರಕ್ಕೆ ಈ ಮೊದಲು ಸುಮಾರು 15 ನಾಯಕಿಯರನ್ನು ಸಂಪರ್ಕಿಸಲಾಗಿದ್ದು, ಅವರು ಮಾಡಲು ಒಪ್ಪದ ಪಾತ್ರವನ್ನು ಅಕ್ಷತಾ ಒಪ್ಪಿದ್ದಾರೆ. ಸದ್ಯ, ಹೈದರಾಬಾದ್‌ನಲ್ಲೇ ವಾಸವಾಗಿರುವ ಅಕ್ಷತಾ, ಕನ್ನಡದಲ್ಲೂ ಒಂದೊಳ್ಳೆಯ ನಿರ್ದೇಶನ ಮಾಡುವ ಯೋಚನೆಯ ಲ್ಲಿದ್ದಾರೆ.